ಮುರುಘಾ ಶರಣರ ಪ್ರಕರಣ: ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆಗೆ BSP ಆಗ್ರಹ
ಬೆಂಗಳೂರು, ಸೆ.7: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಬಿಎಸ್‍ಪಿ (BSP ) ಪಕ್ಷ ಆಗ್ರಹಿಸಿದೆ.
ಬುಧವಾರ ನಗರದ ಬಿಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ, ಆರೋಪಿಗಳು ಬಲಾಢ್ಯರಾಗಿದ್ದು, ಸರಕಾರದಲ್ಲಿ ಹೆಚ್ಚು ಪ್ರಭಾವಶಾಲಿಗಳಾಗಿದ್ದಾರೆ ಎಂದರು.
ಜತೆಗೆ, ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ ಸಹ ಆರೋಪಿಗಳಿಗೆ ಅನುಕೂಲವಾಗುವಂತಹ ಹೇಳಿಕೆಗಳನ್ನು ನೀಡಿರುವುದರಿಂದ ಅವರು ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಅತಿ ಗಂಭೀರವಾದ ಈ ಪ್ರಕರಣದ ತನಿಖೆಯು ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ನಡೆಯಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ: ಸುದ್ದಿ ಪ್ರಕಟಿಸದಂತೆ ಪ್ರತಿಬಂಧಕಾಜ್ಞೆ ತಂದ ಮುರುಘಾ ಶರಣರು
ಮತ್ತೊಂದೆಡೆ ನಾರಾಯಣಸ್ವಾಮಿ ಅವರು ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದು, ಕೇಂದ್ರ ಸರಕಾರದಲ್ಲಿ ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾರೆ. ಅದೇ ರೀತಿ, ಶ್ರೀರಾಮುಲು ಅವರು ಮೊಳಕಾಲ್ಮೂರು ಎಸ್ಟಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದಾರೆ. ಹೀಗೆ, ಅನೇಕ ದಲಿತ ಸಮುದಾಯದ ಎಲ್ಲ ಮಂತ್ರಿಗಳು, ಶಾಸಕರು ಮತ್ತು ಸಂಸದರು ಇಲ್ಲಿಯವರೆಗೂ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಎಸಗಿದ ಅನಾಚಾರವನ್ನು ಖಂಡಿಸಿ ಒಂದೇ ಒಂದು ಹೇಳಿಕೆಯನ್ನು ನೀಡದಿರುವುದು ಖಂಡನೀಯ ಎಂದು ಮಾರಸಂದ್ರ ಮುನಿಯಪ್ಪ ಹೇಳಿದರು.