ಸದೃಢ ಭಾರತಕ್ಕಾಗಿ ಸಮೃದ್ಧ ಕರ್ನಾಟಕವನ್ನು ಕಟ್ಟುವ ಅಮೃತ ಸಂಕಲ್ಪ ಮಾಡೋಣ: ಸಿಎಂ ಬಸವರಾಜ ಬೊಮ್ಮಾಯಿ

Update: 2022-08-15 05:01 GMT

ಬೆಂಗಳೂರು, ಆ. 15: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಸ್ವಚ್ಛತೆ, ಪೌಷ್ಟಿಕತೆ ಕಾಪಾಡಲು, ರೈತರು, ಶ್ರಮಿಕರ ಅಭ್ಯುದಯಕ್ಕಾಗಿ ಹಾಗೂ ಕೆಚ್ಚೆದೆಯ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಕೆಲವು ಕೊಡುಗೆಗಳನ್ನು ನೀಡಲು ಸರಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಸೋಮವಾರ ಇಲ್ಲಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರೆವೇರಿಸಿ ರಾಜ್ಯವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೇ.100 ರಷ್ಟು ಶೌಚಾಲಯಗಳ ನಿರ್ಮಾಣವನ್ನು 250 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಆ ಮೂಲಕ ಶಾಲೆ, ಕಾಲೇಜುಗಳಲ್ಲಿ ಸ್ವಚ್ಛ-ಆರೋಗ್ಯಕರ ವಾತಾವರಣ ನಿರ್ಮಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲ ಕರ್ಮಿಗಳಿಗೆ ತಲಾ 50 ಸಾವಿರ ರೂ. ಗಳ ವರೆಗೆ ಸಾಲ-ಸಹಾಯಧನ (Loan cum subsidy) ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಪ್ರಕಟಿಸಿದರು.

ರೈತರ ಮಕ್ಕಳಿಗೆ ಜಾರಿಗೊಳಿಸಿರುವ ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯವನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ನುಡಿದರು.

ಇದಲ್ಲದೆ ಭೂ ರಹಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಆದ್ಯತೆಯಾಗಿರಿಸಿಕೊಂಡು, ಅಗತ್ಯವನ್ನಾಧರಿಸಿ, ರಾಜ್ಯದಲ್ಲಿ ಹೊಸದಾಗಿ 4050 ಅಂಗನವಾಡಿ ತೆರೆಯಲಾಗುವುದು. ಆ ಮೂಲಕ 16 ಲಕ್ಷ ಕುಟುಂಬಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಕಲ್ಪಿಸಲಾಗುವುದು ಎಂದರು.

ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಕಾರ್ಯನಿರ್ವಹಿಸುತ್ತಾರೆ. ರಾಜ್ಯದ ಸೈನಿಕರು ಕರ್ತವ್ಯ ನಿರತರಾಗಿದ್ದಾಗ ಮೃತಪಟ್ಟರೆ, ಅವರ ಕುಟುಂಬದ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲಾಗುವುದು ಎಂದು ತಿಳಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ದೇಶದ ಮುನ್ನಡೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇಲ್ಲಿ ನಿಂತು ನಾವು ನಡೆದು ಬಂದ ದಾರಿಯನ್ನು ಅವಲೋಕಿಸುವುದರೊಂದಿಗೆ, ಮುಂದೆ ನಾವೇನು ಮಾಡಬೇಕು ಎಂಬುದನ್ನು ನಿರ್ಧರಿಸಲೂ ಇದು ಸಕಾಲ ಎಂದರು.

ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಅಂತಿಮ ಗುರಿ, ಜನ ಹಿತ ಸಾಧನೆ. ಪ್ರಧಾನಿಯವರ Ease of Livingನ ಆಶಯ, ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪುವಂತಾಗಬೇಕು. ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಜನರ ಭಾಗೀದಾರಿಕೆ ಬಹು ಮುಖ್ಯ. ಜನರು ನಾಡಿನ ಅಭಿವೃದ್ಧಿಯಲ್ಲಿ ಭಾಗೀದಾರರಾದಾಗಲೇ ಅಭಿವೃದ್ಧಿಗೆ ವೇಗ ದೊರೆಯುವುದು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಸಹಯೋಗದೊಂದಿಗೆ ಮುನ್ನಡೆಯುವ ಆಶಯ ನಮ್ಮದು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ 'ಮನ್-ಕಿ-ಬಾತ್' ಕಾರ್ಯಕ್ರಮದಲ್ಲಿ ಘೋಷಿಸಿದಂತೆ ಇಂದಿನಿಂದ ಅಮೃತ ಪರ್ವದ ಪ್ರಾರಂಭ. ಮುಂದಿನ 25 ವರ್ಷಗಳಲ್ಲಿ ನಮ್ಮ ದೇಶದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಕೈಜೋಡಿಸಿ ಕಾರ್ಯ ನಿರ್ವಹಿಸೋಣ ಎಂದು ನುಡಿದರು.

“ಭಾರತಾಂಬೆಯ ಹಿರಿಯ ಹೆಣ್ಮಗಳೆ, ದಾರಿ ತೋರುವ ಹಿರಿಯ ಸೊದರೆ ಬಾಳಮ್ಮ, ಬಾಳು” ಎಂಬ ಕವಿ ಬಿ.ಎಂ. ಶ್ರೀಕಂಠಯ್ಯನವರ ಆಶಯದಂತೆ ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ದೇಶದ ಮುಂಚೂಣಿಯ ರಾಜ್ಯವಾಗಿದೆ. ಮುಂದಿನ ದಿನಗಳಲ್ಲಿಯೂ ಸದೃಢ ಭಾರತಕ್ಕಾಗಿ ಸಮೃದ್ಧ ಕರ್ನಾಟಕವನ್ನು ಕಟ್ಟುವ ಅಮೃತ ಸಂಕಲ್ಪವನ್ನು ಮಾಡೋಣ. ಮುಂದಿನ 25 ವರ್ಷಗಳಲ್ಲಿ ಅದನ್ನು ಸಾಕಾರಗೊಳಿಸೋಣ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News