ಮುಳುಗಿದ ಬೆಂಗಳೂರು ತೇಲಿದ ಅಕ್ರಮಗಳು

Update: 2022-09-07 04:58 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯಕ್ಕೆ ನೆರೆ ಹೊಸತೇನೂ ಅಲ್ಲ. ಕೊಡಗು ಜಿಲ್ಲೆ, ಮಲೆನಾಡು ಮತ್ತು ಉತ್ತರ ಕರ್ನಾಟಕ ಪ್ರತಿವರ್ಷ ಅತಿವೃಷ್ಟಿಗೆ ಬೆಲೆ ತೆರುತ್ತಲೇ ಇವೆ. ರಾಜಕಾರಣಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಘೋಷಣೆ ಮಾಡುವುದು, ಅಧಿಕಾರಿಗಳು ಆ ಪರಿಹಾರವನ್ನು ವಿತರಿಸಿದಂತೆ ನಾಟಕವಾಡುವುದು ಪ್ರತೀ ವರ್ಷ ನಡೆಯುತ್ತದೆ. ಊರಿಗೆ ಊರೇ ಮುಳುಗಿ ಸಾವು ನೋವು ಸಂಭವಿಸಿದಾಗ ಈ ನೆರೆಗಳು ಕೆಲವೊಮ್ಮೆ ಪತ್ರಿಕೆಗಳ ಮುಖಪುಟದ ಸುದ್ದಿಯೂ ಆಗುವುದಿದೆ. ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಭೀಕರ ನೆರೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಆದರೆ ಸಂತ್ರಸ್ತ ಜನರಿಗೆ ಸೂಕ್ತ ರೀತಿಯ ಪರಿಹಾರ ನೀಡಲು ಈವರೆಗೆ ಸರಕಾರಕ್ಕೆ ಸಾಧ್ಯವಾಗಿಲ್ಲ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಳ್ಳುವ ನೆರೆಗೆ ಸಂಪೂರ್ಣ ಮಳೆಯನ್ನೇ ಹೊಣೆ ಮಾಡುವಂತಿಲ್ಲ. ನೆರೆ ರಾಜ್ಯಗಳ ಅಣೆಕಟ್ಟುಗಳಿಂದ ಹೊರ ಬಿಡಲಾಗುವ ಹೆಚ್ಚುವರಿ ನೀರಿನ ಕಾರಣದಿಂದ ಜಿಲ್ಲೆ ಭಾಗಶಃ ಮುಳುಗಿ ಬಿಡುತ್ತದೆ. ಹಾಗೆಯೇ ಪ್ರಕೃತಿಯ ಜೊತೆಗೆ ಮನುಷ್ಯ ನಡೆಸಿದ ಚೆಲ್ಲಾಟದ ಪರಿಣಾಮಗಳನ್ನು ಮಳೆಗಾಲದಲ್ಲಿ ಉಣ್ಣಬೇಕಾಗುತ್ತದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡು ಕಡಿದು, ಗುಡ್ಡ ಕೊರೆದು ಪ್ರಕೃತಿಯ ಮೇಲೆ ಎಸಗುವ ದೌರ್ಜನ್ಯ ಆತನಿಗೆ ತಿರುಗುಬಾಣವಾಗಿದೆ. ನೆರೆಯಿಂದಾಗಿ ಗ್ರಾಮೀಣ ಪ್ರದೇಶದ ಜನರು ಅನುಭವಿಸುವ ನಷ್ಟಗಳು ನಗರ ಪ್ರದೇಶದ ಜನರಿಗೆ ಅರ್ಥವಾಗುವುದು ಕಡಿಮೆ. ಅರ್ಥವಾಗಬೇಕಾದರೆ ಅವರ ಕಾಲಬುಡಕ್ಕೇ ನೀರು ಬರಬೇಕಾಗುತ್ತದೆ.

   ಈ ಹಿಂದೆ ಮುಂಬೈ ನಗರ ಮಹಾಮಳೆಯಲ್ಲಿ ಮುಳುಗಿ ಹೋದಾಗ ವಿಶ್ವ ಮಟ್ಟದಲ್ಲಿ ಚರ್ಚೆಯಾಗಿತ್ತು. ಕಾಯಕದ ನಗರ ಎಂದೇ ಕರೆಯಲ್ಪಡುತ್ತಿರುವ ಮುಂಬೈಯ ಮಳೆ ಇಡೀ ದೇಶದ ಮೇಲೆ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಬೀರಿತ್ತು. ರಸ್ತೆಯ ಮಧ್ಯೆ ಸಿಲುಕಿಕೊಂಡ ಜನರು ಮನೆ ಸೇರುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯ ನಿಂತ ನೀರಿನಲ್ಲಿ ಹೆಣಗಳು ತೇಲಿದ್ದವು. ಈ ನೆರೆ ನೀರು ಇಳಿದ ಬಳಿಕವೂ ಮುಂಬೈ ಶಹರ ಹಲವು ತಿಂಗಳುಗಳ ಕಾಲ ಚೇತರಿಲಿಲ್ಲ. ಆರ್ಥಿಕ ಸಂಕಷ್ಟವಲ್ಲದೆ, ಸಾಂಕ್ರಾಮಿಕ ಕಾಯಿಲೆಗಳು ಮುಂಬೈಯ ಮೇಲೆ ಎರಗಿತ್ತು. ಮುಂಬೈಯ ಆ ಮಹಾ ಮಳೆ ಎಲ್ಲ ನಗರಗಳಿಗೂ ಪಾಠವಾಗಬೇಕಾಗಿತ್ತು. ಮುಂದಿನ ದಿನಗಳಲ್ಲಿ ಅಂತಹದೊಂದು ದುರಂತ ಉಳಿದ ನಗರಗಳಿಗೆ ಬರದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಮಳೆ ನೀರು ಇಳಿದ ಕೆಲವೇ ದಿನಗಳಲ್ಲಿ ಜನರ ಮನಸ್ಸಿನಿಂದ ಆ ನೆನಪು ಅಳಿಸಿ ಹೋಯಿತು. ಯಾವತ್ತಾದರೂ ಜೋರಾಗಿ ಮಳೆ ಸುರಿದ ದಿನ ಮಾತ್ರ ಮುಂಬೈಯ ಜನರ ಎದೆ ಬಡಿದುಕೊಳ್ಳತೊಡಗುತ್ತದೆ. ಇದೀಗ ಬೆಂಗಳೂರಿನ ಕಾಲ ಬುಡಕ್ಕಲ್ಲ, ಕುತ್ತಿಗೆ ಮಟ್ಟಕ್ಕೆ ನೆರೆ ನೀರು ಬಂದು ನಿಂತಿದೆ. ರಸ್ತೆಗಳೆಲ್ಲ ಮುಳುಗಿವೆ. ಜನಸಂಚಾರ ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಬೃಹತ್ ಉದ್ದಿಮೆಗಳು ಈ ನೆರೆಯಿಂದಾಗಿ ಭಾರೀ ನಷ್ಟವನ್ನು ಅನುಭವಿಸಿವೆ. ರಾಜ್ಯವೆಂದರೆ ನಾವು ಬೆಂಗಳೂರು ಎಂದು ಮಾನಸಿಕವಾಗಿ ಒಪ್ಪಿಕೊಂಡಿದ್ದೇವೆ. ಯಾಕೆಂದರೆ, ಅಕ್ಷರಸ್ಥರು, ಬೃಹತ್ ಉದ್ಯಮಿಗಳು, ರಾಜಕಾರಣಿಗಳು ಹೀಗೆ ಮೇಲ್‌ಸ್ತರದ ಜನರ ನೆಲೆ ಬೀಡು ಬೆಂಗಳೂರು. ಈ ನಗರ ಮುಳುಗಿತು ಎಂದರೆ ಮಾಧ್ಯಮಗಳ ಪಾಲಿಗೆ ಇಡೀ ರಾಜ್ಯವೇ ಮುಳುಗಿದಂತೆ.

ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಮಳೆ ಸುರಿಯುತ್ತಿರುವುದೇನೋ ನಿಜ. ಹಾಗೆಂದು ಇಡೀ ಬೆಂಗಳೂರು ಮುಳುಗಿಲ್ಲ. ಹೊಸ ಬೆಂಗಳೂರು ನೆರೆಯ ಹಾನಿಗೆ ಸಿಲುಕಿದೆ. ಅತಿ ವೇಗದ ಅಭಿವೃದ್ಧಿಯೇ ಇಂದು ಬೆಂಗಳೂರಿನ ಈ ಭಾಗಕ್ಕೆ ಮುಳುವಾಗಿದೆ. ಬೆಂಗಳೂರು ಮುಳುಗುತ್ತಿದ್ದಂತೆಯೇ, ಕೈಗಾರಿಕೋದ್ಯಮಿಗಳು ಎಚ್ಚೆತ್ತುಕೊಂಡಿದ್ದಾರೆ. 'ಹೀಗೆ ಆದಲ್ಲಿ ನಾವು ಬೆಂಗಳೂರು ಬಿಟ್ಟು ಬೇರೆ ನಗರವನ್ನು ಹುಡುಕಿಕೊಳ್ಳಬೇಕಾಗುತ್ತದೆ' ಎಂದು ಸರಕಾರವನ್ನು ಬೆದರಿಸಿದ್ದಾರೆ. ಆದರೆ ಉದ್ಯಮಿಗಳು ಒಂದನ್ನು ಮರೆತಿದ್ದಾರೆ. ಈ ನೆರೆ ನೀರು ಈ ಉದ್ಯಮಿಗಳನ್ನು ಅಷ್ಟು ಸುಲಭದಲ್ಲಿ ಬೆನ್ನು ಬಿಡುವುದಿಲ್ಲ. ಇವರು ಬೆಂಗಳೂರು ಬಿಟ್ಟು ಚೆನ್ನೈಗೆ ಹೋದರೆ ಅಲ್ಲಿಯೂ ಇವರನ್ನು ಹಿಂಬಾಲಿಸುತ್ತದೆ. ಯಾಕೆಂದರೆ, ಇಂತಹದೊಂದು ನೆರೆ ಸೃಷ್ಟಿಯಲ್ಲಿ ಪರೋಕ್ಷವಾಗಿ ಉದ್ಯಮಿಗಳ ಭಾಗೀದಾರಿಕೆಯೂ ಇದೆ. ಉದ್ಯಮಿಗಳು ಮತ್ತು ರಾಜಕಾರಣಿಗಳ ಅನೈತಿಕ ಮೈತ್ರಿಯೇ ನಗರಗಳಲ್ಲಿ ಇಂತಹ ನೆರೆಗಳನ್ನು ಸೃಷ್ಟಿ ಮಾಡುತ್ತವೆ. ಅಭಿವೃದ್ಧಿಯ ಹೆಸರಿನಲ್ಲಿ ತಲೆ ಎತ್ತಿ ನಿಂತ ಎಷ್ಟೋ ಬೃಹತ್ ಕಟ್ಟಡಗಳು ಕೆರೆಗಳ ಮೇಲೆ ನಿಂತಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ವಿವಿಧ ಉದ್ದಿಮೆಗಳ ಹೆಸರಿನಲ್ಲಿ ಭೂಮಿ ಕಬಳಿಸಿ ಅಲ್ಲಿ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭದಲ್ಲಿ, ನೆರೆಯ ಬಗ್ಗೆಯೂ ಮುಂಜಾಗ್ರತೆಯನ್ನು ವಹಿಸಿದ್ದಿದ್ದರೆ ಉದ್ಯಮಿಗಳು ಇದೀಗ ಸರಕಾರಕ್ಕೆ ಬೆದರಿಕೆ ಹಾಕುವ ಸ್ಥಿತಿ ಬರುತ್ತಿರಲಿಲ್ಲವೇನೋ. ಇಷ್ಟಕ್ಕೂ ಸರಕಾರವಂತೂ ಏಕಾಏಕಿ ಈ ನೆರೆ ನೀರನ್ನು ತಡೆಯುವ ಶಕ್ತಿಯನ್ನು ಹೊಂದಿಲ್ಲ. ಈ ಹಿಂದೊಮ್ಮೆ ಧರಂ ಸಿಂಗ್ ಅಧಿಕಾರಾವಧಿಯಲ್ಲಿ ಇಂತಹದೇ ನೆರೆಯನ್ನು ಬೆಂಗಳೂರು ಎದುರಿಸಿತ್ತು. ಕನಿಷ್ಠ ಅಂದು ಎಚ್ಚೆತ್ತು, ಅಕ್ರಮ ಒತ್ತುವರಿಗಳನ್ನು ತಡೆದು, ಕೆರೆಗಳನ್ನು, ರಾಜಕಾಲುವೆಗಳನ್ನು, ಸರಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ಮಾಲಕರನ್ನು ಗುರುತಿಸಿ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದರೆ ಇಂದು ಬೆಂಗಳೂರು ಸಂಕಟ ಎದುರಿಸುತ್ತಿರಲಿಲ್ಲ. ಈ ಹಿಂದೆ ಸರಕಾರವೇ ನೇಮಿಸಿದ ರಾಮಸ್ವಾಮಿ ಸಮಿತಿಯ ವರದಿಯ ಕಾಂಗ್ರೆಸ್ ಸರಕಾರ ಒಂದಿಷ್ಟು ಕ್ರಮಗಳನ್ನು ತೆಗೆದುಕೊಂಡಿವೆಯಾದರೂ, ಬೆಂಗಳೂರನ್ನು ಪೂರ್ಣ ಪ್ರಮಾಣದಲ್ಲಿ ಮೇಲೆತ್ತಿ ನಿಲ್ಲಿಸಲು ಅದಷ್ಟೇ ಸಾಕಾಗುವುದಿಲ್ಲ. ಅದು ನಿರಂತರವಾಗಿ ಮುಂದುವರಿಯಬೇಕಾದ ಪ್ರಕ್ರಿಯೆ. ನೆರೆಯ ಸಮಸ್ಯೆ ಎದುರಾದಾಗೊಮ್ಮೆ ಅಕ್ರಮ ಒತ್ತುವರಿಗಳ ಬಗ್ಗೆ ಮಾತನಾಡುವ ಸರಕಾರ ಬಳಿಕ ವೌನವಾಗಿ ಬಿಡುತ್ತದೆ. ಸರಕಾರವನ್ನು ವೌನವಾಗಿಸುವ ಶಕ್ತಿಗಳಾದರೂ ಯಾವುವು? ಅವರಿಗೂ ಉದ್ಯಮಿಗಳಿಗೂ ಸಂಬಂಧವಿಲ್ಲವೆ?

ಬೆಂಗಳೂರು ಮುಳುಗಿರುವ ಬಗ್ಗೆ ಇದೀಗ ಬೊಮ್ಮಾಯಿ ನೇತೃತ್ವದ ಸರಕಾರವನ್ನು ವ್ಯಾಪಕವಾಗಿ ಟೀಕಿಸಲಾಗುತ್ತಿದೆ. ಆದರೆ ಬೊಮ್ಮಾಯಿ ಸರಕಾರವೊಂದೇ ಇದಕ್ಕೆ ಹೊಣೆಯಲ್ಲ. ಬೆಂಗಳೂರಿನ ಇಂದಿನ ಸ್ಥಿತಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳೂ ಕಾರಣ. ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ ಎನ್ನುವ ಒಂದೇ ಕಾರಣಕ್ಕಾಗಿ ನಾವಿಂದು ಬೊಮ್ಮಾಯಿ ಅವರನ್ನು ಟೀಕಿಸಬೇಕಾಗಿದೆ. ಆದರೆ ಈ ಹಿಂದೆ ಆಗಿ ಹೋದ ಎಲ್ಲ ಮುಖ್ಯಮಂತ್ರಿಗಳು ಬೆಂಗಳೂರಿನ ಇಂದಿನ ಸ್ಥಿತಿಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಯವರ ಒಂದು ಆದೇಶದಿಂದ ನೆರೆ ನೀರನ್ನು ತಡೆಯಲು ಸಾಧ್ಯವಾಗುತ್ತದೆ ಎಂದಾದರೆ ಅವರಿಗೆ ಒತ್ತಡ ಹಾಕಿ ಆದೇಶವನ್ನು ಕೊಡಿಸಬಹುದಾಗಿತ್ತು. ಆದರೆ, ನೆರೆ ನೀರಿಗೆ, ಮಳೆ ನೀರಿಗೆ ಸರಕಾರದ ಕಾನೂನು, ಆದೇಶಗಳು ಅನ್ವಯವಾಗುವುದಿಲ್ಲ. ಆದೇಶ ನೀಡುವುದಾದರೆ ಬೆಂಗಳೂರಿನ ಅಧಿಕಾರಿಗಳಿಗೆ ನೀಡಬೇಕು. ಕ್ರಮ ತೆಗೆದುಕೊಳ್ಳಬೇಕಾದರೆ ನೆರೆ ನೀರಿನ ಮೇಲಲ್ಲ, ಅದಕ್ಕೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರು ಮುಳುಗಿದಾಗೊಮ್ಮೆ 'ಕಠಿಣ ಕ್ರಮ' ಎಂದು ಘೋಷಿಸುವ ಬದಲು ಈಗಿಂದಲೇ ಕಾರ್ಯಾಚರಣೆ ಆರಂಭವಾದರೆ ಮುಂದಿನ ದಿನಗಳಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗುವುದನ್ನು ತಡೆಯಬಹುದು. ಇದು ಮುಖ್ಯಮಂತ್ರಿ ಒಬ್ಬರಿಂದ ಆಗುವ ಕೆಲಸವಲ್ಲ. ನಗರದ ಅಕ್ರಮ ಒತ್ತುವರಿಗಳನ್ನು ಮುಟ್ಟುವುದಕ್ಕೆ ಹೋದರೆ ನೆರೆ ನೀರು ನೇರವಾಗಿ ಅವರ ಕುರ್ಚಿಯನ್ನೇ ಮುಳುಗಿಸುವ ಸಾಧ್ಯತೆಗಳಿವೆ. ಆದುದರಿಂದ, ಎಲ್ಲ ಪಕ್ಷಗಳು, ಪಕ್ಷಗಳ ಬೆನ್ನಿಗಿರುವ ಶಕ್ತಿಗಳು ಅದಕ್ಕೆ ಸಹಕರಿಸಬೇಕಾಗುತ್ತದೆ. ಆಗ ಮಾತ್ರ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಧೈರ್ಯದಿಂದ ಮುನ್ನಡೆಯಲು ಸಾಧ್ಯ. ಆದರೆ ಶೇ.40 ಕಮಿಷನ್ ಸರಕಾರ ಅಸ್ತಿತ್ವದಲ್ಲಿರುವವರೆಗೆ ಈ ಕಾರ್ಯಾಚರಣೆ ಅಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News