ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಗೆ ಜಾಮೀನು: ಸುಪ್ರೀಂ ಆದೇಶವನ್ನು ಸ್ವಾಗತಿಸಿದ ವಿಪಕ್ಷ ನಾಯಕರು, ಮಾಧ್ಯಮ ಸಂಸ್ಥೆಗಳು

Update: 2022-09-10 08:57 GMT

ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ(UAPA) ಅಡಿಯಲ್ಲಿ ಬಂಧಿಸಲ್ಪಟ್ಟ ಎರಡು ವರ್ಷಗಳ ನಂತರ ಪತ್ರಕರ್ತ ಸಿದ್ದಿಕ್ ಕಪ್ಪನ್‌ಗೆ(siddeeq kappan) ಜಾಮೀನು ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಹಲವು ವಿರೋಧ ಪಕ್ಷದ ನಾಯಕರು ಮತ್ತು ಪತ್ರಿಕಾ ಸಂಸ್ಥೆಗಳು ಶುಕ್ರವಾರ ಸ್ವಾಗತಿಸಿದ್ದಾರೆ.

ಅಕ್ಟೋಬರ್ 5, 2020 ರಂದು ಕಪ್ಪನ್ ಅವರನ್ನು ಉತ್ತರ ಪ್ರದೇಶ ಪೊಲೀಸರು(Uttarpradesh police) ಬಂಧಿಸಿದ್ದರು. ಈ ವೇಳೆ ಅವರು ಇತರ ಮೂವರೊಂದಿಗೆ ಕಾರಿನಲ್ಲಿ ಹತ್ರಾಸ್‌ಗೆ ಪ್ರಯಾಣಿಸುತ್ತಿದ್ದರು. ಅಲ್ಲಿ ದಲಿತ ಬಾಲಕಿಯೋರ್ವಳನ್ನು ನಾಲ್ವರು ಮೇಲ್ಜಾತಿ ಠಾಕೂರ್ ಪುರುಷರು 2020 ರ ಸೆಪ್ಟೆಂಬರ್ 14 ರಂದು ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೈದಿದ್ದರು.

ಕೇರಳ ಮೂಲದ ಪತ್ರಕರ್ತ ಜಾತಿ ಆಧಾರಿತ ಗಲಭೆ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶ ಹೊಂದಿದ್ದರು ಎಂದು ಪೊಲೀಸರು ಮೊದಲು ಆರೋಪಿಸಿದ್ದರು. ಬಳಿಕ, ದೇಶದ್ರೋಹದ ಆರೋಪಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ನಿಬಂಧನೆಗಳನ್ನು ಅವರ ಮೇಲೆ ಹೇರಲಾಗಿತ್ತು. ಅವರ ಜಾಮೀನನ್ನು ಅಲಹಾಬಾದ್ ಹೈಕೋರ್ಟ್ ಆಗಸ್ಟ್ 2 ರಂದು ತಿರಸ್ಕರಿಸಿತ್ತು.

ಶುಕ್ರವಾರದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ಪೀಠವು ಈ ಹಂತದಲ್ಲಿ ತನಿಖೆಯ ಪ್ರಗತಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದೆ. ಆದಾಗ್ಯೂ, ಕಪ್ಪನ್ ಬಂಧನದಲ್ಲಿ ಎಷ್ಟು ಸಮಯವನ್ನು ಕಳೆದಿದ್ದಾರೆ ಮತ್ತು "ಪ್ರಕರಣದ ವಿಚಿತ್ರ ಸಂಗತಿಗಳು ಮತ್ತು ಸಂದರ್ಭಗಳನ್ನು" ಪರಿಗಣನೆಗೆ ತೆಗೆದುಕೊಂಡಿತು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿರುವುದರಿಂದ ಪತ್ರಕರ್ತನಿಗೆ ಜೈಲಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 19 ರಂದು ನಡೆಯಲಿದೆ ಎಂದು ಅವರ ವಕೀಲರು Scroll.in ಗೆ ತಿಳಿಸಿದರು.

ಶುಕ್ರವಾರ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ನ್ಯಾಯಮೂರ್ತಿ ಲಲಿತ್ ನೇತೃತ್ವದ ಪೀಠದ ತೀರ್ಪನ್ನು ಸ್ವಾಗತಿಸಿದರು, ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಗಾಳಿ ಬೀಸುತ್ತಿದೆ ಎಂದು ಹೇಳಿದರು.

"ಅಸ್ತಮಿಸಿದ ಸೂರ್ಯ ಮತ್ತೆ ಉದಯಿಸಬೇಕು" ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅವರ ಭಾವನೆಗಳನ್ನು ಇನ್ನೋರ್ವ ಕಾಂಗ್ರೆಸ್‌ ನ ಹಿರಿಯ ನಾಯಕ ಶಶಿ ತರೂರ್ ಪ್ರತಿಧ್ವನಿಸಿದರು, "ಕೊನೆಗೂ ಅನಿರ್ದಿಷ್ಟ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್ ನಿಂತಿದೆ" ಎಂದು ಹೇಳಿದರು.

ಪ್ರಕರಣದಲ್ಲಿ ಸತ್ಯ ಮೇಲುಗೈ ಸಾಧಿಸಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಮಹುವಾ ಮೊಯಿತ್ರಾ ಹೇಳಿದ್ದಾರೆ. "ಪ್ರತಿಯೊಬ್ಬ ವ್ಯಕ್ತಿಗೆ ಮುಕ್ತ ಅಭಿವ್ಯಕ್ತಿಗೆ ಹಕ್ಕಿದೆ, ಬಲಿಪಶುವಿಗೆ ನ್ಯಾಯದ ಅಗತ್ಯವಿದೆ ಎಂದು ತೋರಿಸಲು ಪ್ರಯತ್ನಿಸುವುದು ಮತ್ತು ಸಾಮಾನ್ಯ ಧ್ವನಿಯೆತ್ತುವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಬಹುದೇ?" ಎಂದು ಅವರು ಪ್ರಶ್ನಿಸಿದ್ದಾರೆ.

ಭಾರತ ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸ್‌ವಾದಿ) ನಾಯಕ ಸೀತಾರಾಂ ಯೆಚೂರಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ಆದೇಶವು ಪ್ರತಿಯೊಬ್ಬರಿಗೂ ಮುಕ್ತ ಅಭಿವ್ಯಕ್ತಿಯ ಹಕ್ಕಿದೆ ಎಂಬುದನ್ನು ಪುನರುಚ್ಚರಿಸುತ್ತದೆ. "ಭವಿಷ್ಯದಲ್ಲಿ ತೀರ್ಪುಗಳನ್ನು ವಾಕ್ ಸ್ವಾತಂತ್ರ್ಯಕ್ಕೆ ಅಂತಹ ಬದ್ಧತೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಯೆಚೂರಿ ಹೇಳಿದರು.

ಕಪ್ಪನ್ ಬಂಧನವು ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ತಡೆಯುವ ಪ್ರಯತ್ನವಾಗಿದೆ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೇಳಿದೆ. ಕಪ್ಪನ್ ಅವರನ್ನು ಉತ್ತರ ಪ್ರದೇಶ ಸರ್ಕಾರವು "ಸಾಫ್ಟ್ ಟಾರ್ಗೆಟ್" ಆಗಿಸಿತ್ತು ಮತ್ತು ವಿಚಾರಣೆಯ ಸಮಯದಲ್ಲಿ ಪತ್ರಕರ್ತನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ವಿಫಲರಾದ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಒತ್ತಾಯಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಅದೇ ರೀತಿ, ಇತರ ಪ್ರಕರಣದಲ್ಲಿ ಕಪ್ಪನ್‌ಗೆ ಜಾಮೀನು ಸಿಗುತ್ತದೆ ಮತ್ತು ಜೈಲಿನಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ ಎಂದು ದಿಲ್ಲಿ ಪತ್ರಕರ್ತರ ಒಕ್ಕೂಟ ಹೇಳಿದೆ. "ಡಿಯುಜೆ [ದೆಹಲಿ ಪತ್ರಕರ್ತರ ಒಕ್ಕೂಟ] ಕಪ್ಪನ್ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳ ವಿರುದ್ಧ ಕಾನೂನು ಹೋರಾಟದಲ್ಲಿ ಅವರೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತದೆ. ಜಾಮೀನು ಆದೇಶವು ಐತಿಹಾಸಿಕವಾಗಿದೆ" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News