ನಿವೃತ್ತ ನ್ಯಾಯಾಧೀಶರಿಗೆ ಜೀವಮಾನ ಮನೆ ಕೆಲಸದ ಸಹಾಯಕ, ಕಾರು ಚಾಲಕ: ಕೇಂದ್ರದಿಂದ ನಿಯಮಗಳಿಗೆ ತಿದ್ದುಪಡಿ

Update: 2022-08-28 17:31 GMT
ಸುಪ್ರೀಂ ಕೋರ್ಟ್‌

ಹೊಸದಿಲ್ಲಿ, ಆ. 28: ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಅವರ ಸಂಪೂರ್ಣ ಜೀವಿತಾವಧಿಗೆ ಮನೆ ಕೆಲಸದ ಸಹಾಯಕ, ಕಾರುಚಾಲಕ ಹಾಗೂ ಕಾರ್ಯಾಲಯದ ಸಹಾಯಕನನ್ನು ಒದಗಿಸಲು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಯಮಗಳಿಗೆ ಈ ವಾರ ಶುಕ್ರವಾರ ಎರಡನೇ ಬಾರಿ ತಿದ್ದುಪಡಿ ಮಾಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಎನ್.ವಿ.ರಮಣ ಅವರು ನಿವೃತ್ತರಾದ ದಿನವೇ ಕೇಂದ್ರ ಸರಕಾರ ಈ ನಿಯಮಗಳಿಗೆ  ತಿದ್ದುಪಡಿ ಮಾಡಿದೆ. 

ನಿವೃತ್ತ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಹಾಗೂ ಮುಖ್ಯ ನ್ಯಾಯಮೂರ್ತಿಗಳಿಗೆ ಕಾರು ಚಾಲಕ, ಕಾರ್ಯಾಲಯದ ಸಹಾಯಕ ಹಾಗೂ ಅವರ ನಿವಾಸಗಳಿಗೆ ಒಂದು ವರ್ಷಗಳ ಕಾಲ 24 ಗಂಟೆಯೂ ಭದ್ರತಾ ವ್ಯವಸ್ಥೆ ಒದಗಿಸಲು ಕಾನೂನು ಹಾಗೂ ನ್ಯಾಯ ಸಚಿವಾಲಯ ಈ ಹಿಂದೆ ಆಗಸ್ಟ್ 23ರಂದು ನಿಯಮಗಳಿಗೆ ತಿದ್ದುಪಡಿ ಮಾಡಿತ್ತು. ಆದರೆ, ಈ ತಿದ್ದುಪಡಿ ನಿಯಮದಲ್ಲಿ ಮನೆ ಕೆಲಸದ ಸಹಾಯಕನ ಬಗ್ಗೆ ಉಲ್ಲೇಖಿಸಿರಲಿಲ್ಲ. 
ಹೊಸ ತಿದ್ದುಪಡಿಯಲ್ಲಿ ನಿವೃತ್ತರಾದ ದಿನಾಂಕದಿಂದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ 5 ವರ್ಷಗಳ ಅವಧಿಗೆ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಗೆ 3 ವರ್ಷಗಳ ಅವಧಿಗೆ 24 ಗಂಟೆಗಳ ಕಾಲ ಭದ್ರತೆ ಸೌಲಭ್ಯ ವಿಸ್ತರಿಸಲಾಗಿದೆ. 

ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾದ 6 ತಿಂಗಳ ಬಳಿಕ ದಿಲ್ಲಿಯಲ್ಲಿ ನಿಯೋಜಿತ ಅಧಿಕೃತ ವಸತಿಯಲ್ಲದ ಬಾಡಿಗೆ ರಹಿತ ಉಚಿತ 7ನೇ ಮಾದರಿಯ ವಸತಿಗೆ ಕೂಡ ಅರ್ಹರಾಗಲಿದ್ದಾರೆ ಎಂದು ನಿಯಮ ಹೇಳಿದೆ.  ವಿಮಾನ ನಿಲ್ದಾಣದ ವಿರಾಮ ಕೊಠಡಿಗಳಲ್ಲಿ ಶಿಷ್ಟಾಚಾರಕ್ಕೆ ಅನುಗುಣವಾಗಿ ನಿವೃತ್ತ ಮುಖ್ಯ ನ್ಯಾಯಾಧೀಶರು ಹಾಗೂ ನ್ಯಾಯಾಧೀಶರಿಗೆ ಸೌಜನ್ಯ ನೀಡುವುದನ್ನು ತಿದ್ದುಪಡಿ ನಿಯಮದಲ್ಲಿ ಸೇರಿಸಲಾಗಿದೆ. 

‘‘ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ತನ್ನ ನಿವಾಸಕ್ಕೆ ಉಚಿತ ದೂರವಾಣಿಗೆ ಅರ್ಹರಾಗುತ್ತಾರೆ. ಅಲ್ಲದೆ, ತಿಂಗಳಿಗೆ 4,200 ರೂಪಾಯಿ ಜೊತೆಗೆ ತೆರಿಗೆ ಹೆಚ್ಚಾಗದ ನಿವಾಸದ ದೂರವಾಣಿ ಅಥವಾ ಮೊಬೈಲ್ ಅಥವಾ ಬ್ರಾಂಡ್‌ಬ್ಯಾಂಡ್ ಅಥವಾ ಮೊಬೈಲ್ ಡಾಟಾ ಅಥವಾ ಡಾಟಾ ಕಾರ್ಡ್‌ಗಳ ಶುಲ್ಕವನ್ನು ಹಿಂಪಡೆಯಬಹುದು ಎಂದು ನಿಯಮಗಳು ಹೇಳಿವೆ. 
ಯಾವುದೇ ಉಚ್ಚ ನ್ಯಾಯಾಲಯ ಅಥವಾ ಸರಕಾರದ ಸಂಸ್ಥೆಯಿಂದ ಇಂತಹದೇ ಸೌಲಭ್ಯವನ್ನು ಪಡೆಯದವರಿಗೆ ಮಾತ್ರ ಈ ನಿವೃತ್ತಿಯ ನಂತರದ ಸೌಲಭ್ಯಗಳನ್ನು ನೀಡಲಾಗುವುದು ಎಂದು ಶುಕ್ರವಾರ ಜಾರಿಗೊಳಿಸಲಾದ ಅಧಿಸೂಚನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News