ಶೇ. 10 ಮೀಸಲಾತಿ ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸಿದೆಯೇ ಎಂದು ಪರಿಶೀಲಿಸಲಾಗುವುದು: ಸುಪ್ರೀಂ

Update: 2022-09-09 16:50 GMT

ಹೊಸದಿಲ್ಲಿ, ಸೆ. 9: ಸರಕಾರಿ ಉದ್ಯೋಗ ಹಾಗೂ ಕಾಲೇಜು ಪ್ರವೇಶಗಳಲ್ಲಿ ಮೇಲ್ಜಾತಿಯ ಆರ್ಥಿಕ ದುರ್ಬಲ ವರ್ಗದ ಆಕಾಂಕ್ಷಿಗಳಿಗೆ ಶೇ. 10 ಮೀಸಲಾತಿ ಸಂವಿಧಾನ ಮೂಲ ಸ್ವರೂಪವನ್ನು ಉಲ್ಲಂಘಿಸಿದೆಯೇ ಎಂದು ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಮೀಸಲಾತಿ ವ್ಯಾಪ್ತಿಯಲ್ಲಿ ಒಳಗೊಳ್ಳದ ಆದರೆ, ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ಆರ್ಥಿಕ ದುರ್ಬಲ ವರ್ಗಗಳಿಗೆ ಕೇಂದ್ರ ಸರಕಾರ ಮೀಸಲಾತಿ ಪರಿಚಯಿಸಿದೆ.  ಆದರೆ, ಆಕಾಂಕ್ಷಿಯ ಕುಟುಂಬ 5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಅಥವಾ 1,000 ಚದರ ಅಡಿ ವಸತಿ ಭೂಮಿ ಹೊಂದಿದ್ದರೆ, ಅಂತಹ ವ್ಯಕ್ತಿ ಅರ್ಹನಾಗುವುದಿಲ್ಲ ಎಂದು ಹೇಳಿದೆ. ಕಳೆದ ವರ್ಷ ಸುಪ್ರೀಂ ಕೋರ್ಟ್ ಮೇಲ್ನೋಟಕ್ಕೆ ಈ ಮಾನದಂಡಗಳು   ನಿರಂಕುಶದಂತೆ ಕಾಣುತ್ತದೆ ಎಂದು ಹೇಳಿತ್ತು. ಆರ್ಥಿಕ ಹಿಂದುಳಿದ ವರ್ಗದ ಮೀಸಲಾತಿಯಿಂದ   ಕೆನೆ ಪದರವನ್ನು ಹೊರಗಿರಿಸಲು ವಾರ್ಷಿಕ 8 ಲಕ್ಷ ಆದಾಯದ ಮಾನದಂಡ ನಿಗದಿ ಮಾಡಲಾಗಿರುವುದರಿಂದ ಸರಕಾರ ಅರ್ಥಿಕ ದುರ್ಬಲ ವರ್ಗಕ್ಕೆ ಕೂಡ ಅದೇ ಮಾನದಂಡವನ್ನು ನಿಗದಿಪಡಿಸಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತ್ತು.

ಮೀಸಲಾತಿಯನ್ನು ಪ್ರಶ್ನಿಸಿದ ಹಲವು ದೂರದಾರರ ವಾದದ ಸಾರವನ್ನು ಗುರುವಾರ ಮಂಡಿಸಿದ ಹಿರಿಯ ವಕೀಲ ಗೋಪಾಲ ಶಂಕರನಾರಾಯಣನ್, ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿಯಿಂದ ಕೆನೆಪದರವನ್ನು ಹೊರಗಿರಿಸದೇ ಇರುವ ತಿದ್ದುಪಡಿಯು ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸುತ್ತದೆಯೇ ಎಂದು ಕೆಲವು ನ್ಯಾಯವಾದಿಗಳು ತಿಳಿಯಲು ಬಯಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ‘‘ಬಡವರಲ್ಲಿ ಬಡವರ’’ ಬಗ್ಗೆ ನ್ಯಾಯಾಲಯ ಮಾತನಾಡುವಾಗ ಕೆನೆ ಪದರದ ಪ್ರಶ್ನೆಯೇ  ಉದ್ಭವಿಸುವುದಿಲ್ಲ ಎಂದರು. 

ಖಾಸಗಿ ಅನುದಾನ ರಹಿತ ಸಂಸ್ಥೆಗಳಿಗೆ ಪ್ರವೇಶದ ಕುರಿತ ವಿಶೇಷ ನಿಯಮಗಳನ್ನು ರೂಪಿಸಲು ಸರಕಾರಕ್ಕೆ ಅನುಮತಿ ನೀಡುವ ಮೂಲಕ ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸಲಾಗಿದೆಯೇ ಎಂದು ಪರಿಶೀಲಿಸಲು ಬಯಸುವುದಾಗಿ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವ ದ ಸಂವಿಧಾನಿಕ ಪೀಠ ಹೇಳಿತು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟಂಬರ್ 13ರಂದು ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News