ಆ.23, 25ರಂದು ಮೋಟಾರೀಕೃತ ನಾಡದೋಣಿಗಳ ಭೌತಿಕ ತಪಾಸಣೆ

Update: 2022-08-13 12:53 GMT
ಸಾಂದರ್ಭಿಕ ಚಿತ್ರ

ಉಡುಪಿ : ಮೀನುಗಾರಿಕಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೋಟಾರೀಕೃತ ಮೀನುಗಾರಿಕೆ ದೋಣಿಗಳಿಗೆ ಸೀಮೆಎಣ್ಣೆ ಪಡೆಯಲು ಪರ್ಮಿಟ್‌ಗಾಗಿ ದೋಣಿ ಮಾಲಕರು ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಯಿಂದ ದೋಣಿಗಳ ಭೌತಿಕ ಪರಿಶೀಲನೆ ನಡೆಸಿ, ಪರವಾನಿಗೆಯನ್ನು ದೋಣಿ ಮಾಲಕರಿಗೆ ನೀಡಲಾಗುತ್ತದೆ. 

 ಮೋಟಾರೀಕೃತ ನಾಡದೋಣಿಗಳ ಮೀನುಗಾರಿಕಾ ಸೀಮೆಎಣ್ಣೆ ರಹದಾರಿ ನವೀಕರಣ ಹಾಗೂ ಹೊಸದಾಗಿರುವ ದೋಣಿಗಳಿಗೆ ಸೀಮೆಎಣ್ಣೆ ಪೂರೈಸುವ ಸಂಬಂಧ ಪರವಾನಿಗೆಯನ್ನು ನೀಡಲು ಅವರ ದೋಣಿಗಳನ್ನು ಭೌತಿಕ ತಪಾಸಣೆಗೆ ಒಳಪಡಿಸಲು ಸಮಯ ನಿಗದಿ ಪಡಿಸಲಾಗಿದ್ದು, ಆಗಸ್ಟ್ ೨೩ರಂದು ಬೈಂದೂರು ತಾಲೂಕಿನ ಅಳ್ವೆಗದ್ದೆಯ ಮೀನುಗಾರಿಕಾ ಜೆಟ್ಟಿ, ಕಳಿಹಿತ್ಲುವಿನ ಮೀನುಗಾರಿಕಾ ಹರಾಜು ಪ್ರಾಂಗಣ, ಮಡಿಕಲ್‌ನ ಮಹೇಶ್ವರ ದೇವಸ್ಥಾನ, ಪಡುವರಿ/ತಾರಾಪತಿಯ ಶ್ರೀರಾಮ ಮಂದಿರ, ಕೊಡೇರಿ ಬಂದರು, ಮರವಂತೆ ಬಂದರು, ಕಂಚುಕೋಡು ಮಡಿ, ಗಂಗೊಳ್ಳಿ ಲೈಟ್‌ಹೌಸ್, ಗಂಗೊಳ್ಳಿ ಬಂದರು, ಮತ್ತು ಕೋಡಿಕಿನಾರೆ.

ಆ. ೨೫ರಂದು ಪಲಿಮಾರು ಮೀನುಗಾರರ ಸಭಾಭವನ ಬಳಿ, ಉಚ್ಚಿಲ ಸುಬಾಷ್‌ರೋಡ್ ಬೀಚ್ ಹತ್ತಿರ,  ಮಲ್ಪೆ-ಪಡುಕೆರೆ ಬೋಟ್‌ಕಚ್ಚೇರಿ ಹತ್ತಿರ, ಮಲ್ಪೆ-ಕೊಳ ಹನುಮಾನ್ ವಿಠೋಭ ಮಂದಿರ ಮುಂಭಾಗ, ಸಾಸ್ತಾನ ಕೋಡಿ ಜೆಟ್ಟಿ, ಕಾಪು ಲೈಟ್‌ಹೌಸ್, ಎರ್ಮಾಳ್ (ಉಚ್ಚಿಲ ಅಥವಾ ಕಾಪು) ಹಾಗೂ ಕೋಡಿಬೆಂಗ್ರೆ ಸ್ಥಳಗಳಲ್ಲಿ ಮೀನುಗಾರಿಕಾ ದೋಣಿಗಳ ತಪಾಸಣೆ ಕೈಗೊಳ್ಳಲಾಗುವುದು.

ದೋಣಿ ಮಾಲಕರು ತಮ್ಮ ದೋಣಿಗಳನ್ನು ಆರ್.ಸಿ ಪ್ರತಿಯೊಂದಿಗೆ ನಿಗದಿ ಪಡಿಸಿದ ಸ್ಥಳದಲ್ಲಿ ಹಾಜರುಪಡಿಸಿ ನೋಂದಣಿ ಪತ್ರದಲ್ಲಿರುವಂತೆ ನೋಂದಣಿ ನಂಬರ್ ಮತ್ತು ದೋಣಿ ಹೆಸರು, ದೋಣಿ ಮೇಲೆ ಪೈಂಟ್ ಮಾಡಿ ಪ್ರದರ್ಶಿಸಬೇಕು. ಸ್ಟಿಕ್ಕರ್ ಅಳವಡಿಸಿರಬಾರದು ಹಾಗೂ ಇಂಜಿನ್‌ನ್ನು ತಪಾಸಣೆಗೆ ಒಳಪಡಿಸಬೇಕು.

ಪರವಾನಿಗೆ ಪಡೆದ ದೋಣಿ ಮಾಲಕರು ಸೇವಾಸಿಂಧು ಪೋರ್ಟಲ್‌ನಲ್ಲಿ ಸೀಮೆಎಣ್ಣೆ ಪರ್ಮಿಟ್‌ಗಾಗಿ ಅರ್ಜಿ ಸಲ್ಲಿಸಬಹುದು ಎಂದು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News