ನುಲಿಯ ಚಂದಯ್ಯರ ವಚನಗಳು ಸರ್ವಕಾಲಕ್ಕೂ ಪ್ರಸ್ತುತ: ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್

Update: 2022-08-13 12:50 GMT

ಉಡುಪಿ, ಆ.13: ನುಲಿಯ ಚಂದಯ್ಯ ಅವರ ವಚನಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಅದನ್ನು ಎಲ್ಲರೂ ಪಾಲಿಸಬೇಕು. ನುಲಿಯ ಚಂದಯ್ಯರಂತೆ ನಾವೂ ನಮ್ಮ ಕರ್ತವ್ಯಗಳನ್ನು ಅರಿತು ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ನಡೆದ  ನುಲಿಯ ಚಂದಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

12ನೇ ಶತಮಾನ ವಚನ ಸಾಹಿತ್ಯ, ವೈಚಾರಿಕ ಕ್ರಾಂತಿಯ ಮೂಲಕ ಸಮಾಜಕ್ಕೆ ಹೊಸ ತಿರುವು ನೀಡಿದ್ದು, ವಚನಕಾರರಾದ ಬಸವಣ್ಣ, ಚನ್ನಬಸವಣ್ಣ, ಅಲ್ಲಮ್ಮ ಪ್ರಭು, ಅಕ್ಕಮಹಾದೇವಿ ಮುಂತಾದ ಪ್ರಸಿದ್ಧ ವಚನಕಾರರು ತಮ್ಮ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದ್ದಾರೆ. ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತ್ರಿಪದಿಗಳ ಮೂಲಕ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅಂತಹ ಶ್ರೇಷ್ಟ ವಚನಕಾರರಲ್ಲಿ ನುಲಿಯ ಚಂದಯ್ಯ ಕೂಡ ಕಾಯಕ ನಿಷ್ಟೆಯನ್ನು ಹೊಂದಿದವರಾಗಿದ್ದು, ಬಸವಣ್ಣನವರ ನೂತನ ವಿಚಾರಧಾರೆಗೆ, ಚಿಂತನೆಗೆ ಆರ್ಕಷಿತರಾಗಿ ಕಲ್ಯಾಣಕ್ಕೆ ಬಂದು ಶ್ರೇಷ್ಠ ಕಾಯಕಜೀವಿ ವಚನಕಾರರೆನಿಸಿ ಕೊಂಡಿದ್ದಾರೆ ಎಂದರು.

ಅರಣ್ಯದಲ್ಲಿ ಬೆಳೆದ ಹುಲ್ಲಿನಿಂದ ಹಗ್ಗವನ್ನು ಹೊಸೆದು ಮಾರಿ ಬಂದ ಹಣದಿಂದ ಜೀವನ ನಡೆಸುತ್ತಿದ್ದ ನುಲಿಯ ಚಂದಯ್ಯನವರ ಅನೇಕ ವಚನ ಗಳನ್ನು ವಚನ ಸಾಹಿತ್ಯದ ಪಿತಾಮಹರಾದ ಡಾ.ಫ.ಗುಹಳಕಟ್ಟಿ ಅವರು ಸಂಗ್ರಹಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೇಂಪೇಗೌಡ, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ರವೀಂದ್ರ, ಪರೀಕ್ಷಾರ್ಥಿ ಅಧಿಕಾರಿ ನೀಲಾಬಾಯಿ ಲಮಾಣಿ, ಉಪ ತಹಶೀಲ್ದಾರ್  ಸಂಪತ್ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News