ಬೆಳ್ತಂಗಡಿ | 'ನನ್ನ ಆಹಾರ, ನನ್ನ ಹಕ್ಕು' ಘೋಷಣೆಯಡಿ ಸ್ವಾತಂತ್ರ್ಯೋತ್ಸವ ಆಚರಣೆ

Update: 2022-08-16 06:30 GMT

ಬೆಳ್ತಂಗಡಿ, ಆ.16: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂವಿಧಾನದ ಹಕ್ಕುಗಳ ಸಂರಕ್ಷಣೆಗಾಗಿ ವಿಶೇಷ ಕಾರ್ಯಕ್ರಮವನ್ನು ಬೆಳ್ತಂಗಡಿಯಲ್ಲಿ ಸಮಾನ ಮನಸ್ಕರ ವೇದಿಕೆ ಹೆಸರಿನಲ್ಲಿ ಆಯೋಜಿಸಲಾಗಿತ್ತು.

'ನನ್ನ ಆಹಾರ ನನ್ನ ಹಕ್ಕು' ಎಂಬ ಘೋಷಣೆಯಡಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ , ಅಂಬೇಡ್ಕರ್ ವಾದಿ ಧಮ್ಮಾನಂದ ಬಿ., ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರಸಕ್ತ ನಾವು ಅತ್ಯಂತ ವಿಷಮ ಸ್ಥಿತಿಯಲ್ಲಿ ಬದುಕುವಂತಾಗಿರುವುದು ದೇಶದ ದುರಂತ. ಸಂವಿಧಾನದ ಪರಿಚ್ಛೇದ 21ರಲ್ಲಿ ನಮ್ಮ ಆಹಾರದ ಹಕ್ಕುಗಳ ಬಗ್ಗೆ ಸ್ಪಷ್ಟಪಡಿಸಿದ್ದರೂ ಸಂಘ ಪರಿವಾರ ಜನರ ಆಹಾರದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುವ ಮೂಲಕ ದೌರ್ಜನ್ಯ ನಡೆಸುತ್ತಿದೆ. ನಾವು ಏನು ತಿನ್ನಬೇಕು ಎನ್ನುವುದು ನಮ್ಮ ತೀರ್ಮಾನ. ಅದನ್ನು ಪ್ರಶ್ನಿಸುವ ಹಕ್ಕು ಸಂಘಪರಿವಾರಕ್ಕೆ ಕೊಟ್ಟವರಾರು ಎಂದು ಪ್ರಶ್ನಿಸಿದ ಅವರು, ದೇಶದ ಸ್ವಾತಂತ್ರ್ಯವೆಂದರೆ ಜನರ ಮೂಲಭೂತ ಹಕ್ಕುಗಳು ಹಾಗಾಗಿ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನಾವು ಸಂಘಟಿತ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ ಎಂದರು.

ಸಾಮಾಜಿಕ ಹೋರಾಟಗಾರ , ಸಿಪಿಎಂ ಮುಖಂಡ ಶೇಖರ್ ಲಾಯಿಲ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಈ ಸಂದರ್ಭದಲ್ಲಿ ನಮ್ಮ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ನಾವು ಧ್ವನಿ ಎತ್ತುವಂತಾಗಿರುವುದು ದುರಂತ. ರಾಜಸ್ಥಾನದಲ್ಲಿ ದಲಿತ ಬಾಲಕ ನೀರಿನ ಪಾತ್ರೆ ಮುಟ್ಟಿದ ಎಂಬ ಕಾರಣಕ್ಕಾಗಿ ಕೊಲೆ ನಡೆದಿರುವಾಗ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಯಾವ ಅರ್ಥವಿದೆ ಪ್ರಶ್ನಿಸಿದ ಅವರು, ಗೋವಿನ ಹೆಸರಿನಲ್ಲಿ ಅನೈತಿಕ ಪೋಲಿಸ್ ಗಿರಿ ನಡೆಸುವ ಸಂಘ ಪರಿವಾರ, ಬಿಜೆಪಿ ಕಾರ್ಯಕರ್ತರೇ ಇಂದು ಅಕ್ರಮ ಗೋಸಾಗಟದಲ್ಲಿ ನೇರವಾಗಿ ಭಾಗಿಯಾಗುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶವು ಗೋಮಾಂಸ ರಫ್ತಿನಲ್ಲಿ ಜಗತ್ತಿನಲ್ಲಿ ನಂ.1 ಆಗಿದೆ. ಬಿಜೆಪಿಯ ಜನಪ್ರತಿನಿಧಿಗಳು ಸೇರಿದಂತೆ ಸಂಘಪರಿವಾರದ ನಾಯಕರೆ ಗೋಮಾಂಸ ರಫ್ತು ಕಂಪೆನಿಗಳ ಮಾಲಕರಾಗಿದ್ದರೂ ನಮ್ಮ ದೇಶದ ಮೂಲನಿವಾಸಿಗಳ ಆಹಾರ ಪದ್ಧತಿಯ ಮೇಲೆ ದಾಳಿ ನಡೆಸುವ ಸರಕಾರದ ವಿರುದ್ಧ ನಾವು ಸಿಡಿದೇಳಬೇಕಾಗಿದೆ. ಸಂಘಪರಿವಾರದವರಿಗೆ ಹಣ ಮಾಡಲು ಗೋವುಗಳು ಬೇಕಾದರೆ ನಮಗೆ ತಿನ್ನುವ ಆಹಾರಕ್ಕಾಗಿಯೂ ಗೋಮಾಂಸ ಅಗತ್ಯವಿದೆ ಎಂದು ಹೇಳಬೇಕಾಗಿದೆ ಎಂದರು.

ಯುವ ನ್ಯಾಯವಾದಿ ಅಬಿನ್ ಫ್ರಾನ್ಸಿಸ್ ಮಾತನಾಡಿ, ನಮ್ಮ ಹಕ್ಕುಗಳ ಬಗ್ಗೆ ಮಾತನಾಡದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಹಕ್ಕುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ನಮ್ಮ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಪಣ ತೊಡುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬರಹಗಾರ ಶಫಿ ಬಂಗಾಡಿ, ಪ್ರಮುಖರಾದ ಖಾದರ್ ನಾವೂರು, ಮಂಜುನಾಥ್ ಲಾಯಿಲ, ರಮೀಝ್ ಬೆಳ್ತಂಗಡಿ, ಜಯರಾಂ ಮಯ್ಯ ಕೊಯ್ಯೂರು, ಹರೀಶ್ ಎಲ್., ರಾಮಚಂದ್ರ ಧರ್ಮಸ್ಥಳ, ನೆಬಿಸಾ ಬೆಳ್ತಂಗಡಿ, ಹರೀಶ್ ಕುಮಾರ್ ಎಲ್., ಸಂದೇಶ್ ಎಲ್., ಕೃಷ್ಣ ಎಲ್., ವಿನುಷ್ ರಮಣ ಪಟ್ರಮೆ, ಜೋಶಿಲ್ ಫೆರ್ನಾಂಡಿಸ್, ಮುಸ್ತಫಾ ಲಾಯಿಲ, ಉಮರ್ ಲಾಯಿಲ, ಲಾರೆನ್ಸ್ ಕೈಕಂಬ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಮಾಂಸದೂಟ ಸೇವಿಸುವ ಮೂಲಕ ಸಂವಿಧಾನಿಕ ಹಕ್ಕುಗಳೊಂದಾದ 'ನನ್ನ ಆಹಾರ, ನನ್ನ ಹಕ್ಕು. ಎಂಬುದನ್ನು ಎತ್ತಿ ಹಿಡಿಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News