ತಲಾಖ್-ಇ-ಹಸನ್ ಪದ್ಧತಿ ತ್ರಿವಳಿ ತಲಾಖ್‍ನಂತಲ್ಲ, ಮಹಿಳೆಯರಿಗೆ 'ಖುಲಾ' ಆಯ್ಕೆಯೂ ಇದೆ: ಸುಪ್ರೀಂಕೋರ್ಟ್

Update: 2022-08-16 11:08 GMT

ಹೊಸದಿಲ್ಲಿ: ಇಸ್ಲಾಂ  ಧರ್ಮದಲ್ಲಿ ತಿಂಗಳಿಗೊಮ್ಮೆ  ಮೂರು ತಿಂಗಳ ಕಾಲ ʼತಲಾಖ್-ಇ-ಹಸನ್' (Talaaq-e-Hassan) ಹೇಳುವ ಮೂಲಕ ತಲಾಖ್ ನೀಡುವ ಪದ್ಧತಿಯನ್ನು ತ್ರಿವಳಿ ತಲಾಖ್(Teiple Talaq) ಪದ್ಧತಿಗೆ ಹೋಲಿಸಲು ಸಾಧ್ಯವಿಲ್ಲ ಹಾಗೂ ಮಹಿಳೆಯರಿಗೆ ʼಖುಲಾ' ಆಯ್ಕೆಯೂ ಇದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ಇಸ್ಲಾಂ ಧರ್ಮದಲ್ಲಿ ಪುರುಷ ತಲಾಖ್ ಮೂಲಕ ಪತ್ನಿಗೆ ವಿಚ್ಛೇದನ ನೀಡಬಹುದಾದರೆ ಮಹಿಳೆಯು ಖುಲಾ ಮೂಲಕ ಪತಿಗೆ ವಿಚ್ಛೇದನ ನೀಡಬಹುದಾಗಿದೆ.

ತಲಾಖ್-ಇ-ಹಸನ್ ಮತ್ತು ಇತರ  ಕಾನೂನುಬದ್ಧವಲ್ಲದ ತಲಾಖ್ ರೀತಿಗಳನ್ನು ರದ್ದುಗೊಳಿಸಿ ಅವುಗಳನ್ನು ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಎಂ ಎಂ ಸುಂದರೇಶ್ ಅವರ ಪೀಠ ಮೇಲಿನಂತೆ ಹೇಳಿದೆ.

"ಈ ಪದ್ಧತಿ ತ್ರಿವಳಿ ತಲಾಖ್ ಅಲ್ಲ, ಮಹಿಳೆಯರಿಗೆ ಖುಲಾ ಆಯ್ಕೆಯೂ ಇದೆ. ಇಬ್ಬರಿಗೆ ಒಟ್ಟಿಗೆ ಜೀವಿಸಲು ಸಾಧ್ಯವಿಲ್ಲವೆಂದಾದರೆ ನಾವು ಮತ್ತೆ ಪುನಃಸ್ಥಾಪಿಸಲಾಗದ ವಿವಾಹದ ಆಧಾರದಲ್ಲಿ ವಿಚ್ಛೇದನ ಕೂಡ ನೀಡಬಲ್ಲೆವು. ಮೆಹರ್ ನೀಡಿದರೆ  ಪರಸ್ಪರ ಸಹಮತದ ವಿಚ್ಛೇದನಕ್ಕೆ ನೀವು ಸಿದ್ಧರಿದ್ದೀರಾ? ಮೂಲತಃ ಅರ್ಜಿದಾರರ ವಾದವನ್ನು ನಾವು ಒಪ್ಪುವುದಿಲ್ಲ. ಇದು ಬೇರೆ ಕಾರಣಗಳಿಗಾಗಿ ಒಂದು ಅಜೆಂಡಾ ಆಗುವುದು ನಮಗೆ ಬೇಕಿಲ್ಲ," ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರೆ ಬೇನಝೀರ್ ಹೀನಾ ಪರ ವಾದಿಸಿದ ವಕೀಲ ಪಿಂಕಿ ಆನಂದ್, ಸುಪ್ರೀಂ ಕೋರ್ಟ್(Supreme Court) ತ್ರಿವಳಿ ತಲಾಖ್ ಅನ್ನು ಅಸಂವಿಧಾನಿಕ ಎಂದು ಘೋಷಿಸಿದ್ದರೂ ತಲಾಖ್-ಇ-ಹಸನ್ ಬಗ್ಗೆ ನಿರ್ಧರಿಸಿಲ್ಲ ಎಂದರು.

ಮೆಹರ್‍ಗಿಂತ ಹೆಚ್ಚಿನ ಮೊತ್ತ ನೀಡುವುದಾದರೆ ಪರಸ್ಪರ ಸಹಮತದ ವಿಚ್ಛೇದನಕ್ಕೆ ಅರ್ಜಿದಾರರು ಒಪ್ಪುತ್ತಾರೆಯೇ ಎಂದು ಕೇಳಲು ಅವರ ವಕೀಲರಿಗೆ ನ್ಯಾಯಾಲಯ ಸೂಚಿಸಿತಲ್ಲದೆ  ಈ ನ್ಯಾಯಾಲಯದ ಹಸ್ತಕ್ಷೇಪವಿಲ್ಲದೆ ʼಮುಬಾರತ್' ಮೂಲಕ ಕೂಡ ವಿಚ್ಛೇದನಕ್ಕೆ ಅವಕಾಶವಿದೆ ಎಂದು ಹೇಳಿದೆ.

ಮುಂದಿನ ವಿಚಾರಣೆ ಆಗಸ್ಟ್ 29ಕ್ಕೆ ನಿಗದಿಯಾಗಿದೆ.

ಗಾಝಿಯಬಾಧ್ ನಿವಾಸಿಯಾಗಿರುವ ಅರ್ಜಿದಾರೆ ಹೀನಾ ತಾನು ತಲಾಖ್-ಇ-ಹಸನ್ ಸಂತ್ರಸ್ತೆಯಾಗಿರುವುದಾಗಿ ಹೇಳಿದ್ದಾರೆ. ಎಲ್ಲಾ ನಾಗರಿಕರಿಗೂ ವಿಚ್ಛೇದನಕ್ಕೆ ಸಮಾನ ಆಧಾರ ಮತ್ತು ಪ್ರಕ್ರಿಯೆಗಳಿಗೆ ಮಾರ್ಗಸೂಚಿಗಳನ್ನು ರಚಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಬೇಕೆಂದೂ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News