ರಾಜ್ಯದಲ್ಲಿ ಭಾರೀ ಮಳೆಗೆ ಬಾಲಕಿ ಸೇರಿ ಐದು ಮಂದಿ ಮೃತ್ಯು

Update: 2022-08-30 06:28 GMT
ಬೆಂಗಳೂರು-ಮೈಸೂರು ಹೆದ್ದಾರಿ ಮಧ್ಯೆ ಪ್ರವಾಹದ ನೀರಿನಲ್ಲಿ ಸಿಲುಕಿದ ಕಾರು
 

ಬೆಂಗಳೂರು, ಆ.30: ರಾಜಧಾನಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ರವಿವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. 

ರಾಮನಗರ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಕಣ್ವ ನದಿಯಿಂದ ನಾಲ್ಕು ಸಾವಿಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹೊರಗೆ ಬಿಟ್ಟ ಪರಿಣಾಮ ರಾಮನಗರದ ತಗ್ಗು ಪ್ರದೇಶಗಳು ಸೇರಿದಂತೆ ಹಲವಾರು ಗ್ರಾಮಗಳಿಗೆ ಜಲ ದಿಗ್ಬಂಧನದಲ್ಲಿವೆ. ರಾಜ್ಯದಲ್ಲಿ ಮಳೆ ಸಂಬಂಧಿಸಿದ ಅವಘಡಗಳಲ್ಲಿ ಬಾಲಕಿ ಸೇರಿ ಐದು ಮಂದಿ ಮೃತಪಟ್ಟಿರುವುದು ವರದಿಯಾಗಿದೆ. 

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ತೊರೆದೊಡ್ಡಿ ಗ್ರಾಮದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಆಲದ ಮರ ಉರುಳಿಬಿದ್ದು ಇಟ್ಟಮಡು ನಿವಾಸಿ ಬೋರೇಗೌಡ (52) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಉದ್ಬಾಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮೂರು ವರ್ಷದ ಬಾಲಕಿ ಶ್ರೀದೇವಿ ಮೃತಪಟ್ಟಿರುವುದು ವರದಿಯಾಗಿದೆ.

ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಪಟ್ಟಣದ ಲೋಕೋಪಯೋಗಿ ವಸತಿ ನಿಲಯದ ನಿವಾಸಿ ನಿವೃತ್ತ ಶಿಕ್ಷಕ ಗಂಗಾಧರಪ್ಪ (63)  ರಸ್ತೆ ಗುಂಡಿಯಿಂದಾಗಿ ಸಾವಿಗೀಡಾಗಿದ್ದಾರೆ. ಬೆಂಗಳೂರು ಗ್ರಾಮಾತರ ಜಿಲ್ಲೆಯ ಸೊಣ್ಣಹಳ್ಳಿಪುರ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಸವರಾಜ (60) ಎಂಬವರು ಮೃತಪಟ್ಟಿದ್ದಾರೆ. 

ಚಾಮರಾಜನಗರ ಜಿಲ್ಲೆಯ ಮಾಂಬಳ್ಳಿ ಪೊಲೀಸ್ ಠಾಣೆ ಜಲಾವೃತಗೊಂಡಿದ್ದು, ರಸ್ತೆಯಲ್ಲಿ ಹರಿಯುವ ನೀರಿನಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭದ್ರಾ ಎಡದಂಡೆ ಕಾಲುವೆಯ ತಡೆಗೋಡೆ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸೋಮವಾರ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಕೆರೆ ಕೋಡಿಗಳು ತುಂಬಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ 1955ರಲ್ಲಿ ಕಟ್ಟಿದ್ದ ಕಾಲುವೆ ತಡೆಗೋಡೆ ಒಡೆದು ಪಕ್ಕದ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಭತ್ತ, ಅಡಿಕೆ ತೋಟ ಸೇರಿದಂತೆ ಸಾವಿರಾರು ಎಕರೆ ಕೃಷಿ ತೋಟಗಳಿಗೆ ಹಾನಿಯಾಗಿದೆ.

ಇದನ್ನೂ ಓದಿ: ನಿಮ್ಮೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ: ರಮ್ಯಾ ಟ್ವೀಟ್ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News