ಕೇವಲ ತ್ರಿವರ್ಣ ಧ್ವಜ ಹಾರಿಸಿದರೆ ನೀವು ದೇಶಭಕ್ತರಾಗುವುದಿಲ್ಲ: ಉದ್ಧವ್‌ ಠಾಕ್ರೆ ಹೇಳಿಕೆ

Update: 2022-08-13 17:23 GMT
Photo:PTI

ಮುಂಬೈ: "ಕೇವಲ ತ್ರಿವರ್ಣ ಧ್ವಜವನ್ನು ಹಾಕುವುದು ನಿಮ್ಮನ್ನು ದೇಶಭಕ್ತರನ್ನಾಗಿ ಮಾಡುವುದಿಲ್ಲ" ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ 'ಹರ್ ಘರ್ ತಿರಂಗ' ಅಭಿಯಾನದ ಕುರಿತು ಹೇಳಿದ್ದಾರೆ. 

"ಆದರೆ, 75 ವರ್ಷಗಳ (ಸ್ವಾತಂತ್ರ್ಯದ) ನಂತರ ಪ್ರಜಾಪ್ರಭುತ್ವ ಎಷ್ಟು ಉಳಿದಿದೆ ಎಂದು ನಾವು ಯೋಚಿಸಬೇಕಾಗಿದೆ, ಇದು 'ಆಜಾದಿ ಕಾ ಅಮೃತ್ ಮಹೋತ್ಸವʼದ ಭಾಗವಾಗಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ” ಎಂದು ಠಾಕ್ರೆ ಹೇಳಿದ್ದಾರೆ. 

ತಮ್ಮ ತಂದೆ ಬಾಳ್ ಠಾಕ್ರೆ ಅವರು 1960 ರಲ್ಲಿ ಆರಂಭಿಸಿದ ಕಾರ್ಟೂನ್ ನಿಯತಕಾಲಿಕವಾದ 'ಮಾರ್ಮಿಕ್' ನ 62 ನೇ ಸಂಸ್ಥಾಪನಾ ದಿನದಂದು ವೀಡಿಯೊ ಲಿಂಕ್ ಮೂಲಕ ಮಾತನಾಡಿದ ಅವರು, "ಇತ್ತೀಚಿನ ದಿನಗಳಲ್ಲಿ ಮಾಯ್-ಬಾಪ್ (ಕೇಂದ್ರ) ಸರ್ಕಾರವು ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಸ್ಥಾಪಿಸಲು ಕೇಳಿದೆ, ಆದರೆ ಯಾರೋ ನನಗೆ ಅದರ ಬಗ್ಗೆ ಚಿತ್ರವನ್ನು ತೋರಿಸಿದ್ದಾರೆ" ಎಂದು ಬಾವುಟ ಹಾರಿಸಲು ಮನೆಯಿಲ್ಲದವರ ಬಗೆಗಿನ ಕಾರ್ಟೂನ್‌ ಒಂದನ್ನು ಉಲ್ಲೇಖಿಸಿದ ಹೇಳಿದ್ದಾರೆ.

"ಇಂದಿಗೂ ಚೀನೀಯರು ಅರುಣಾಚಲವನ್ನು ಪ್ರವೇಶಿಸುತ್ತಿದ್ದಾರೆ. ನಾವು ನಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾಕಿದರೆ ಅವರು ಹಿಂತಿರುಗುವುದಿಲ್ಲ. ತ್ರಿವರ್ಣ ನಮ್ಮ ಹೃದಯದಲ್ಲಿಯೂ ಇರಬೇಕು." ಎಂದು ಠಾಕ್ರೆ ಕೇಂದ್ರವನ್ನು ಕುಟುಕಿದ್ದಾರೆ. 

ಸಶಸ್ತ್ರ ಪಡೆಗಳಿಗೆ ಬಜೆಟ್ ಕಡಿತವನ್ನು ಬಿಜೆಪಿ ಬಯಸುತ್ತಿದೆ ಎಂದು ಆರೋಪಿಸಿದ ಅವರು, "ತ್ರಿವರ್ಣ ಧ್ವಜವನ್ನು ಡಿಪಿ ಹಾಕಲು ಬಯಸಿ, ಆದರೆ ದೇಶವನ್ನು ರಕ್ಷಿಸಲು ಮನೆ ಬಿಟ್ಟು ಗಡಿಯಲ್ಲಿ ನಿಂತಿರುವವರ ಬಜೆಟ್ ಅನ್ನು ಕಡಿತಗೊಳಿಸುವ ಬಗ್ಗೆ ಮಾತನಾಡುವುದು ದುರದೃಷ್ಟಕರ. ನೀವು ಸೈನಿಕರನ್ನು ಕಡಿಮೆ ಮಾಡಿದರೆ, ನೀವು ಯಾರಿಗೆ ಆಯುಧಗಳನ್ನು ಕೊಡುತ್ತೀರಿ?” ಎಂದು ಅವರು ಪ್ರಶ್ನಿಸಿದ್ದಾರೆ. 

 ಇತ್ತೀಚೆಗೆ ಬಿಜೆಪಿ ಬೆಂಬಲಿತ ಸೇನಾ ಬಂಡಾಯ ಶಾಸಕರಿಂದ ತಮ್ಮ ಸರ್ಕಾರವನ್ನು ಹೇಗೆ ಪದಚ್ಯುತಗೊಳಿಸಲಾಯಿತು ಎಂಬುದನ್ನು ಉಲ್ಲೇಖಿಸಿದ ಠಾಕ್ರೆ, "ಸೇನಾ ನೇಮಕಾತಿಗೆ ನಿಮ್ಮ ಬಳಿ ಹಣವಿಲ್ಲ, ಆದರೆ ರಾಜ್ಯ ಸರ್ಕಾರವನ್ನು ಉರುಳಿಸಲು ನಿಮ್ಮ ಬಳಿ ಹಣವಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News