×
Ad

ಮಾಂಸಹಾರಿಗಳ ಓಟು ಬೇಡ ಎಂದು ಹೇಳುವ ತಾಕತ್ತು BJPಯವರಿಗಿದೆಯೇ?: ದಿನೇಶ್ ಗುಂಡೂರಾವ್

Update: 2022-08-23 13:07 IST

ಬೆಂಗಳೂರು: 'ಮಾಂಸಹಾರ ತಿನ್ನುವುದು ತಪ್ಪಾದರೆ, ಮಾಂಸಹಾರಿಗಳು‌ ನಮ್ಮ ಪಕ್ಷಕ್ಕೆ ಓಟು ಹಾಕುವುದು ಬೇಡ ಎಂದು BJP ಯವರು ಹೇಳಲಿ ಹೀಗೆ ಹೇಳುವ ತಾಕತ್ತು BJPಯವರಿಗಿದೆಯೇ?' ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, '' ಮಾಂಸಹಾರ ಸೇವನೆಗೆ ಸಂಬಂಧಿಸಿದಂತೆ ಬಿಜೆಪಿ (BJP) ಯವರು ಕೀಳು ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯುರಾಗಲಿ ಅಥವಾ ಇನ್ಯಾರೆ ಆಗಿರಲಿ ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು ಎಂದು BJPಯವರು ನಿರ್ಧರಿಸಬೇಕೆ? ನಮ್ಮ ಆಹಾರ, ನಮ್ಮ ಹಕ್ಕು. ಇದನ್ನು ಕೇಳಲು BJPಯವರಿಗೆ ಅಧಿಕಾರ ಕೊಟ್ಟವರ್ಯಾರು? ಊಟ ತನ್ನಿಚ್ಛೆ., ನೋಟ ಪರರಿಚ್ಛೆ ಅಲ್ಲವೇ.?'' ಎಂದು ಪ್ರಶ್ನೆ ಮಾಡಿದ್ದಾರೆ. 

''ಚಿಕ್ಕಮಗಳೂರು, ಕೊಡಗು ಮತ್ತು ಹಾಸನದ ಸಕಲೇಶಪುರದಲ್ಲಿ‌‌ ಮದುವೆಯ ದಿನವೇ ಮಾಂಸಹಾರ ಮಾಡುತ್ತಾರೆ. ಅದು ಅವರ ಆಹಾರ ಪದ್ದತಿ. ಇನ್ನು ಮಲೆನಾಡಿನ ಕೆಲವು ಕಡೆ ಎಲ್ಲಾ ಹಬ್ಬಗಳಿಗೂ ಮಾಂಸಹಾರ ಮಾಡುತ್ತಾರೆ. C.T.ರವಿ ಮತ್ತು ಪ್ರತಾಪ ಸಿಂಹ ಮಲೆನಾಡಿನವರು. ಗಣೇಶನ ಹಬ್ಬದ ದಿವಸ ಅವರ ಭಾಗದಲ್ಲಿ ಮಾಂಸಹಾರ ಮಾಡುವುದನ್ನು ಅವರು ನಿರಾಕರಿಸುತ್ತಾರೆಯೇ?'' ಎಂದು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಅವರನ್ನು ಕಂಡರೆ BJPಯವರಿಗೆ ನವರಂಧ್ರಗಳಲ್ಲೂ ನಡುಕ ಶುರುವಾಗಿದೆ. ಹಾಗಾಗಿ ಅವರು ಏನು ತಿನ್ನುತ್ತಾರೆ, ಏನು ಉಡುತ್ತಾರೆ ಎಂದು ವಿವಾದ ಸೃಷ್ಟಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಟ್ವೀಟಿಸಿದ್ದಾರೆ. 

ಇದನ್ನೂ ಓದಿ: 'ನಮ್ಮ ಬದುಕು, ನಮ್ಮ ಊಟ, ನಮ್ಮ ಆಚರಣೆ': ಮಾಂಸಾಹಾರ ವಿವಾದ ಸೃಷ್ಟಿಗೆ ನೆಟ್ಟಿಗರ ಪ್ರತಿಕ್ರಿಯೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News