ಮುರುಘಾ ಶ್ರೀ ಯನ್ನು ಬೆಂಬಲಿಸಿದ ಮಾದಾರ ಚನ್ನಯ್ಯ ಸ್ವಾಮೀಜಿಗೆ ಪತ್ರಕರ್ತ ಎನ್.ರವಿಕುಮಾರ್ ಬಹಿರಂಗ ಪತ್ರ

Update: 2022-09-02 18:19 GMT
ಮಾದಾರ ಚನ್ನಯ್ಯ ಸ್ವಾಮೀಜಿ  | ಡಾ ಶಿವಮೂರ್ತಿ ಮುರುಘಾ ಶರಣರು

ಬೆಂಗಳೂರು: ಲೈಂಗಿಕ ಕಿರುಕುಳ ಆರೋಪ  ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಶರಣರನ್ನು ಬೆಂಬಲಿಸಿ ಮಾತನಾಡಿದ ಆದಿ ಜಾಂಬವ ಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ವಿರುದ್ಧ ಪತ್ರಕರ್ತ, ಲೇಖಕ ಎನ್.ರವಿಕುಮಾರ್ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. 

'ಬಸವಾದಿಶರಣರ ವಚನ ಸಂಹಿತೆಗಳಿಂದ ಮಾದಿಗ ಸಮುದಾಯದ ಹೊಸ ತಲೆಮಾರುಗಳನ್ನು ವೈಚಾರಿಕವಾಗಿ, ಜ್ಞಾನಪೂರ್ಣವಾಗಿ , ಶರಣಸಂಪನ್ನರನ್ನಾಗಿ  ಸದೃಢಗೊಳಿಸಬೇಕಿದ್ದ ನಿಮ್ಮಲ್ಲಿ ಸಿದ್ಧಾಂತ ವ್ಯತಿರಿಕ್ತವಾದ ವೈದಿಕತೆ, ಸನಾತನ ವಿಚಾರಧಾರೆಗಳ ಸಂಸ್ಥೆ ಮತ್ತು ರಾಜಕೀಯಪಕ್ಷಗಳ  ಪರಿಚಾರಕರತನ ಎದ್ದು ಕಾಣುತ್ತಿದೆ. ಆರೋಪಿ ಸ್ಥಾನದಲ್ಲಿರುವ ಮುರುಘಾ ಶರಣರನ್ನು ಬೆಂಬಲಿಸ ಹೊರಟಿರುವುದು ದೌಭಾರ್ಗ್ಯದ ಸಂಗತಿಯಾಗಿದೆ'  ಎಂದು ರವಿಕುಮಾರ್ ಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. 

ರವಿಕುಮಾರ್ ಅವರ ಪತ್ರದ ಪೂರ್ಣ ಪಾಠ ಇಲ್ಲಿದೆ...

ಶ್ರೀಮಾದಾರಚನ್ನಯ್ಯ ಶರಣರಿಗೆ

ಶರಣರೇ..,

ಮುರುಘಾಬೃಹನ್ಮಠದ ಮುರುಘಾಶರಣರು ಮುನ್ನಡೆಸಿಕೊಂಡು ಬಂದಿದ್ದ ಪ್ರಗತಿಪರ, ಬಸವಾದಿ ಶರಣರ ಆಶಯಗಳ ಅನುಷ್ಠಾನದ ಪರಂಪರೆ ಬಗ್ಗೆ ನಾಡಿಗೆ ಗೊತ್ತಿದೆ. ಆದರೆ ಇಂತಹ ಮುರುಘಾಶರಣರು ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಪ್ರಕರಣ ಅವರ ಮೇಲೆ ದಾಖಲಾಗಿದೆ. ಇದಕ್ಕಷ್ಟೆ ಸೀಮಿತವಾಗಿ ಹೇಳುವುದಾದರೆ, ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ನಾನು ಆಗ್ರಹಿಸುತ್ತೇನೆ. ಈ ನಾಗರಿಕ ಸಮಾಜ ಕೂಡ ಇದನ್ನೇ ಆಗ್ರಹಿಸಬೇಕು, ತನಿಖಾ ಸಂಸ್ಥೆಗಳು ಇದೇ ಹಾದಿಯಲ್ಲಿ ಕರ್ತವ್ಯವನ್ನು ನಿರ್ವಹಿಸಬೇಕೂ ಕೂಡ. ಇದೊಂದು ’ನ್ಯಾಯಪ್ರಜ್ಞೆ’. ಆದರೆ ಈ ಸಮಾಜದೊಳಗೆ ಇರುವ ನೀವು ಸೇರಿದಂತೆ ಇತರೆ ಮಠಾಧೀಶರುಗಳು ಇಂತಹ ನ್ಯಾಯಪ್ರಜ್ಞೆಯನ್ನು ವ್ಯಕ್ತಪಡಿಸದೆ ಆರೋಪಿ ಸ್ಥಾನದಲ್ಲಿರುವ ಮುರುಘಾ ಶರಣರನ್ನು ಬೆಂಬಲಿಸ ಹೊರಟಿರುವುದು ದೌಭಾರ್ಗ್ಯದ ಸಂಗತಿ.

ಇದನ್ನೂ ಓದಿ>>> ಆಸ್ತಿ ಅವ್ಯವಹಾರ ಆರೋಪ: ಮುರುಘಾ ಶ್ರೀ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯ

ಮುರುಘಾ ಶರಣರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿರುವ ಇಬ್ಬರು ಬಾಲಕಿಯರು ಹಿಂದುಳಿದ ಮತ್ತು ಮಾದಿಗ ಸಮುದಾಯಕ್ಕೆ ಸೇರಿದವರೆನ್ನೆಲಾಗಿದೆ. ಇಲ್ಲಿ ಜಾತಿ ಅಪ್ರಸ್ತುತ ನಿಜ, ಹೆಣ್ಣು ಜಾತ್ಯಾತೀತ ಮತ್ತು ಧರ್ಮಾತೀತವಾಗಿ ಸದಾ ಶೋಷಣೆಗೆ ಒಳಗಾಗುತ್ತಲೇ ಇರುತ್ತಾಳೆ. ಈ ಪ್ರಕರಣದಲ್ಲಿ ಈ ಇಬ್ಬರೂ ಹೆಣ್ಣು ಮಕ್ಕಳು ಸಮಾನ ಸಂತ್ರಸ್ತರೇ ಆಗಿರುತ್ತಾರೆ. ಈ ಇಬ್ಬರಲ್ಲೂ ಜಾತಿ ಬಗೆದು ನೋಡಬೇಕಾಗಿಲ್ಲ. ಆದರೆ ಈ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಾದಿಗ ಸಮುದಾಯದ ಹೆಣ್ಣು ಮಗಳೊಬ್ಬಳ ಮಾನ, ಪ್ರಾಣ, ಆತ್ಮ ಗೌರವ, ಸಾಮಾಜಿಕ ಗೌರವ ರಕ್ಷಣೆ ಕುರಿತು ನೀವು ’ಉತ್ತರದಾಯಿ’ ಗಳು ಎಂಬುದನ್ನು ಸ್ಪಷ್ಟವಾಗಿ ಆಗ್ರಹಿಸುತ್ತೇನೆ.

ನೀವು, ಈ ನಾಡಿನ ಸಮಸ್ತ ಮಾದಿಗ ಸಮುದಾಯದ ಪ್ರಾತಿನಿಧಿಕ  ಧಾರ್ಮಿಕ ನಂಬುಗೆಯ ಶ್ರದ್ಧಾಕೇಂದ್ರವಾದ ಮಾದರಾಚನ್ನಯ್ಯ ಗುರುಪೀಠದ  ಪೀಠಾಧ್ಯಕ್ಷರಾಗಿ ಇದೇ ಮುರುಘಾಶರಣರಿಂದ   ’ಸದ್ಯೋನ್ಮುಕ್ತ’   ದೀಕ್ಷೆಯನ್ನು ಪಡೆದಿದ್ದೀರ.   ಈ ಸಮಾಜದ ಕಟ್ಟಕಡೆಯ ದುರ್ಬಲ ಸಮುದಾಯವಾಗಿರುವ ಮಾದಿಗ ಸಮುದಾಯದ ಗುರುವಾಗಿ ಈ ಸಮುದಾಯವನ್ನು ಸಾಮಾಜಿಕ ಗೌರವ, ಶೈಕ್ಷಣಿಕ ಅಭ್ಯುದಯ, ವೈಚಾರಿಕ ಅರಿವಿನಡೆಗೆ ಕೊಂಡೊಯ್ಯುವ  ಗುರಿ ನಿಮ್ಮದಾಗಬೇಕಿತ್ತು.  ದುರಾದೃಷ್ಟವೆಂದರೆ ಮಾದಾರಚನ್ನಯ್ಯ ಗುರುಮಠ   ಮನೋಲಯ ದೀಕ್ಷೆಯನ್ನೆ ಧಿಕ್ಕರಿಸಿದ ಲೌಕಿಕ ಭೋಗಗಳಲ್ಲೊಂದಾದ ರಾಜಕೀಯ ಮೋಹ ತುಂಬಿದ ,  ವಚನಸಂಹಿತೆ ಭ್ರಷ್ಟತೆಯ ಮೈದಾನವಾಗಿದೆ. "ನಡೆ ನುಡಿ ಶುದ್ದವಿಲ್ಲದಿದ್ದರೆ ಚಂದೇಶ್ವರಲಿಂಗವಾದರೂ ತಪ್ಪನೊಳಕೊಳ್ಳೆ"  ಎಂಬ ಅರಿವನ್ನು ಮರೆತುಬಿಟ್ಟಂತಿದೆ.  ಬಸವಣ್ಣ ಯಾವ ವೈದಿಕ ವಿಚಾರಧಾರೆಗಳ ವಿರುದ್ದ ಬಂಡೆದ್ದು  ಹೋರಾಡಿದರೂ  ಅಂತಹ ವಿಚಾರಧಾರೆಯ ಅನುಯಾಯಿಗಳಿಗಿಂತಲೂ ಮಿಗಿಲಾದ ನಿಮ್ಮ ಸಡಗರ  ಬಸವಣ್ಣರಿಗೆ ಬಗೆಯುತ್ತಿರುವ ದ್ರೋಹವೆಂದೆ ಭಾವಿಸಬೇಕಾದ ನಿಷ್ಠುರಕ್ಕೆ ಮಾದಿಗ ಸಮುದಾಯವನ್ನು ದೂಡಿದ್ದೀರ.   

ಬಸವಾದಿಶರಣರ ವಚನ ಸಂಹಿತೆಗಳಿಂದ ಮಾದಿಗ ಸಮುದಾಯದ ಹೊಸ ತಲೆಮಾರುಗಳನ್ನು ವೈಚಾರಿಕವಾಗಿ, ಜ್ಞಾನಪೂರ್ಣವಾಗಿ , ಶರಣಸಂಪನ್ನರನ್ನಾಗಿ ಸದೃಢಗೊಳಿಸಬೇಕಿದ್ದ ನಿಮ್ಮಲ್ಲಿ ಸಿದ್ಧಾಂತ ವ್ಯತಿರಿಕ್ತವಾದ ವೈದಿಕತೆ, ಸನಾತನ ವಿಚಾರಧಾರೆಗಳ ಸಂಸ್ಥೆ ಮತ್ತು ರಾಜಕೀಯಪಕ್ಷಗಳ  ಪರಿಚಾರಕರತನ ಎದ್ದು ಕಾಣುತ್ತಿದೆ.  ಮಾದಿಗ ಸಮುದಾಯದ ಕಲ್ಯಾಣವೆಂದರೆ  ತದ್ವಿರುದ್ದ ವಿಚಾರಧಾರೆಯ ಸಂಘಟನೆಗಳ ಮುಂದೆ ನಿಸ್ಸ್ವಾಭಿಮಾನಿಯಾಗಿ ಮಂಡಿಯೂರಿ ಸರ್ಕಾರದಿಂದ ದುಡ್ಡು, ಸೈಟು ಪಡೆದು ಕಟ್ಟಡಗಳನ್ನು  ಕಟ್ಟುವುದು, ಇದಕ್ಕೆ ಋಣಸಮರ್ಪಣೆಯಂತೆ ಚುನಾವಣೆಗಳಲ್ಲಿ  ಮಾದಿಗ ಸಮುದಾಯವನ್ನು ಒಂದು ರಾಜಕೀಯ ಪಕ್ಷಕ್ಕೆ  ಪಕ್ಕಾಗಿಸುವುದು ಎಂದರ್ಥವೇ?. "ಗುರುವಿಡಿದು  ಕುರುಹ ಕಾಣಬೇಕು. ಗುರುವಿಡಿದು ಅರುಹ ಕಾಣಬೇಕು. ಗುರುವಿಡಿದು ಆಚಾರವ ಕಾಣಬೇಕು" ಎನ್ನುವಾಗ ಮಾದಿಗ ಸಮುದಾಯ ಶರಣಗುರು ದೀಕ್ಷೆಯ ವಿಮುಖರಂತೆ ಕಾಣುತ್ತಿರುವ ನಿಮ್ಮನ್ನು (ಗುರು)ಹಿಡಿದು ಏನು ಕಾಣಬೇಕು ಎಂಬ  ಪ್ರಶ್ನೆ  ನನ್ನ ಅಸಂಘಟಿತ ಮಾದಿಗ ಸಮುದಾಯದ ಮುಂದೆ ಇದೆ.

ಆರೋಪಿ ಸ್ಥಾನದಲ್ಲಿರುವ ಮುರುಘಾ ಶರಣರನ್ನು ಬೆಂಬಲಿಸುವ ಬಹಿರಂಗ ಹೇಳಿಕೆ ನೀಡುವ ನೀವು ತಮ್ಮದೆ ಆದ ಮಾದಿಗ ಸಮುದಾಯದ ಅಪ್ರಾಪ್ತ ಬಾಲಕಿಯೊಬ್ಬಳು ಸಂತ್ರಸ್ತೆಯಾಗಿರುವುದನ್ನು ಮರೆತುಬಿಟ್ಟಿರೇಕೆ? ಆ ಹೆಣ್ಣು ಮಗು ,  ಮತ್ತವರ ಕುಟುಂಬ  ಆರೋಪಿಯ ಬಲಿಷ್ಠ ಪ್ರಭಾವದ  ಕಾವಿನಲ್ಲಿ ಹೇಗೆಲ್ಲಾ ನರಳಿ ನಲುಗುತ್ತಿರಬಹುದು ಎಂಬುದನ್ನು ನಿಸ್ಸಂಸಾರಿಯಾದ ನೀವು ಅರ್ಥಮಾಡಿಕೊಳ್ಳಲು ಸಾಧ್ಯವೆ?!

ಈ ಸಮಾಜದಲ್ಲಿ ಬಲಿಷ್ಠ ಜಾತಿಗಳು ಭ್ರಷ್ಟಾಚಾರ, ಅತ್ಯಾಚಾರ ಏನೆಲ್ಲಾ ಮಾಡಿಯೂ ದಕ್ಕಿಸಿಕೊಂಡು ಬಿಡಬಲ್ಲವೂ , ಮತ್ತೆ ಸಮಾಜದ ಮುಖ್ಯವಾಹಿನಿಯಲ್ಲಿ ಆ ಸಮುದಾಯದ ಕಳಂಕಿತರು  ಗಣ್ಯರಾಗಿ, ಮಾನ್ಯರಾಗಿ ಮೆರೆಯಬಲ್ಲವರು.  ಅವರ ಬದುಕು ಒಂದು ಆದರ್ಶವೂ ಆಗಿಬಿಡಬಲ್ಲದು ಎಂಬುದಕ್ಕೆ ಅನೇಕ ನಿದರ್ಶನಗಳಿವೆ.  ಆದರೆ ತಲೆಗೆ ಬಟ್ಟೆ ಇಲ್ಲದ ಜಾತಿಗಳಿಗೆ ಇಂತಹ ಶಕ್ತಿ -ಯುಕ್ತಿ ಇಲ್ಲ.   ಹಾಗೊಮ್ಮೆ ಇಂತಹುದೇ ಆರೋಪ ಈ ತಬ್ಬಲಿ ಜಾತಿಗಳ ಮಠಾಧಿಪತಿಗಳ ಮೇಲೆ ಬಂದಿದ್ದರೆ ಇಷ್ಟೊತ್ತಿಗೆ ಏನೆಲ್ಲಾ ಪರಿಣಾಮ ಆಗಿರುತ್ತಿತ್ತು ಎಂಬುದನ್ನು ನಿಮ್ಮ ಊಹೆಗೆ ಬಿಡುತ್ತೇನೆ.  

ಸತ್ಯ ಮತ್ತು ನ್ಯಾಯದ ಪ್ರಶ್ನೆ ಬಂದಾಗ ಬಿಜ್ಜಳನ ಭಂಡಾರ ಪದವಿಯನ್ನೇ ಧಿಕ್ಕರಿಸಿ ಬಂದ ಬಸವಣ್ಣ,  ತನ್ನ ಸಮುದಾಯದ ಸ್ವಾಭಿಮಾನಕ್ಕಾಗಿ ಬದುಕನ್ನೆ ತ್ಯಾಗ ಮಾಡಿದ ಬಾಬಾಸಾಹೇಬ್ ಅಂಬೇಡ್ಕರ್ ನಿಮಗೆ ಎಲ್ಲಾ ಕಾಲಕ್ಕೂ ಆದರ್ಶರು ಎನಿಸುವುದಿಲ್ಲವೇ? ಪ್ರಕರಣ ತನಿಖೆಯ ಆರಂಭಿಕ ಹಂತದಲ್ಲಿರುವಾಗ ಯಾರೇ ಆದರೋ ಪ್ರಭಾವಿ ಆರೋಪಿಗೆ ಬೆಂಬಲ ನೀಡುವುದು ಸತ್ಯದ ಮೇಲೆ, ಸಹಜ ನ್ಯಾಯದ ಮೇಲೆ  ದುಷ್ಪರಿಣಾಮ ಬೀರುವ ಅಥವಾ ಸಂತ್ರಸ್ತೆಯನ್ನು  ಅಸಹಾಯಕಳನ್ನಾಗಿ ಮಾಡುವ  ಬೆದರಿಕೆಯೂ ಆಗಿರುತ್ತದೆ.

ಮುರುಘಾಮಠಕ್ಕೆ ’ಲಿಂಗಾಯಿತ ಪರಂಪರೆ’ (ಆರ್ಥಿಕವಾಗಿ,ರಾಜಕೀಯವಾಗಿ, ಸಾಮಾಜಿಕವಾಗಿ ಬಲಿಷ್ಠವಾದ) ಇದೆ. ಅದು ತೀರ‍್ಮಾನ ಕೈಗೊಳ್ಳುತ್ತದೆ ಎಂದು ಹೆಮ್ಮೆ ಯಿಂದ ಹೇಳುವ ನೀವು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ದುರ್ಬಲವಾಗಿರುವ ಮಾದಿಗ ಸಮುದಾಯದ ಅಪ್ರಾಪ್ತ ಹೆಣ್ಣುಮಗಳೊಬ್ಬಳ ಮತ್ತು ಆಕೆಯ ಕುಟುಂಬದ ಆತ್ಮಗೌರವ, ಚಾರಿತ್ರ್ಯವನ್ನು ಕಾಪಾಡುವುದು, ದಿಟ್ಟದನಿಯಲ್ಲಿ ನ್ಯಾಯ  ಕೇಳುವುದು  ಮತ್ತು ತನ್ನ ದುರ್ಬಲ ಸಮುದಾಯದ ಜೊತೆ  ನಿಲ್ಲುವುದು ಧರ್ಮ, ನ್ಯಾಯ ಮತ್ತು ಆತ್ಮಸಾಕ್ಷಿಯ ನಡೆಯಾಗುತ್ತದೆ.

ಇದಕ್ಕೆ ಭಿನ್ನ ಹಾದಿ ನಿಮ್ಮದಾದರೆ  ನಿಮಗೆ ಮಾದಿಗ ಸಮುದಾಯವನ್ನು ಪ್ರತಿನಿಧಿಸುವ ಯಾವ ನೈತಿಕ ಹಕ್ಕಿಲ್ಲ.  ನಿಮ್ಮನ್ನು ಗುರುವೆಂದು ಮಾದಿಗ ಸಮುದಾಯ ಭಾವಿಸಬೇಕಾಗಿಲ್ಲ ಎಂದೆನಿಸುತ್ತದೆ.

- ಎನ್.ರವಿಕುಮಾರ್ 
ಪತ್ರಕರ್ತ- ಲೇಖಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News