ನಾನು ಕೂಡಾ ಬೀಫ್‌ ತಿನ್ನುತ್ತೇನೆ: 'ದಿ ಕಾಶ್ಮೀರ್‌ ಫೈಲ್ಸ್‌' ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿಯ ವಿಡಿಯೋ ವೈರಲ್‌

Update: 2022-09-09 07:28 GMT

ಮುಂಬೈ: ಬೀಫ್‌ ತಿನ್ನುವುದಾಗಿ ಹೇಳಿದ ರಣಬೀರ್‌ ಕಪೂರ್‌ ವಿರುದ್ಧ ಸಂಘ ಪರಿವಾರ ಸಂಘಟನೆ ಕಾರ್ಯಕರ್ತರು ಅಭಿಯಾನ ನಡೆಸುತ್ತಿದ್ದಂತೆಯೇ, ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ(Vivek Agnihotri) ಅವರು ತಾನು ಬೀಫ್‌ ತಿನ್ನುವುದಾಗಿ ಹೇಳಿರುವ ಹಳೆಯ ವಿಡಿಯೋ ತುಣುಕು ವೈರಲ್‌ ಆಗಿದೆ. 

2011 ರಲ್ಲಿ ರಾಕ್‌ಸ್ಟಾರ್‌ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಬೀಫ್‌ ಕುರಿತು ರಣಬೀರ್‌ ಕಪೂರ್‌ ಸಂದರ್ಶನವೊಂದರಲ್ಲಿ ಹೇಳಿಕೆಯನ್ನು ನೀಡಿದ್ದರು. ಈ ವಿಡಿಯೋ ತುಣುಕು ಇಟ್ಟುಕೊಂಡು ರಣಬೀರ್‌ ಅವರ ನೂತನ ಚಿತ್ರ 'ಬ್ರಹ್ಮಾಸ್ತ್ರ'ದ ವಿರುದ್ಧ ಅಭಿಯಾನ ನಡೆಸಿದ್ದ ಹಿಂದುತ್ವವಾದಿಗಳು, ಕಪೂರ್‌ ದಂಪತಿ ದೇವಸ್ಥಾನ ಪ್ರವೇಶಿಸದಂತೆಯೂ ತಡೆದು ಮುತ್ತಿಗೆ ಹಾಕಿದ್ದರು.  ಈ ಬೆಳವಣಿಗೆ ನಡೆದ ಬೆನ್ನಲ್ಲೇ, 'ದಿ ಕಾಶ್ಮೀರ್‌ ಫೈಲ್ಸ್‌' (The Kashmir Files) ಚಿತ್ರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ತಾನು ಬೀಫ್‌ ತಿನ್ನುತ್ತೇನೆ, ನಾನು ಬದಲಾಗಿಲ್ಲ ಎಂದು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. 

ಅಗ್ನಿಹೋತ್ರಿ ಅವರ 'ದಿ ಕಾಶ್ಮೀರಿ ಫೈಲ್ಸ್‌' ಚಿತ್ರಕ್ಕೆ ಬಲಪಂಥೀಯರು, ಸಂಘ ಪರಿವಾರ ಸಂಘಟನೆ ಹಾಗೂ ಬಿಜೆಪಿ ಸರ್ಕಾರಗಳಿಂದ ವ್ಯಾಪಕ ಸ್ವಾಗತ ದೊರೆತಿತ್ತು.  ಬಿಜೆಪಿ ಆಡಳಿತವಿರುವ ರಾಜ್ಯಗಳ ಸಚಿವರು, ಮುಖ್ಯಮಂತ್ರಿಗಳು ಚಿತ್ರದ ಪ್ರಚಾರಕ್ಕೆ ನಿಂತಿದ್ದರು. 

ಬಿಜೆಪಿ ಸರ್ಕಾರಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿದ್ದಕ್ಕೆ ಎಂದು ಟೀಕೆಗಳೂ ವ್ಯಕ್ತವಾಗಿದ್ದವು.

ಅಗ್ನಿಹೋತ್ರಿ ಅವರ ಬೀಫ್‌ ತಿನ್ನುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯನ್ನು ಸೃಷ್ಟಿಸಿದೆ. ಬೀಫ್‌ ತಿನ್ನುವ ರಣಬೀರ್‌ ಕಪೂರ್‌ ರ ಚಿತ್ರವನ್ನು ಬಹಿಷ್ಕರಿಸಲಾಯಿತು, ಅವರನ್ನು ದೇವಾಲಯಕ್ಕೆ ಪ್ರವೇಶಿಸದಂತೆ ತಡೆಯಲಾಯಿತು, ಆದರೆ ಅಗ್ನಿಹೋತ್ರಿ ವಿರುದ್ಧ ಇಂತಹ ಆಕ್ರೋಶಗಳು ಯಾಕೆ ಕಾಣುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News