ಆರೆಸ್ಸೆಸ್‌ಗೆ ಕಾಂಗ್ರೆಸ್ ರಾಷ್ಟ್ರಭಕ್ತಿ ಕಲಿಸುವ ಅಗತ್ಯವಿಲ್ಲ: ಶೋಭಾ ಕರಂದ್ಲಾಜೆ

Update: 2022-08-13 12:16 GMT
ಶೋಭಾ ಕರಂದ್ಲಾಜೆ

ಉಡುಪಿ, ಆ.13: ಆರೆಸ್ಸೆಸ್‌ ಬಗ್ಗೆ ಕಾಂಗ್ರೆಸ್ ಸದಾ ಕ್ಷುಲ್ಲಕ ಮಾತನಾಡುತ್ತದೆ. ಆರೆಸ್ಸೆಸ್‌ಗೆ ರಾಷ್ಟ್ರಧ್ವಜ ಡಿಪಿ ಹಾಕಲು ಸವಾಲು ಹಾಕುತ್ತಾರೆ. ಆರೆಸ್ಸೆಸ್‌ನ ಮೈ ಮನಸ್ಸುಗಳಲ್ಲಿ ರಾಷ್ಟ್ರಪ್ರೇಮ ಇದೆ. ಆರೆಸ್ಸೆಸ್‌ಗೆ ಕಾಂಗ್ರೆಸ್ ರಾಷ್ಟ್ರಭಕ್ತಿ ಕಲಿಸುವ ಅಗತ್ಯವಿಲ್ಲ. ಚೀನಾ, ಪಾಕಿಸ್ತಾನದ ಜೊತೆ ಕೈಜೋಡಿಸಿದವರು ನಮಗೆ ಪಾಠ ಕಲಿಸುವ ಅಗತ್ಯವಿಲ್ಲ. ಇಟಲಿ, ಯುರೋಪಿಗೆ ಹೋಗಿ ಭಾರತವನ್ನು ಅವಹೇಳನ ಮಾಡಿದವರಿಂದ ನಾವು ರಾಷ್ಟ್ರಭಕ್ತಿ ಕಲಿಯ ಬೇಕಾಗಿಲ್ಲ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯದ ಜನಾಂದೋಲನಕ್ಕಾಗಿ ಕಾಂಗ್ರೆಸ್ ರಚನೆಯಾಗಿತ್ತು. ಆಂದೋಲನಕ್ಕಾಗಿಯೇ ರೂಪಗೊಂಡ ಕಾಂಗ್ರೆಸನ್ನು ವಿಸರ್ಜಿಸಲು ಗಾಂಧೀಜಿ ಹೇಳಿದ್ದರು. ಅಜ್ಜ ನೆಟ್ಟ ಆಲದ ಮರಕ್ಕೆ ಕಾಂಗ್ರೆಸ್ ನಾಯಕರು ನೇತು ಹಾಕಿಕೊಂಡಿದ್ದಾರೆ. ಆರೆಸ್ಸೆಸ್‌ ಮೇಲೆ ಕಾಂಗ್ರೆಸ್ ಕಾನೂನಾತ್ಮಕ ಕ್ರಮ ಕೈಗೊಂಡು ವಿಫಲವಾಗಿದ್ದಾರೆ. ಆರೆಸ್ಸೆಸ್‌ ಇರುವುದೇ ಈ ರಾಷ್ಟ್ರದ ರಕ್ಷಣೆಗಾಗಿ, ಉಳಿವಿಗಾಗಿ. ದೇಶಭಕ್ತಿ ಪ್ರೇರೇಪಿಸುವುದೇ ಆರೆಸ್ಸೆಸ್‌ ಉದ್ದೇಶ ಎಂದರು.

ಪ್ರವೀಣ್ ನೆಟ್ಟಾರು ಯಾವುದೇ ವಿವಾದಗಳಲ್ಲಿದ ವ್ಯಕ್ತಿ. ಹಿಂದೂ ಯುವಕರ ಹತ್ಯೆ ಮಾಡುವವರ ಮಾನಸಿಕತೆ ಏನೆಂದೇ ಅರ್ಥವಾಗುತ್ತಿಲ್ಲ. ಪ್ರವೀಣ್‌ನನ್ನು ಹತ್ಯೆ ಮಾಡಿದವರಿಗೆ ಉಗ್ರ ಶಿಕ್ಷೆ ಆಗಬೇಕು. ಪ್ರವೀಣ್ ಕೊಲೆಯ ಹಿಂದಿನ ಶಕ್ತಿ ಯಾವುದು, ಫೈನಾನ್ಸ್ ಮಾಡಿದವರು ಯಾರು, ಕುಮ್ಮಕ್ಕು ಕೊಟ್ಟವರು ಯಾರು, ಆಶ್ರಯ ಕೊಟ್ಟವರು ಯಾರು ಎಂಬ ಎಲ್ಲಾ ವಿಚಾರವನ್ನು ಎನ್‌ಐಎ ತನಿಖೆ ಮಾಡುತ್ತದೆ ಎಂದು ಹೇಳಿದರು.

ಕೇವಲ ಕೊಲೆ ಆರೋಪಿಗಳಲ್ಲ ಎಲ್ಲರ ಹಿಂದೆ ಕೂಡ ಎನ್‌ಐಎ ಬಿದ್ದಿದೆ. ಮುಂದೆ ಇಂತಹ ಘಟನೆ ನಡೆಯದಂತೆ ಭಯ ಹುಟ್ಟಿಸಬೇಕು. ಯಾವುದೇ ಎರಡು ತೊಡರು ಬಂದರೂ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಕೇಂದ್ರ ಗೃಹ ಸಚಿವರಲ್ಲಿ ಕೇಳಿದ್ದೇನೆ. ನನ್ನ ಬೇಡಿಕೆಗೆ ಗೃಹ ಸಚಿವ ಅಮಿತ್ ಶಾ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.

ತ್ರಿವರ್ಣ ಧ್ವಜ ಒಂದು ಧರ್ಮದ ಸಂಕೇತವಲ್ಲ. ಜಾತಿ ಧರ್ಮ ಪಕ್ಷದ ಬಂಧನಗಳನ್ನು ಹೊರತುಪಡಿಸಿ ಅಮೃತ ಮಹೋತ್ಸವ ನಡೆಯುವ ವಿಶ್ವಾಸವಿದೆ. ರಾಷ್ಟ್ರಧ್ವಜ ಹಾರಿಸುವ ವಿಚಾರದಲ್ಲಿ ಟೀಕಿಸುವವರ ಮನಸ್ಸು ಕಲುಷಿಶಿತವಾಗಿದೆ. ಸ್ವಾತಂತ್ರ್ಯಕ್ಕಾಗಿ ಮಡಿದವರು ಮತ್ತು ದೇಶದ ಗಡಿ ಕಾಯುತ್ತಿರುವ ಯೋಧರಿಗಾಗಿ ತಿರಂಗ ಹಾರಿಸಿ, ರಾಜಕೀಯ ಮಾತುಗಳು ರಾಷ್ಟ್ರಧ್ವಜದ ವಿಚಾರದಲ್ಲಿ ಬೇಡ ಎಂದು ಅವರು ಹೇಳಿದರು.

‘ಪರೇಶ್ ಮೇಸ್ತಾ ಆರೋಪಿಗಳಿಗೆ ಬಿಜೆಪಿ ಮಣೆ ಹಾಕಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆ ನೋಡಿದ್ದೇನೆ. ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ಸರಕಾರ ಗಮನ ಹರಿಸಿ ಕ್ರಮ ಜರಗಿಸಬೇಕು. ಪರೇಶ್ ಮೆಸ್ತನ ಸಾವಿನ ಹಿನ್ನೆಲೆಯಲ್ಲಿ ನಾವೆಲ್ಲರೂ ಹೋರಾಟ ಮಾಡಿದ್ದೇವೆ. ಪರೇಶ್ ಮೇಸ್ತ ಕುಟುಂಬ ಮತ್ತು ನಮ್ಮ ವಿಚಾರಧಾರೆಗೆ ಘಾಸಿಯಾಗುವ ಬೆಳವಣಿಗೆ ನಡೆಯಬಾರದು. ತಪ್ಪಾಗಿದ್ದರೆ ಅದು ಸರಿಪಡಿಸ ಬೇಕು ಮತ್ತು ತನಿಖೆಯಾಗಬೇಕು’
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News