ಸರಕಾರಿ ನೌಕರನಿಂದ ಭ್ರಷ್ಟಾಚಾರ ದೇಶದ ವಿರುದ್ಧ ಅಪರಾಧ: ಸುಪ್ರೀಂ ಕೋರ್ಟ್

Update: 2022-09-09 14:55 GMT

ಹೊಸದಿಲ್ಲಿ: ಸರಕಾರಿ ನೌಕರನಿಂದ ಭ್ರಷ್ಟಾಚಾರವು(Corruption) ದೇಶ ಮತ್ತು ಸಮಾಜದ ವಿರುದ್ಧ ಅಪರಾಧವಾಗಿದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು(Supreme Court), ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ಮೊಕದ್ದಮೆಗಳಂತಹ ಇಂತಹ ಪ್ರಕರಣಗಳನ್ನು ನ್ಯಾಯಾಲಯಗಳು ನಿರ್ವಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಳಪೆ ನಡವಳಿಕೆಯಿಂದ ಉದ್ಯೋಗದಾತನಿಗೆ ನಷ್ಟವನ್ನುಂಟು ಮಾಡುವ ಗುತ್ತಿಗೆ ಸಂಸ್ಥೆ ಅಥವಾ ವ್ಯಕ್ತಿಯ ವಿರುದ್ಧ ನಿರ್ದಿಷ್ಟ ಕಾರ್ಯಕ್ಷಮತೆಯ ಪ್ರಕರಣವನ್ನು ದಾಖಲಿಸಬಹುದಾಗಿದೆ.

ಉದ್ಯೋಗ ಹಗರಣದಲ್ಲಿ ದೂರನ್ನು ರದ್ದುಗೊಳಿಸಿದ್ದ ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ಎಸ್.ಎ.ನಝೀರ್ ಮತ್ತು ವಿ.ರಾಮಸುಬ್ರಮಣಿಯನ್ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಸಂಧಾನ ಮಾತುಕತೆಗಳ ಮೂಲಕ ಪರಿಹಾರದ ಹಣವನ್ನು ಪಡೆದ ನಂತರ ಎಲ್ಲ ಸಂತ್ರಸ್ತರು ತಮ್ಮ ದೂರುಗಳನ್ನು ಹಿಂದೆಗೆದುಕೊಂಡಿದ್ದಾರೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಬೆಟ್ಟುಮಾಡಿತ್ತು.

ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ದೂರುದಾರ,ಪ್ರಕರಣವು ಹಣಕ್ಕೆ ಸಂಬಂಧಿಸಿದ್ದು ಅದನ್ನು ಬಗೆಹರಿಸಲಾಗಿದೆ ಎಂದು ತಿಳಿಸಿದ್ದ. ಎರಡು ಗುಂಪುಗಳ ನಡುವಿನ ರಾಜಕೀಯ ವೈಷಮ್ಯವು ವಿಷಯವನ್ನು ಉಲ್ಬಣಗೊಳಿಸಿತ್ತು ಎಂದೂ ದೂರುದಾರ ಸೇರಿಸಿದ್ದ. ಉದ್ಯೋಗಗಳನ್ನು ಪಡೆಯಲು ತಾವು ಹಣ ಪಾವತಿಸಿದ್ದೇವೆ ಎಂದು ಆರಂಭದಲ್ಲಿ ಹೇಳಿದ್ದ ಸಂತ್ರಸ್ತರೂ ಆರೋಪಿಯನ್ನು ಬೆಂಬಲಿಸಿ ಅಫಿಡವಿಟ್‌ಗಳನ್ನು ಸಲ್ಲಿಸಿದ್ದರು.

ಘಟನೆಯು 2014ರಲ್ಲಿ ನಡೆದಿತ್ತು ಮತ್ತು ಅದೇ ವರ್ಷ ಆರೋಪಿ ಮತ್ತು ಸಂತ್ರಸ್ತರು ರಾಜಿ ಮಾಡಿಕೊಂಡಿದ್ದರು ಎಂದು ಅರ್ಜಿಯ ವಿಚಾರಣೆ ಸಂದರ್ಭ ರಾಜ್ಯ ಸರಕಾರದ ಪರ ವಕೀಲರು ತಿಳಿಸಿದ್ದರು.

ಹೇಳಿಕೆಗಳನ್ನು ಗಮನಕ್ಕೆ ತೆಗೆದುಕೊಂಡಿದ್ದ ಉಚ್ಚ ನ್ಯಾಯಾಲಯವು ಕ್ರಿಮಿನಲ್ ದೂರನ್ನು ರದ್ದುಗೊಳಿಸಿತ್ತು.

ಉಚ್ಚ ನ್ಯಾಯಾಲಯದ ಆದೇಶವು ತಪ್ಪಾಗಿದೆ ಎಂದು ಗುರುವಾರ ಬಣ್ಣಿಸಿದ ಸರ್ವೋಚ್ಚ ನ್ಯಾಯಾಲಯವು,ಅಪರಾಧಗಳು ಇತರರ ಮೇಲೆ ಪರಿಣಾಮ ಬೀರಬಹುದಾದ ಸನ್ನಿವೇಶದಲ್ಲಿ ಕಕ್ಷಿಗಳ ನಡುವಿನ ರಾಜಿಯ ಆಧಾರದಲ್ಲಿ ಕ್ರಿಮಿನಲ್ ಕಲಾಪಗಳನ್ನು ರದ್ದುಗೊಳಿಸುವಾಗ ಅವಸರಿಸದಂತೆ ನ್ಯಾಯಾಲಯಗಳಿಗೆ ಸೂಚಿಸಿತು.

ಉದ್ಯೋಗ ಹಗರಣದ ಪ್ರಕರಣದಲ್ಲಿ ಭ್ರಷ್ಟ ಮಾರ್ಗಗಳನ್ನು ಅನುಸರಿಸುವವರು ಹಣ ನೀಡಿ ಉದ್ಯೋಗಗಳನ್ನು ಪಡೆದುಕೊಂಡವರು ಮತ್ತು ಹಣವನ್ನು ನೀಡಿಯೂ ಉದ್ಯೋಗಗಳನ್ನು ಪಡೆಯದವರು,ಹೀಗೆ ಎರಡು ವರ್ಗಗಳಿಗೆ ಸೇರುತ್ತಾರೆ ಎಂದು ಹೇಳಿದ ನ್ಯಾಯಾಲಯವು, ಹಣವನ್ನು ಮರಳಿ ಪಡೆದುಕೊಂಡು ತಮ್ಮ ವಿವಾದವನ್ನು ಇತ್ಯರ್ಥಗೊಳಿಸಿಕೊಳ್ಳಲು ಎರಡನೇ ವರ್ಗದವರಿಗೆ ಅವಕಾಶ ನೀಡಿದರೆ ಅದು ಮೊದಲ ವರ್ಗಕ್ಕೆ ಸೇರಿದ ವ್ಯಕ್ತಿಗಳ ನೇಮಕಾತಿಗೆ ಅನುಮೋದನೆಯ ಮುದ್ರೆಯನ್ನು ಒತ್ತುತ್ತದೆ ಎಂದು ಹೇಳಿತು.

ಭ್ರಷ್ಟ ಪದ್ಧತಿಗಳ ಮೂಲಕ ಸರಕಾರಿ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳನ್ನು ಅಂತಿಮವಾಗಿ ಸಾರ್ವಜನಿಕ ಸೇವೆ ಸಲ್ಲಿಸಲು ಕರೆಯಲಾಗುತ್ತದೆ ಎಂಬ ವಾಸ್ತವವನ್ನು ತಾನು ಕಡೆಗಣಿಸುವಂತಿಲ್ಲ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಭ್ರಷ್ಟಾಚಾರದಲ್ಲಿ ತೊಡಗುವ ಇಂತಹ ವ್ಯಕ್ತಿಗಳು ಸಲ್ಲಿಸುವ ಸಾರ್ವಜನಿಕ ಸೇವೆಯ ಗುಣಮಟ್ಟವು ಕಳಪೆಯಾಗಿರುತ್ತದೆ ಎನ್ನುವುದನ್ನು ಹೇಳುವ ಅಗತ್ಯವಿಲ್ಲ. ಇಂತಹ ನೇಮಕಾತಿಗಳ ಪರಿಣಾಮಗಳು ನೇಮಕಗೊಂಡವರ ಕೆಲಸದಲ್ಲಿ ಶೀಘ್ರವೇ ಅಥವಾ ನಂತರದಲ್ಲಿ ಪ್ರತಿಫಲಿಸುವುದರಿಂದ ಈ ಸೇವೆಯ ಫಲಾನುಭವಿಗಳಾದ ಸಾರ್ವಜನಿಕರೂ ಬಲಿಪಶುಗಳಾಗುತ್ತಾರೆ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News