ಜಾಮೀನು ಪ್ರಕ್ರಿಯೆಗೆ ಸುಧಾರಣೆ ಅಗತ್ಯ: ನ್ಯಾ. ಅಬ್ದುಲ್ ನಝೀರ್

Update: 2022-08-13 10:28 GMT

ಮಂಗಳೂರು, ಆ.13: ಜಾಮೀನು ಪ್ರಕ್ರಿಯೆಯಲ್ಲಿನ ಲೋಪಗಳನ್ನು ನಿವಾರಿಸಲು ಅಪರಾಧ ನ್ಯಾಯಪದ್ಧತಿಯಲ್ಲಿ ಸುಧಾರಣೆಗಳನ್ನು ತರುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ನ್ಯಾ.ಅಬ್ದುಲ್ ನಝೀರ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ರಜತ ಸಂಭ್ರಮದ ಅಂಗವಾಗಿ ಶನಿವಾರ ಆಯೋಜಿಸಿದ್ದ ದತ್ತಿ ಉಪನ್ಯಾಸದಲ್ಲಿ ‘ಕ್ರಿಮಿನಲ್ ನ್ಯಾಯಪದ್ಧತಿಯಲ್ಲಿ ಸುಧಾರಣೆಗಳ ಅಗತ್ಯತೆ’ ಎಂಬ ವಿಷಯದ ಕುರಿತಂತೆ ನ್ಯಾ. ಅಬ್ದುಲ್ ನಝೀರ್ ಮಾತನಾಡುತ್ತಿದ್ದರು.

ಬಹಳಷ್ಟು ಪ್ರಕರಣಗಳಲ್ಲಿ ಆರೋಪಿಗಳು ಜಾಮೀನು ಪಡೆಯಲು ಹಲವಾರು ತಿಂಗಳು, ವರ್ಷ ಕಾಯಬೇಕಾಗುತ್ತದೆ ಮತ್ತು ಇದೊಂದು ತ್ರಾಸದಾಯಕ ಕಾರ್ಯವಾಗಿದೆ. ಜಾಮೀನು ಪ್ರಕ್ರಿಯೆ ಲೋಪಗಳ ಕುರಿತಂತೆ ಹಲವಾರು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ಹಲವಾರು ಮಾರ್ಗಸೂಚಿಗಳು ಪಾಲನೆಯಾಗುತ್ತಿಲ್ಲ. ನೇಶನಲ್ ಲಾ ಯುನಿವರ್ಸಿಟಿ ನಡೆಸಿದ್ದ ಸಮೀಕ್ಷೆಯೊಂದರ ಪ್ರಕಾರ ಜಾಮೀನು ದೊರೆತವರಲ್ಲಿ ಶೇ.14 ಮಂದಿಗೆ ಇದರಲ್ಲಿ ವಿಧಿಸಿರುವ ಕೆಲವು ಶರ್ತಗಳನ್ನು ಪೊರೈಸಲಾಗದೆ ಜೈಲ್‌ನಲೇ ಉಳಿದು ಬಿಡುತ್ತಾರೆ. ಶೇ.35 ಮಂದಿಗೆ ಇದನ್ನು ಪೂರೈಸಲು ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ ಎಂದವರು ಹೇಳಿದರು.

ಇದನ್ನೂ ಓದಿ: ರಾಜಕೀಯದ ನಂತರ ನಾಗರಿಕ ಸೇವೆಗೆ ಹಿಂತಿರುಗಿದ ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫೈಸಲ್‌ಗೆ ಹೊಸ ಹುದ್ದೆ

ಪ್ರಸ್ತುತ ಅಪರಾಧ ಪ್ರಕರಣಗಳಲ್ಲಿ ಶೇ.90 ಪ್ರಕರಣಗಳಲ್ಲಿ ಆರೋಪಿಗಳು ದೋಷಮುಕ್ತರಾಗುತ್ತಾರೆ. ಪ್ರಕರಣ ಇತ್ಯರ್ಥಕ್ಕೆ ಸುಮಾರು 10 ರಿಂದ 15 ವರ್ಷಗಳು ಬೇಕಾಗುತ್ತವೆ. ಇದರಲ್ಲಿ ಬಹಳಷ್ಟು ವರ್ಷಗಳನ್ನು ಆರೋಪಿಗಳು ವಿಚಾರಾಣಾಧೀನ ಕೈದಿಗಳಾಗಿ ಜೈಲಿನಲ್ಲಿ ಕಳೆದಿರುತ್ತಾರೆ. ಹೊರಗೆ ಬಂದ ಬಳಿಕವೂ ಬಹಳಷ್ಟು ವರ್ಷ ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ. ಪ್ರಕ್ರಿಯೆಗಳು ಒಂದು ಶಿಕ್ಷಯಾಗಬಾರದು ಎಂದು ನ್ಯಾ. ಅಬ್ದುಲ್ ನಝೀರ್ ಹೇಳಿದರು.

ಕಾನೂನು ಶಿಕ್ಷಣ ಉದಾತ್ತವಾದುದು: ಡಾ.ಡಿ.ವೀರೇಂದ್ರ ಹೆಗ್ಗಡೆ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್‌ಡಿಎಂಇ ಸೊಸೈಟಿ ಅಧ್ಯಕ್ಷರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ ಕಾನೂನು ಶಿಕ್ಷಣ ಉದಾತ್ತವಾದುದು ಎಂದರು.

ಎಸ್‌ಡಿಎಂ ಕಾನೂನು ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಗುರುತಿಸಿಕೊಂಡಿದೆ. ಇಲ್ಲಿ ವ್ಯಾಸಂಗ ಮಾಡಿರುವವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಂಡಿದ್ದಾರೆ ಎಂದವರು ಹೇಳಿದರು.

ಎಸ್‌ಡಿಎಂಇ ಸೊಸೈಟಿ ಉಜಿರೆ ಕಾರ್ಯದರ್ಶಿ ಹಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ ಅತಿಥಿಯಾಗಿದ್ದರು. ಇದೇ ಸಂದರ್ಭದಲ್ಲಿ ಸಾಧಕ ಹಳೇ ವಿದ್ಯಾರ್ಥಿಗಳು, ಪಿಎಚ್‌ಡಿ ಪಡೆದವರನ್ನು, ರ್ಯಾಂಕ್‌ ವಿಜೇತರನ್ನು ಸನ್ಮಾನಿಸಲಾಯಿತು.

ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ್ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಆರ್.ಬಳ್ಳಾಲ್‌ ದತ್ತಿನಿಧಿ ಉಪನ್ಯಾಸದ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ಉದಯ ಪ್ರಕಾಶ್ ಮುಳಿಯ ವಂದಿಸಿದರು.

ಇದೇವೇಳೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಡಾ.ವೀರೆಂದ್ರ ಹೆಗ್ಗಡೆ ಅವರನ್ನು ಎಸ್‌ಡಿಎಂ ಕಾನೂನು ಕಾಲೇಜು, ಹಳೆ ವಿದ್ಯಾರ್ಥಿ ಸಂಘ, ಕಾಲೇಜ್ ಅ್ ಬಿಸಿನೆಸ್ ಮ್ಯಾನೇಜ್‌ಮೆಂಟ್, ಮಂಗಳೂರು ಬಾರ್ ಆಸೋಸಿಯೇಶನ್ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಗೌರವಿಸಲಾಯಿತು. ನೆಲ್ವಿಟಾ ಕ್ಲಿಯೊನಾ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News