ಆರ್ಥಿಕವಾಗಿ ಸಬಲರಾದ ದಲಿತ ಸಮುದಾಯದವರಿಗೆ ಮೀಸಲಾತಿ ನೀಡಬಾರದು: ಕೆ.ಎಸ್.ಈಶ್ವರಪ್ಪ

Update: 2022-09-16 09:44 GMT

ಮೈಸೂರು, ಸೆ.16: ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಕಡುಬಡವರಿಗೆ ಸಿಗಬೇಕಿದ್ದ ಮೀಸಲಾತಿ ಉಳ್ಳವರ ಪಾಲಾಗುತ್ತಿದ್ದು ಕೇಂದ್ರ ಸರಕಾರ ಕೂಡಲೇ ಶ್ರೀಮಂತರ ಮೀಸಲಾತಿಯನ್ನು ರದ್ದುಪಡಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

ನಗರದ ಹೋಟೆಲ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದಲ್ಲಿ ಪ್ರಬಲರೇ ಮೀಸಲಾತಿ ಪ್ರಯೋಜನ ಪಡೆಯುತ್ತಿದ್ದಾರೆ. ಮಲ್ಲಿಕಾರ್ಜುನ  ಖರ್ಗೆ ನಂತರ ಅವರ ಮಗ ಪ್ರಿಯಾಂಕ್ ಖರ್ಗೆ ಮೀಸಲಾತಿ ಪ್ರಯೋಜನ ಪಡೆಯುತ್ತಿದ್ದಾರೆ. ಹಾಗಾಗಿ ಇಂಥವರಿಗೆ ಮೀಸಲಾತಿಯನ್ನು ನಿಲ್ಲಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಲಕ್ನೊ: ಭಾರೀ ಮಳೆಗೆ ಗೋಡೆ ಕುಸಿದು 9 ಮಂದಿ ಮೃತ್ಯು

ಮೀಸಲಾತಿಯನ್ನು ಹತ್ತು ವರ್ಷಗಳವರೆಗೆ ಅಥವಾ ಸಮಾನತೆ ಬರುವವರಿಗೆ ನೀಡಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಮೀಸಲಾತಿ ಹೆಸರಿನಲ್ಲಿ ಉಳ್ಳ ದಲಿತರೇ ಎಲ್ಲಾ ಅನುಕೂಲಗಳನ್ನು ಪಡೆದುಕೊಳ್ಳುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ದಲಿತರಿಗೆ ಅನುಕೂಲಗಳು ಸಿಗುತ್ತಿಲ್ಲ, ಹಾಗಾಗಿ ದಲಿತ ಸಮುದಾಯದ ಪ್ರಬಲ ವ್ಯಕ್ತಿಗಳ ಮೀಸಲಾತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ದೇಶದ ರಾಷ್ಟ್ರಪತಿಯಾಗಿದ್ದ ದಲಿತ ಸಮುದಾಯದ ರಾಮನಾಥ್ ಕೋವಿಂದ್ ಅವರಿಗೆ ದೇವಾಲಯ ಪ್ರವೇಶ ನಿರಾಕರಣೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇದನ್ನು ನಾನು  ಖಂಡಿಸುತ್ತೆನೆ. ಅದಕ್ಕಾಗಿಯೇ ದಲಿತರಿಗೂ ಸಮಾನತೆ ಬರುವವರೆಗೂ ಮೀಸಲಾತಿ ಸಿಗಬೇಕು ಎಂದರು. ಆದರೆ ಆರ್ಥಿಕವಾಗಿ ಸಬಲರಾದವರ ಮೀಸಲಾತಿಯನ್ನು ನಿಲ್ಲಿಸಿದರೆ ಬಡ ದಲಿತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News