'ನಮ್ಮ ಬದುಕು, ನಮ್ಮ ಊಟ, ನಮ್ಮ ಆಚರಣೆ': ಮಾಂಸಾಹಾರ ವಿವಾದ ಸೃಷ್ಟಿಗೆ ನೆಟ್ಟಿಗರ ಪ್ರತಿಕ್ರಿಯೆ
ಮಾಂಸಾಹಾರದ ಕುರಿತ ಕೀಳರಿಮೆ ವಿರುದ್ಧ ಸಾಮಾಜಿಕ ತಾಣದಲ್ಲಿ ಆಕ್ರೋಶ

(ವೈರಲ್ ಆಗುತ್ತಿರುವ ಚಿತ್ರಗಳು)
ಬೆಂಗಳೂರು: ಇತ್ತೀಚೆಗೆ ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಿದ್ದರಾಮಯ್ಯ, ಮಾಂಸಾಹಾರ ಊಟ ಮಾಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನಲಾದ ಫೋಟೊ ಒಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಮಾಂಸಾಹಾರದ ಕುರಿತಾದ ಕೀಳರಿಮೆ ವಿರುದ್ಧ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಡಿಕೇರಿಯ ಅತಿಥಿ ಗೃಹದಲ್ಲಿ ಮಧ್ಯಾಹ್ನ ಕೋಳಿ ಸಾರು ತಿಂದು ಮಧ್ಯಾಹ್ನದ ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಿ ಸಂದೇಶವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, 'ದೇವರು ಇಂಥದ್ದನ್ನೇ ತಿಂದು ಬಾ ಎಂದು ಹೇಳಿದ್ದಾರಾ? ಮಧ್ಯಾಹ್ನ ತಿಂದು ಸಂಜೆ ಹೋಗಬಾರದಾ? ಹಾಗಿದ್ದರೆ, ಹಿಂದಿನ ದಿನ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಹುದಾ? ಬಿಜೆಪಿಯವರು ಇಲ್ಲಸಲ್ಲದ ವದಂತಿ ಹಬ್ಬಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರ ಮಾಂಸಾಹಾರ ಸೇವನೆ ಕುರಿತಾದ ಚರ್ಚೆ ಅನಗತ್ಯ ವಿವಾದ ಸೃಷ್ಟಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿ ವಿಧ ವಿಧದ ಮಾಂಸದೂಟದ ಫೋಟೊಗಳನ್ನು ಪೋಸ್ಟ್ ಮಾಡಿ 'ನಮ್ಮ ಬದುಕು ,ನಮ್ಮ ಊಟ, ನಮ್ಮ ಆಚರಣೆ', #ನನ್ನ_ಆಹಾರ_ನನ್ನ_ಹಕ್ಕು ಎಂದು ಅಭಿಯಾನ ಆರಂಭಿಸಿದ್ದಾರೆ.
ನೆಟ್ಟಿಗರು ಹೇಳುವುದೇನು?
''ಮಾಂಸಾಹಾರದ ಕುರಿತಾದ ಕೀಳರಿಮೆಯನ್ನು ಮೊದಲು ತೊಡೆದು ಹಾಕಿ. ನಮ್ಮ ಬದುಕು ,ನಮ್ಮ ಊಟ, ನಮ್ಮ ಆಚರಣೆ- ಇದೊಂದು 'ಪುಷ್ಕಳ' ಭಾರತೀಯ ದ್ರಾವಿಡ ಸಂಸ್ಕೃತಿ. ಮಾಂಸದೂಟದ ಜತೆಗಿನ ಸುಂದರ ನೆನಪುಗಳನ್ನು ಚಿತ್ರ ಬರೆಹಗಳ ಮೂಲಕ ಆದಷ್ಟೂ ದಾಖಲಿಸಿ.
ಇಲ್ಲಿ ಯಾವ ಸಂಪಾದಕನೂ ಇಲ್ಲ. ನಿಮ್ಮ ಗೋಡೆ ನಿಮ್ಮಿಷ್ಟ. ನಡೀರಿ... ಇದೊಂದು ಆಂದೋಲನವಾಗಲಿ...'' ಎಂದು ಫೇಸ್ ಬುಕ್ ನಲ್ಲಿ ವ್ಯಂಗ್ಯ ಚಿತ್ರಕಾರ ದಿನೇಶ್ ಕುಕ್ಕುಜಡ್ಕ ಅವರು ಪೋಸ್ಟ್ ಮಾಡಿದ್ದಾರೆ.
''ಮನುಷ್ಯ ತಿನ್ನಬಹುದಾದ ನೈಸರ್ಗಿಕ ಆಹಾರಗಳೆಲ್ಲವೂ ಪವಿತ್ರವೂ ಶ್ರೇಷ್ಠವೂ ಆಗಿವೆ. ಅವುಗಳಲ್ಲಿ ಭಿನ್ನತೆ ಇಲ್ಲ. ಸೃಷ್ಟಿಯೇ ಸಕಲ ಚರಾಚರಗಳಿಗೂ ಆಹಾರದ ದಾರಿಯನ್ನು ಮತ್ತು ಅದರ ಸಮತೋಲನವನ್ನು ಕಲಿಸಿಕೊಟ್ಟಿದೆ. ಬಹುವೈವಿಧ್ಯತೆಯ ಆಹಾರಕ್ರಮಗಳನ್ನ ಪರಸ್ಪರ ಗೌರವಿಸುವುದನ್ನ ಕಲಿಯದೇ ಇದ್ದಲ್ಲಿ ಅಂತಹವರು ಅನಾಗರೀಕರು, ಧರ್ಮಭ್ರಷ್ಟರೂ ಆಗಿರುವುದರಲ್ಲಿ ಸಂದೇಹವಿಲ್ಲ. ಅವರ ಮನೋದಾರಿದ್ರ್ಯವು ಆಹಾರದಲ್ಲಿ ಪವಿತ್ರತೆಯನ್ನು ಹುಡುಕುತ್ತಾ ವಿಷಕಾರಿಕೊಳಚೆಯಲ್ಲಿ ಬಿದ್ದು ಹೊರಲಾಡುತ್ತಿರುತ್ತದೆ. ಅದಕ್ಕೆ ಸ್ಪಷ್ಟ ನಿದರ್ಶನ ಇವತ್ತಿನ ಸುದ್ದಿಮಾಧ್ಯಮಗಳಲ್ಲಿ ಹೊಲಸು ಕಕ್ಕುತ್ತಿರುವ ಆ್ಯಂಕರ್ ಗಳು.
ಮೂರು ದಶಕಗಳಲ್ಲಿ ನನ್ನ ಜೀವನದುದ್ದಕೂ ಮಾಂಸವನ್ನು ಆಹಾರವಾಗಿ ತಿಂದಿದ್ದೇನೆ, ತಿಂದು ಅಸಂಖ್ಯವಾಗಿ ದೇವಸ್ಥಾನಗಳಿಗೆ ಹೋಗಿದ್ದೇನೆ. ದೇವರು, ದೇವಾಲಯ, ಆಚರಣೆ ಮತ್ತು ಆಹಾರ ಎಲ್ಲವೂ ನನ್ನ ಸ್ವಂತ ಆಯ್ಕೆಗಳು. ಅವುಗಳನ್ನ ಹೀಗೆ ನಡೆಸಬೇಕೆಂದು ಹೇಳಲು ಯಾರೊಬ್ಬರಿಗೂ ಹಕ್ಕು, ಅಧಿಕಾರಗಳಿಲ್ಲ. ಮಾಧ್ಯಮಗಳ ಆ್ಯಂಕರು, ರಾಜಕಾರಣಿ, ಮಂತ್ರಿ, ಮಠದ ಸ್ವಾಮಿ, ಯೋಗಗುರು, ಅವನ ಚೇಲಾ ಯಾವನೊಬ್ಬನಿಗೂ ನನ್ನ ದೇವರು, ದೇವಸ್ಥಾನ ಮತ್ತು ಆಹಾರದ ಬಗ್ಗೆ ನಿರ್ಬಂಧ ವಿಧಿಸುವ ಯೋಗ್ಯತೆಗಳಾಗಲಿ, ಅಧಿಕಾರವಾಗಲಿ ಇರುವುದೇ ಇಲ್ಲ. ಇವು ಕೇವಲ ಖಾಸಗಿ ಮಾನವ ಹಕ್ಕುಗಳಾಗಿಲ್ಲ. ಇವು ನನ್ನ ದೇಶದ ಸಂವಿಧಾನ ಬದ್ದವಾದ ಹಕ್ಕುಗಳಾಗಿವೆ'' ಎಂದು ಲೇಖಕ ರಾಜೇಂದ್ರ ಪ್ರಸಾದ್ ಅವರು ಫೋಸ್ಟ್ ಮಾಡಿದ್ದಾರೆ.
''ಕೋಳಿ ಖಾದ್ಯಗಳು ವಾಜಪೇಯಿಯವರಿಂದ ಹಿಡಿದು ಪುನೀತ್ ರಾಜಕುಮಾರರವರಗೆ ಸರ್ವರಿಗೂ ಪ್ರಿಯ! ಒಡಲು ಹಾಗೂ ಮಿದುಳಲ್ಲಿ ಸದಾ ಹೊಲಸನ್ನೆ ತುಂಬಿಕೊಂಡಿರುವ ಮಾನವ ಕೋಳಿ ಅಥವಾ ಸೊಪ್ಪು ತಿಂದು ಇಲ್ಲಾ ಉಪವಾಸದಿಂದ ಯಾರೂ ಅರಿಯದೆ ಸೃಷ್ಟಿಸಿರುವ ಗುಡಿಯನ್ನು ಹೊಕ್ಕರೆ ಬೇಡವೆನ್ನುವ ದೇವರಿರುವರೆ?'' ಎಂದು ಪ್ರಹ್ಲಾದ ಕುಣಿಗಲ್ ಹನುಮಂತಯ್ಯ ಎಂಬವರು ಟ್ವೀಟಿಸಿದ್ದಾರೆ.
''ನಾನು ಪ್ಯೂರ್ ವೆಜ್ ಅದೇಕೋ ಸಣ್ಣಿಂದ ತಿಂದಿಲ್ಲ ಅದೇ ಅಭ್ಯಾಸ ಆಯ್ತು...ನನ್ನ ಮಗ ಪ್ಯೂರ್ ನಾನ್ ವೆಜ್ ಅವನಿಗೆ ಬೇಯಿಸಿದ ಮಾಂಸ ಕ್ಕಿಂತ ಸುಟ್ಟ (ತಂದೂರಿ) ಮಾಂಸವೆ ಬಲು ಇಷ್ಟ..ವಾರದಲ್ಲಿ ಕನಿಷ್ಠ 3 ದಿನ ಕೊಡ್ಸ್ತೀವಿ. ನನ್ನ ಮಗ ಹೇಳೋ ಪ್ರಕಾರ ಆ ಸುಟ್ಟ ಮಾಂಸ ಅದ್ಭುತ ರುಚಿಯಿರುತ್ತದೆ ಎಂದು.. ಇನ್ನೊಬ್ಬರ ಆಹಾರ ಕಸಿಯೋಕೆ ನಾವು ಯಾರ್ರೀ.. ಅವರಿವರಿಗೆ ಇಷ್ಟ ವಾದದ್ದು ಅವರು ತಿಂತಾರೆ...'' ಎಂದು ಸುರೇಶ್ ಎಂಬವರು ಅಭಿಪ್ರಾಯಿಸಿದ್ದಾರೆ.
ಮಾಂಸ ತಿನ್ನೋರನ್ನ ಅಸ್ಪೃಶ್ಯರ ತರ ನೋಡ್ತಾರೆ,
— ಜಗನ್ JAGAN (@kannadigajagan) August 21, 2022
ಮೊದಲು ಆ ಕೀಳರಿಮೆಯನ್ನ ತಗಿಬೇಕು
ನನ್ನ ಆಹಾರ ನನ್ನ ಹಕ್ಕು
— Gulabi Bilimale (@GBilimale) August 22, 2022
ನೀ ಯಾವನಯ್ಯ ಕೇಳೋಕೆ ? pic.twitter.com/xwx3WByeaH







