ಲಾಲ್‍ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ: 2.6 ಲಕ್ಷ ಜನ, 2.70ಕ್ಕೂ ಅಧಿಕ ಹಣ ಸಂಗ್ರಹ

Update: 2022-08-15 18:48 GMT

ಬೆಂಗಳೂರು, ಆ.15: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನದ ಅಂತಿಮ ದಿನವಾದ ಸೋಮವಾರ 2.6 ಲಕ್ಷಕ್ಕೂ ಅಧಿಕ ಪ್ರಮಾಣದ ಪ್ರೇಕ್ಷಕರು ಆಗಮಿಸಿದ್ದು, ಈ ಬಾರಿ ಫಲಪುಷ್ಪ ಪ್ರದರ್ಶನ ( Flower Show)ಆಯೋಜನೆಯಿಂದ ಕಳೆದ 11 ದಿನಗಳಿಂದ 2.70 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ. 

ಕಳೆದ ವಾರ ಮಳೆಯಿಂದ ಹೆಚ್ಚಿನ ಜನರು ಬಂದಿರಲಿಲ್ಲ. ರವಿವಾರ ಸರಕಾರಿ ರಜೆ ಇದ್ದ ಕಾರಣ 1.40 ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದರು. ಪರಿಣಾಮವಾಗಿ ಲಾಲ್‍ಬಾಗ್ ಪ್ರವೇಶ ದ್ವಾರದಲ್ಲಿ, ಪ್ರದರ್ಶನದ ಸ್ಥಳದಲ್ಲಿ ಜನರ ನೂಕುನಗ್ಗಲು ಉಂಟಾಗಿತ್ತು. ಸೋಮವಾರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಿಬಿಎಂಟಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಹಾಗೆಯೇ 1 ರಿಂದ 10ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಹಾಗಾಗಿ ಲಾಲ್‍ಬಾಗ್‍ಗೆ ಜನಸಾಗರವೇ ಹರಿದು ಬಂದಿತ್ತು. 

`ಆಜಾದಿ ಕಾ ಅಮೃತ್ ಮಹೋತ್ಸವ' ಘೋಷಣೆಯಡಿ ಆ.5 ರಿಂದ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ 2 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು. ಗಾಜಿನ ಮನೆಯಲ್ಲಿ ಆಯೋಜಿಸಿದ್ದ ದಿವಂಗತ ಪುನೀತ್ ರಾಜ್‍ಕುಮಾರ್ ಕುರಿತಾದ ಪ್ರದರ್ಶನವು ಈ ಬಾರಿ ಎಲ್ಲರ ಮನ ಸೆಳೆದಿತ್ತು. ಹಾಗಾಗಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದ್ದ ಲಾಲ್‍ಬಾಗ್‍ನ ಗಾಜಿನ ಮನೆ ಜನರಿಂದ ತುಂಬಿತ್ತು. ಕೊನೆಯ ಎರಡು ದಿನ ಲಾಲ್‍ಬಾಗ್‍ನ (Lalbagh) ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟವಾಯಿತು. ಜನರನ್ನು ನಿಯಂತ್ರಿಸಲಾಗದೆ ಆಗಾಗ ಉಚಿತವಾಗಿ ಜನರ ಗುಂಪು ದ್ವಾರಗಳಲ್ಲಿ ಒಳ ನುಗ್ಗುತ್ತಿದ್ದು ಕಂಡು ಬಂದಿತು 

ಇನ್ನು ಲಾಲ್‍ಬಾಗ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಅದರಲ್ಲೂ ಹೊಸೂರು ರಸ್ತೆ, ಜಯನಗರ, ಮಿನರ್ವ ವೃತ್ತ ಮತ್ತಿತರ ಕಡೆಗಳಲ್ಲಿ ವಾಹನಗಳ ದಟ್ಟಣೆಯಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ನಿರೀಕ್ಷೆಗೂ ಮೀರಿ ವೀಕ್ಷಕರು ಆಗಮಿಸಿದ್ದರಿಂದ ವಾಹನ ನಿಲುಗಡೆಗೆ ಪರದಾಡುತ್ತಿದ್ದರು. ಉದ್ಯಾನದಲ್ಲಿ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಲ್ಲೇ ತೊಡಗಿದ್ದರು. ಲಾಲ್‍ಬಾಗ್‍ನ ಮಾರಾಟ ಮಳಿಗೆಗಳ ಬಳಿ, ಫುಡ್‍ಕೋರ್ಟ್‍ನಲ್ಲಿ, ಬಂಡೆಯ ಮೇಲೆ ಜನ ತುಂಬಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News