ವಂಚಕ ಗೇಮಿಂಗ್ ಆ್ಯಪ್ ನ ಪ್ರವರ್ತಕರ ವಿರುದ್ಧ ಈ.ಡಿ. ದಾಳಿ: 7 ಕೋಟಿ ರೂ. ನಗದು ವಶ

Update: 2022-09-10 14:00 GMT
PHOTO : PTI

ಹೊಸದಿಲ್ಲಿ/ಕೋಲ್ಕತಾ, ಸೆ.10: ಕಪ್ಪುಹಣ ಬಿಳುಪು ಪ್ರಕರಣದ ತನಿಖೆಯ ಭಾಗವಾಗಿ ಕೋಲ್ಕತಾ ಮೂಲದ ಮೊಬೈಲ್ ಗೇಮಿಂಗ್ ಆ್ಯಪ್‌ ಒಂದರ ಪ್ರವರ್ತಕರ ಮೇಲೆ ಶನಿವಾರ ದಾಳಿ ನಡೆಸಿದ ಜಾರಿ ನಿರ್ದೇಶನಾಲಯವು (ಈ.ಡಿ.) 7 ಕೋಟಿ ರೂ.ಗೂ ಅಧಿಕ ಹಣವನ್ನು ಮುಟ್ಟುಗೋಲು ಹಾಕಿದೆ.

ದಾಳಿ ಕಾರ್ಯಾಚರಣೆಯಸಂದರ್ಭ ವಶಪಡಿಸಿಕೊಳ್ಳಲಾದ 2 ಸಾವಿರ ರೂ. ಮುಖಬೆಲೆಯ ಹಾಗೂ 500 ರೂ. ಮುಖಬೆಲೆಯ ನೋಟುಗಳ ಹಲವಾರು ಕಂತೆಗಳನ್ನು ತೋರಿಸಲಾದ ಛಾಯಾಚಿತ್ರವೊಂದನ್ನು ಈ.ಡಿ. ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ.
 

‘ಇ-ನಗ್ಗೆಟ್ಸ್’ ಎಂಬ ಗೇಮಿಂಗ್ ಆ್ಯಪ್ ನ ಪ್ರವರ್ತಕರಿಗೆ ಸೇರಿದ ಸುಮಾರು 6 ಸ್ಥಳಗಳ ಮೇಲೆ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತ ಹಾಗೂ ಆಮೀರ್ಖಾನ್ ಎಂಬಾತ ಹಾಗೂ ಇನ್ನು ಕೆಲವರು ಇ-ನಗ್ಗೆಟ್ಸ್ ನ ಪ್ರವರ್ತಕರಾಗಿದ್ದಾರೆಂದು ಜಾರಿ ನಿರ್ದೇಶನಾಲಯವು ಹೇಳಿಕೆಯಲ್ಲಿ ತಿಳಿಸಿದೆ.
  
‘‘ಈವರೆಗೆ 7 ಕೋಟಿ ರೂ.ಗೂ ಅಧಿಕ ಮೌಲ್ಯದ ನಗದು , ದಾಳಿ ಕಾರ್ಯಾಚರಣೆ ನಡೆದ ಸ್ಥಳಗಳಲ್ಲಿ ದೊರೆತಿದೆ. ನೋಟುಗಳ ಏಣಿಕೆ ಕಾರ್ಯ ಇನ್ನೂ ನಡೆಯುತ್ತಿದೆ’’ ಎಂದು ಈ.ಡಿ. ಅಧಿಕಾರಿಗಳು ತಿಳಿಸಿದ್ದಾರೆ. 2021ರ ಫೆಬ್ರವರಿಯಲ್ಲಿ ಇ-ನಗ್ಗೆಟ್ಸ್ ಹಾಗೂ ಅದರ ಪ್ರವರ್ತಕರ ವಿರುದ್ಧ ಕೋಲ್ಕತಾ ಪೊಲೀಸರು ಎಫ್ಐಆರ್ ದಾಖಲಿಸಿದ ಬಳಿಕ ಸಂಸ್ಥೆಯು ನಡೆಸಿದೆಯೆನ್ನಲಾದ ಕಪ್ಪುಹಣ ಬಿಳುಪು ಅವ್ಯವಹಾರದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆಯನ್ನು ಆರಂಭಿಸಿತ್ತು.
  
ನಿಸಾರ್ ಅಹ್ಮದ್ ಖಾನ್ ಎಂಬವರ ಪುತ್ರ ಆಮೀರ್ ಖಾನ್ , ಸಾರ್ವಜನಿಕರನ್ನು ವಂಚಿಸುವ ದುರುದ್ದೇಶದಿಂದ ಇ-ನುಗ್ಗೆಟ್ಸ್ ಎಂಬ ಮೊಬೈಲ್ ಗೇಮಿಂಗ್ ಆ್ಯಪ್ ಆರಂಭಿಸಿದ್ದ ಎಂದು ಏಜೆನ್ಸಿ ಆರೋಪಿಸಿದೆ. ಆರಂಭದಲ್ಲಿ ಈ ಮೊಬೈಲ್ ಗೇಮಿಂಗ್ ಆ್ಯಪ್ ನ ಬಳಕೆದಾರರಿಗೆ ಆಕರ್ಷಕ ದರದಲ್ಲಿ ಕಮೀಶನ್ ನೀಡುತ್ತಿತ್ತು. ಇದರಿಂದಾಗಿ ಪ್ರವರ್ತಕ ಸಂಸ್ಥೆಯ ಬಗ್ಗೆ ಬಳಕೆದಾರರಲ್ಲಿ ಆತ್ಮವಿಶ್ವಾಸವುಂಟಾಗಿತ್ತು. ಇದರಿಂದಾಗಿ ಅವರು ದೊಡ್ಡ ಮೊತ್ತದ ಶೇಕಡವಾರು ಕಮೀಶನ್ ಗಾಗಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯನ್ನು ಮಾಡಲು ಆರಂಭಿಸಿದರು ಹಾಗೂ ದೊಡ್ಡ ಸಂಖ್ಯೆಯಲ್ಲಿ ಖರೀದಿ ಆರ್ಡರ್ಗಳನ್ನು ಸಲ್ಲಿಸತೊಡಗಿದರು ಎಂದು ಇ.ಡಿ. ತಿಳಿಸಿದೆ.
   

ಸಾರ್ವಜನಿಕರಿಂದ ಗಣನೀಯ ಮೊತ್ತವನ್ನು ಸಂಗ್ರಹಿಸಿದ ಬಳಿಕ, ವ್ಯವಸ್ಥೆಯನ್ನು ಉನ್ನತೀಕರಣಗೊಳಿಸುವ (ಸಿಸ್ಟಮ್ ಆಪ್ಗೆಡೇಶನ್) ನೆಪದಲ್ಲಿ ತನ್ನ ಕಾರ್ಯಾಚರಣೆಯನ್ನು ಹಠಾತ್ ಸ್ಥಗಿತಗೊಳಿಸಿತ್ತು. ಆನಂತರ ಬಳಕೆದಾರರ ಪ್ರೊಫೈಲ್ ಮಾಹಿತಿ ಸೇರಿದಂತೆ ಎಲ್ಲಾ ದತ್ತಾಂಶಗಳನ್ನು ಆ್ಯಪ್ ಸರ್ವರ್ಗಳಿಂದ ಅಳಿಸಿಹಾಕಲಾಗಿತ್ತು. ಆನಂತರ ಬಳಕೆದಾರರಿಗೆ ಸಂಸ್ತೆಯ ವಂಚನೆ ಅರಿವಾಯಿತು ಎಂದು ಇ.ಡಿ. ತಿಳಿಸಿದೆ.
   
ಈ ಆ್ಯಪ್ ಹಾಗೂ ಅದರ ನಿರ್ವಾಹಕಗೆ ಅಮಾಯಕ ವ್ಯಕ್ತಿಗಳಿಗೆ ದೊಡ್ಡ ಬಡ್ಡಿದರದಲ್ಲಿ ಸಾಲಗಳನ್ನು ನೀಡುವ ಚೀನಿ ನಿಯಂತ್ರಿತ ಆ್ಯಪ್ಗಳ ಜೊತೆ ನಂಟಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆಯೆಂದು ಈ.ಡಿ. ಅಧಿಕಾರಿಗಳು ತಿಳಿಸಿದ್ದಾರೆ. ಚೀನಿ ಆ್ಯಪ್ಗಳ ಮೂಲಕ ಸಾಲ ಪಡೆದು ಕೊಂಡ ಹಲವಾರು ಮಂದಿ, ಬಡ್ಡಿ ಸಮೇತಸಾಲ ಪಾವತಿಸುವಂತೆ ನಿರ್ವಾಹಕರು ಬೆದರಿಕೆ ಹಾಕುತ್ತಿದ್ದರಿಂದ,ಗ್ರಾಹಕರು ಆತ್ಮಹತ್ಯೆಮಾಡಿಕೊಂಡ ಕೆಲವು ಘಟನೆಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News