ಮೇಘಾಲಯ: ಜೈಲಿನಿಂದ ಪರಾರಿಯಾದ ಕೈದಿಗಳನ್ನು ಥಳಿಸಿ ಕೊಂದ ಗ್ರಾಮಸ್ಥರು

Update: 2022-09-11 18:35 GMT

ಗುವಾಹಟಿ: ಜೋವಾಯಿ ಜಿಲ್ಲಾ ಕಾರಾಗೃಹದಿಂದ ಶನಿವಾರ ಪರಾರಿಯಾಗಿದ್ದ ಐವರು ವಿಚಾರಣಾಧೀನ ಕೈದಿಗಳ ಪೈಕಿ ನಾಲ್ವರನ್ನು ಮೇಘಾಲಯದ ಜೈನ್ತಿಯಾ ಹಿಲ್ಸ್‌ನ ಶಾಂಗ್‌ಪುಂಗ್ ಗ್ರಾಮದ ನಿವಾಸಿಗಳು ಹೊಡೆದು ಕೊಂದಿದ್ದಾರೆ. 

ಕೈದಿಗಳ ಮೇಲೆ ಗ್ರಾಮಸ್ಥರು ಮಾಡಿದ ದಾಳಿಯ ವಿಡಿಯೋಗಳು ರವಿವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಪರಾರಿಯಾದ ಕೈದಿಗಳಿಗೆ ಗ್ರಾಮಸ್ಥರು ರಾಡ್ ಮತ್ತು ದೊಣ್ಣೆಗಳಿಂದ ಥಳಿಸುತ್ತಿರುವುದನ್ನು ವಿಡಿಯೋಗಳಲ್ಲಿ ಕಂಡು ಬಂದಿದೆ.

ಸೆ.10ರಂದು ಜೋವಾಯಿ ಜಿಲ್ಲಾ ಕಾರಾಗೃಹದಿಂದ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಂಡ ಪರಾರಿಯಾಗಿತ್ತು. ಅವರಲ್ಲಿ ಐ ಲವ್ ಯೂ ತಲಾಂಗ್ ಎಂಬ ಕೊಲೆ ಆರೋಪಿಯೂ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತರ ಸದಸ್ಯರನ್ನು ರಮೇಶ್ ದಖರ್, ಮರ್ಸಾಂಕಿ ತರಿಯಾಂಗ್, ರಿಕ್ಮೆನ್ಲಾಂಗ್ ಲಾಮಾರೆ, ಶಿಡೋರ್ಕಿ ದಖರ್ ಮತ್ತು ಲೋಡೆಸ್ಟಾರ್ ಟ್ಯಾಂಗ್ ಎಂದು ಗುರುತಿಸಲಾಗಿದೆ.

"ಬೆಳಿಗ್ಗೆ 2 ಗಂಟೆ ಸುಮಾರಿಗೆ ಆರು ಕೈದಿಗಳು ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾರೆ" ಎಂದು ಕಾರಾಗೃಹಗಳ ಇನ್ಸ್‌ಪೆಕ್ಟರ್ ಜನರಲ್ ಜೆರ್ರಿ ಎಫ್‌ಕೆ ಮಾರಾಕ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಬಗ್ಗೆ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.

ಶಾಂಗ್‌ಪುಂಗ್‌ನ ಮುಖ್ಯಸ್ಥ ಆರ್ ರಾಬನ್,   ತಪ್ಪಿಸಿಕೊಂಡ ಕೈದಿಗಳು ನಂತರ ಶಾಂಗ್‌ಪುಂಗ್ ಪ್ರದೇಶದ ಕಾಡಿನಲ್ಲಿ ಅಡಗಿಕೊಂಡಿದ್ದರು ಎಂದು ಹೇಳಿದರು. ತಪ್ಪಿಸಿಕೊಂಡು ಬಂದವರಲ್ಲಿ ಒಬ್ಬರು ಆಹಾರ ಖರೀದಿಸಲು ಸ್ಥಳೀಯ ಚಹಾ ಅಂಗಡಿಗೆ ಹೋದಾಗ ಸ್ಥಳೀಯರು ಗುರುತಿಸಿದ್ದಾರೆ. ಕೈದಿಗಳು ಅರಣ್ಯದಲ್ಲಿ ಇರುವ ವಿಷಯ ಇಡೀ ಗ್ರಾಮಕ್ಕೆ   ತಿಳಿದು   ಅರಣ್ಯಕ್ಕೆ ಓಡಿಹೋದ ಕೈದಿಗಳನ್ನು ಬೆನ್ನಟ್ಟಿದರು. ಗ್ರಾಮಸ್ಥರು ಪ್ರದೇಶವನ್ನು ಸುತ್ತುವರೆದು, ಅವರನ್ನು ಸೆರೆಹಿಡಿದ ನಂತರ ಥಳಿಸಿ ಕೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News