ಸೆಪ್ಟೆಂಬರ್ ನಲ್ಲಿ ‘ಸಂಗೊಳ್ಳಿ ರಾಯಣ್ಣ ಮಿಲಿಟರಿ ಶಾಲೆ' ಪ್ರಾರಂಭ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-08-15 12:28 GMT

ಬೆಂಗಳೂರು, ಆ. 15: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿನ ಶಾಲೆಯನ್ನು ಮಿಲಿಟರಿ ಶಾಲೆಯಾಗಿ ಪರಿವರ್ತಿಸಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಸಂಗೊಳ್ಳಿ ರಾಯಣ್ಣ ಮಿಲಟರಿ ಶಾಲೆ ಉದ್ಘಾಟನೆಯಾಗಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.

ಸೋಮವಾರ ಇಲ್ಲಿನ ಕೊಡೇಸ್ ವೃತ್ತದಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 225ನೆ ಜಯಂತೋತ್ಸವ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ‘ಈ ಶಾಲೆಯ ಪೀಠೋಪಕರಣ ಹಾಗೂ ಇತರ ಸೌಲಭ್ಯಗಳಿಗಾಗಿ 50ಕೋಟಿ ರೂ.ಒದಗಿಸಲಾಗಿದೆ. ಅದಕ್ಕೆ ಬೇಕಾದ 180 ಕೋಟಿ ರೂ.ಹಿಂದಿದ್ದ ಮತ್ತು ಈಗಿನ ಸರಕಾರ ವೆಚ್ಚ ಮಾಡಿದೆ. ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ನಂದಗಢದ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ನುಡಿದರು. 

ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ: ‘ಸ್ವಾತಂತ್ರ್ಯಾನಂತರದ ಹೋರಾಟಗಾರರನ್ನೂ ನಾವು ಮರೆಯಬಾರದು. ಭಾಷೆಯ ಹೋರಾಟ ಮತ್ತು ರೈತರ ಹೋರಾಟದ ಸ್ಮರಣೆ  ಬೆಂಗಳೂರಿನ ಅಚ್ಚುಕಟ್ಟು ಪ್ರದೇಶದಲ್ಲಿ ಸ್ಮಾರಕಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಕನ್ನಡಪರ ಹಾಗೂ ರೈತಸಂಘಗಳ ಮಾರ್ಗದರ್ಶನ ಪಡೆಯಲಾಗುವುದು. ದಿಲ್ಲಿಯಲ್ಲಿ ಸಂಗೊಳ್ಳಿರಾಯಣ್ಣನ ಪ್ರತಿಮೆ ಸ್ಥಾಪನೆಗೆ ಈಗಾಗಲೇ ಪತ್ರ ಬರೆಯಲಾಗಿದೆ' ಎಂದು ತಿಳಿಸಿದರು.

ಬಾಡದಲ್ಲಿ ಕನಕ ಅರಮನೆ: ‘ಸ್ವಾತಂತ್ರ್ಯಹೋರಾಟದ ಸ್ಮಾರಕಗಳನ್ನು ಅಭಿವೃದ್ಧಿ ಮಾಡುವ ನಿರ್ಣಯವನ್ನು ಸರಕಾರ ಮಾಡಿದೆ. ಕನಕದಾಸ ಕಾಗಿನೆಲೆ ಅಭಿವೃದ್ಧಿಗೆ ಬಿಎಸ್‍ವೈ ಸರಕಾರದ ಅವಧಿಯಲ್ಲಿ 40ಕೋಟಿ ರೂ.ಒದಗಿಸಿದ್ದಾರೆ. ಕನಕದಾಸರು ಹುಟ್ಟಿದ ಬಾಡ ಕ್ಷೇತ್ರದಲ್ಲಿ ಸರಕಾರ 25ಕೋಟಿ ರೂ.ವೆಚ್ಚದಲ್ಲಿ ಕನಕನ ಅರಮನೆಯನ್ನು ನಿರ್ಮಿಸಿದೆ' ಎಂದು ಅವರು ತಿಳಿಸಿದರು.

ವಿಶ್ವ ಭಾರತವಾಗಿಸಲು ಸಂಕಲ್ಪ: ‘ನಮ್ಮ ದೇಶ ಶ್ರೇಷ್ಟ ದೇಶ ಎನ್ನುವ ಕಲ್ಪನೆ ನಮ್ಮನ್ನು ದೇಶಕ್ಕಾಗಿ ಸಮರ್ಪಣೆ ಮಾಡಬೇಕಾಗಿದೆ. ದೇಶಕ್ಕಾಗಿ ನಾವೇನು ಮಾಡಬಲ್ಲೆವು ಎಂಬುದನ್ನು ಮುಂದಿನ 25 ವರ್ಷದ ಅಮೃತಕಾಲದಲ್ಲಿ ಸಾಧಿಸಬೇಕಿದೆ. ಯುವಜನತೆ ಜಾತಿಮತಭೇದಗಳನ್ನು ಲೆಕ್ಕಿಸದೇ ದೇಶಕ್ಕಾಗಿ ದುಡಿಯಬೇಕಿದೆ. ಭಾರತವನ್ನು ವಿಶ್ವಭಾರತವಾಗಿಸಲು ಎಲ್ಲರೂ ಸಮರ್ಪಣಾ ಭಾವದಿಂದ ಸಂಕಲ್ಪ ತೊಡಬೇಕಿದೆ. ಭವ್ಯ ಭಾರತ ಕಟ್ಟುವ ಮೂಲಕ ಸಂಗೊಳ್ಳಿ ರಾಯಣ್ಣನಂತಹ ಮಹಾನ್ ಚೇತನಗಳಿಗೆ ಗೌರವ ಸಮರ್ಪಿಸಬೇಕೆಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News