ತನ್ನ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಪ್ರಕರಣದ ವಿಚಾರಣೆ ದಿಲ್ಲಿಗೆ ವರ್ಗಾಯಿಸಲು ಸುಪ್ರೀಂಗೆ ಸಂತ್ತಸ್ತೆಯ ಮನವಿ

Update: 2022-08-13 17:33 GMT

ಹೊಸದಿಲ್ಲಿ, ಆ.13:  ಉತ್ತರಪ್ರದೇಶದ  ಉನ್ನಾವೊ ಜಿಲ್ಲೆಯಲ್ಲಿ ತನ್ನ ವಿರುದ್ಧ  ದಾಖಲಿಸಲಾದ ಕ್ರಿಮಿನಲ್ ಪ್ರಕರಣವನ್ನು ದಿಲ್ಲಿಗೆ ವರ್ಗಾಯಿಸುವಂತೆ ಕೋರಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯು  ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಸಂತ್ರಸ್ತೆಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಶುಭನಾಮ್ ಸಿಂಗ್‌ನ ತಂದೆ  ಎಫ್‌ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಉನ್ನಾವೊ ಎಸಿಜೆಎಂ ನ್ಯಾಯಾಲಯವು ತನ್ನ ವಿರುದ್ಧ ಜಾಮೀನುರಹಿತ ಬಂಧನ ಆದೇಶವನ್ನು ಹೊರಡಿಸಿದೆಯೆಂದು ಸಂತ್ರಸ್ತೆಉ ಉನ್ನತ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.

ದೂರುದಾರಳು ತಾನು 17 ವರ್ಷ ವಯಸ್ಸಿನ ಬಾಲಕಿಯೆಂದು ಹೇಳಿಕೊಂಡು ಪೊಲೀಸರಿಗೆ ಒದಗಿಸಿದ ವಯಸ್ಸಿನ ದಾಖಲೆಪತ್ರವು ನಕಲಿಯೆಂದು ಶುಭನಾಮ್ ಸಿಂಗ್‌ನ ತಂದೆ ಆರೋಪಿಸಿ, ಆಕೆಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.  ತನ್ನನ್ನು ಬೆದರಿಸುವ, ಮೌನವಾಗಿಸುವ ಹಾಗೂ ಕಿರುಕುಳ ನೀಡುವ ಸ್ಪಷ್ಟವಾದ ಉದ್ದೇಶದೊಂದಿಗೆ ಉನ್ನಾವೊ ನ್ಯಾಯಾಲಯದಲ್ಲಿ ತನ್ನ ವಿರುದ್ಧ ಪ್ರಕರಣವನ್ನು ಆರೋಪಿಯ ತಂದೆ ದಾಖಲಿಸಿದ್ದಾರೆಂದು ಆಕೆ ಅರ್ಜಿಯಲ್ಲಿ ಆರೋಪಿಸಿದ್ದಾಳೆ ಹಾಗೂ ಉನ್ನಾವೊದಲ್ಲಿ ತನ್ನ ಪ್ರಾಣಕ್ಕೆ ತೀವ್ರ  ಬೆದರಿಕೆಯಿದೆಯೆಂದು ತಿಳಿಸಿದ್ದಾಳೆ.

ನ್ಯಾಯಾಂಗ ಪ್ರಕ್ರಿಯೆಯು ದಬ್ಬಾಳಿಕೆ ಹಾಗೂ ಕಿರುಕುಳದ ಸಾಧನವಾಗುವುದನ್ನು ತಡೆಗಟ್ಟುವ  ಉದ್ದೇಶದಿಂದ ಉನ್ನಾವೊದಲ್ಲಿ ತನ್ನ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಪ್ರಕರಣವನ್ನು  ದಿಲ್ಲಿಗೆ ವರ್ಗಾಯಿಸಬೇಕು  ಹಾಗೂ ಇದರಿಂದ ಪ್ರತಿವಾದಿಗಳಿಗೆ ಯಾವುದೇ ರೀತಿಯಲ್ಲಿ ಅನನುಕೂಲವಾಗುವುದಿಲ್ಲವೆಂದು ಎಂದು ಸಂತ್ರಸ್ತೆ ಅರ್ಜಿಯಲ್ಲಿ ತಿಳಿಸಿದ್ದಾರೆ. ಕಾನ್ಪುರದಲ್ಲಿ ತನಗೆ   ಉದ್ಯೋಗ ದೊರಕಿಸಿಕೊಡುವ ಅಮಿಷವೊಡ್ಡಿ ಶುಭನಾಮ್ ಸಿಂಗ್ ಹಾಗೂ ಆತನ ಸಂಗಡಿಗರು 2017ರ ಜೂನ್ 11ರಂದು ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಸಂತ್ರಸ್ತೆಯು ದೂರಿನಲ್ಲಿ ಆರೋಪಿಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News