ಪರಿಸರ ಸ್ನೇಹಿ ಸ್ಟಾರ್ಟ್‍ಅಪ್‍ಗಳಿಗೆ ಆದ್ಯತೆ ನೀಡಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ

Update: 2022-08-20 18:09 GMT

ಬೆಂಗಳೂರು, ಆ.20: ಹೊಸ ಮತ್ತು ಸೃಜನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗಾಗಿ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಮೂಲಕ ಭಾರತ ಸರಕಾರವು ಅನೇಕ ಸ್ಟಾರ್ಟ್‍ಅಪ್‍ಗಳನ್ನು ಪ್ರೋತ್ಸಾಹಿಸುತ್ತಿದೆ, ಜಗತ್ತನ್ನು ಹಸಿರಾಗಿಡಲು ನಾವು ಸರ್ವ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.

ಶನಿವಾರ ನಗರದ ಸಿಎಂಆರ್ ವಿಶ್ವವಿದ್ಯಾನಿಲಯವು ಆಯೋಜಿಸಿದ್ದ ಇಕೋ ಯೂತ್ ಸ್ಟಾರ್ಟ್ ಅಪ್ ಶೃಂಗಸಭೆ-2022 ಅಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇಲ್ಲಿ ಮಾನವ ಜೀವನವು ಭೂಮಿ, ನೀರು, ಗಾಳಿ, ಆಕಾಶ, ಸೂರ್ಯ, ಚಂದ್ರ, ನದಿ, ಮರಗಳು ಮತ್ತು ಪ್ರಾಣಿಗಳು ಮತ್ತು ಪಕ್ಷಿಗಳು ಇತ್ಯಾದಿಗಳ ಸಾಂಗತ್ಯದಲ್ಲಿ ಕಂಡುಬರುತ್ತದೆ ಎಂದರು. 

ಪರಿಸರ ಮತ್ತು ಪ್ರಾಣಿಗಳು ಪರಸ್ಪರ ಅವಲಂಬಿತವಾಗಿವೆ. ಭಾರತೀಯ ಚಿಂತನೆಯಲ್ಲಿ ಪರಿಸರ ಸಂರಕ್ಷಣೆಯ ಪರಿಕಲ್ಪನೆಯು ಮನುಕುಲದ ಇತಿಹಾಸದಷ್ಟೇ ಪ್ರಾಚೀನವಾದುದು ಇದಕ್ಕೆ ಕಾರಣ. ಜಾಗತಿಕ ಮಟ್ಟದಲ್ಲಿ ಜಾಗತಿಕ ತಾಪಮಾನವು ದೊಡ್ಡ ಸವಾಲಾಗಿದೆ. ವಾತಾವರಣದಲ್ಲಿ ಮೀಥೇನ್, ಕಾರ್ಬನ್ ಡೈಆಕ್ಸೈಡ್, ಕ್ಲೋರೋ- ಫ್ಲೋರೋ -ಕಾರ್ಬನ್ ಮುಂತಾದ ಅನಿಲಗಳ ಹೆಚ್ಚಳದಿಂದ ಭೂಮಿಯ ಸರಾಸರಿ ಉಷ್ಣತೆಯ ಹೆಚ್ಚಳದಿಂದಾಗಿ ಹವಾಮಾನ ಬದಲಾವಣೆಯೂ ಸಂಭವಿಸುತ್ತಿದೆ ಎಂದು ಅವರು ಹೇಳಿದರು.

ವಿಶ್ವ ಹವಾಮಾನ ಅಭಿವೃದ್ಧಿ ಸಂಸ್ಥೆಯ ಪ್ರಕಾರ, ಭೂಮಿಯ ಉಷ್ಣತೆಯು ನಿರಂತರವಾಗಿ ಹೆಚ್ಚುತ್ತಿದೆ. ತಾಪಮಾನ ಹೆಚ್ಚಳದಿಂದ ಧ್ರುವದಲ್ಲಿ ಹೆಪ್ಪುಗಟ್ಟಿದ ಮಂಜುಗಡ್ಡೆ ಕರಗುತ್ತಿದ್ದು, ಅದರ ಪರಿಣಾಮ ದಿನೇ ದಿನೇ ಸಮುದ್ರ ಮಟ್ಟ ಏರಿಕೆಯ ರೂಪದಲ್ಲಿ ಕಾಣುತ್ತಿದ್ದೇವೆ ಎಂದು ರಾಜ್ಯಪಾಲ ತಿಳಿಸಿದರು.

ವಿಜ್ಞಾನಿಗಳು ಮತ್ತು ಪರಿಸರವಾದಿಗಳು ಪ್ರಕಾರ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು, ಮುಖ್ಯವಾಗಿ ಸಿಎಫ್‍ಸಿ ಅನಿಲಗಳ ಹೊರಸೂಸುವಿಕೆಯನ್ನು ನಿಲ್ಲಿಸಬೇಕು, ಕಡಿಮೆ ಸಿಎಫ್‍ಸಿ ಅನಿಲಗಳನ್ನು ಹೊರಸೂಸುವ ಅಂತಹ ಯಂತ್ರಗಳನ್ನು ಬಳಸಬೇಕಾಗುತ್ತದೆ, ಸಸ್ಯಗಳನ್ನು ಬೆಳೆಸಬೇಕು, ಮರಗಳನ್ನು ಉಳಿಸಬೇಕು. ವಾಹನಗಳು ಮತ್ತು ಕೈಗಾರಿಕೆಗಳಿಂದ ಹೊರಸೂಸುವ ಹಾನಿಕಾರಕ ಅನಿಲಗಳಿಗೆ ಸರಿಯಾದ ವಿಲೇವಾರಿ ವ್ಯವಸ್ಥೆಯ ಅವಶ್ಯಕತೆಯಿದೆ, ನೀರು ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಕ್ರಮಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಇಕೋ ಯೂತ್ ಸ್ಟಾರ್ಟ್ ಅಪ್ ಶೃಂಗಸಭೆಯು ಪರಿಸರ ಮತ್ತು ಹವಾಮಾನ ಬದಲಾವಣೆಯ ಪರಿಹಾರಗಳಿಗಾಗಿ ಭಾರತದಲ್ಲಿ ಪರಿಸರ ವ್ಯವಸ್ಥೆಯನ್ನು ರಚಿಸಲು ಹಲವಾರು ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಎನ್‍ಜಿಒಗಳು ಮತ್ತು ಉದ್ಯಮಿಗಳ ಸಹಯೋಗದ ಪ್ರಯತ್ನವಾಗಿದೆ. ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಉದ್ಯಮಿಗಳನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಉದ್ಯಮಶೀಲ ವ್ಯಕ್ತಿಗಳು, ಕಾರ್ಪೊರೇಟ್‍ಗಳು, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ನಮ್ಮೊಂದಿಗೆ ಸಂಬಂಧ ಹೊಂದಿರುವ ಸರಕಾರಿ ನೌಕರರು ಎಲ್ಲರೂ ಒಗ್ಗೂಡಿ ಪರಿಸರ ಸಂರಕ್ಷಣೆಗೆ ಸಕಾರಾತ್ಮಕ ಪ್ರಯತ್ನವನ್ನು ಮಾಡಲು ಒಂದೇ ಗುರಿಯೊಂದಿಗೆ ಕೆಲಸ ಮಾಡುತ್ತಾರೆ ಎಂದು ರಾಜ್ಯಪಾಲ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಿಎಂಆರ್ ಸಂಸ್ಥೆ ಸಂಸ್ಥಾಪಕ ಕೆ.ಸಿ.ರಾಮಮೂರ್ತಿ, ಅಖಿಲ ಭಾರತ ಪರಿಸರ ಸಂರಕ್ಷಣಾ ಚಟುವಟಿಕೆಯ ಸಂಚಾಲಕ ಗೋಪಾಲ್ ಆರ್ಯ, ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕಿ ಕೇಜ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News