ಅಸ್ಸಾಂ: ಮದರಸ ಧ್ವಂಸಗೊಳಿಸಿದ ಸ್ಥಳೀಯರು; ವರದಿ

Update: 2022-09-06 17:59 GMT
Photo : NDTV 

ಗುವಾಹಟಿ, ಸೆ. 6: ಅಸ್ಸಾಂನ ಗೋಲಪಾರ ಜಿಲ್ಲೆಯಲ್ಲಿರುವ ಮದರಸವೊಂದನ್ನು ಸ್ಥಳೀಯರು ಧ್ವಂಸಗೊಳಿಸಿದ್ದಾರೆ. ಮದರಸದ ಆವರಣವನ್ನು ಬಾಂಗ್ಲಾದೇಶದ ಇಬ್ಬರು ಪ್ರಜೆಗಳು ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎಂದು NDTV ವರದಿ ಮಾಡಿದೆ.

ಭಯೋತ್ಪಾದನೆಯೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಅಸ್ಸಾಂನಲ್ಲಿ ಕಳೆದ ಒಂದು ತಿಂಗಳಲ್ಲಿ ಧ್ವಂಸಗೊಳ್ಳುತ್ತಿರುವ ನಾಲ್ಕನೇ ಮದರಸ ಇದಾಗಿದೆ.

ಬಾಂಗ್ಲಾದೇಶದ ಈ ಇಬ್ಬರು ಪ್ರಜೆಗಳಾದ ಅಮೀನುಲ್ ಇಸ್ಲಾಂ ಹಾಗೂ ಜಹಾಂಗೀರ್ ಅಲೋಮ್ 2020-22ರ ನಡುವೆ ಮದರಸದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್‌ಕೈದಾ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ನಿಷೇಧಿತ ಉಗ್ರ ಸಂಘಟನೆ ಅನ್ಸಾರುಲ್ಲಾ ಬಾಂಗ್ಲಾ ಟೀಮ್‌ನ ಸದಸ್ಯರಾಗಿದ್ದರು. ಇಬ್ಬರೂ ಪರಾರಿಯಾಗಿದ್ದು, ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಖಿಯುರಾ ಚಾರ್ ಪ್ರದೇಶದಲ್ಲಿರುವ ಮದರಸದ ಬಳಿಯ ಮನೆಯೊಂದನ್ನು ಕೂಡ ಧ್ವಂಸಗೊಳಿಸಲಾಗಿದೆ. ಈ ಧ್ವಂಸ ಕಾರ್ಯಾಚರಣೆಯಲ್ಲಿ ಸರಕಾರಿ ಅಧಿಕಾರಿಗಳು ಭಾಗಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಿಹಾದಿ ಚಟುವಟಿಕೆಗಳ ವಿರುದ್ಧ ತೀವ್ರ ಅಸಮಾಧಾನದ ಸಂಕೇತವಾಗಿ ಸ್ಥಳೀಯರು ಸ್ವಯಂಪ್ರೇರಿತವಾಗಿ ಮದರಸ ಹಾಗೂ ಅದರ ಸಮೀಪ ಇದ್ದ ಮನೆಯನ್ನು ಧ್ವಂಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News