ಲಕ್ನೊ: ಭಾರೀ ಮಳೆಗೆ ಗೋಡೆ ಕುಸಿದು 9 ಮಂದಿ ಮೃತ್ಯು
Photo: PTI
ಲಕ್ನೊ: ಕಳೆದ 24 ಗಂಟೆಗಳಲ್ಲಿ ಸುರಿದ ಭಾರೀ ಮಳೆಗೆ ಲಕ್ನೊ ನಗರದಲ್ಲಿ ಗೋಡೆ ಕುಸಿದು ಬಿದ್ದುWall Collapse Due to Heavy Rain ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ. ಅಸಾಧಾರಣ ಮಳೆಯಿಂದಾಗಿ ನಗರದ ಹಲವೆಡೆ ಜಲಾವೃತವಾಗಿದೆ.
ಗೋಡೆ ಕುಸಿತದಿಂದ ಗಾಯಗೊಂಡವರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮೃತಪಟ್ಟವರಿಗೆ 4 ಲಕ್ಷ ಮತ್ತು ಗಾಯಾಳುಗಳ ಚಿಕಿತ್ಸೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
"ಕೆಲವು ಕಾರ್ಮಿಕರು ದಿಲ್ಕುಶಾ ಪ್ರದೇಶದಲ್ಲಿನ ಆರ್ಮಿ ಎನ್ಕ್ಲೇವ್ನ ಹೊರಗೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ರಾತ್ರಿಯ ಭಾರೀ ಮಳೆಯಿಂದಾಗಿ ಆರ್ಮಿ ಎನ್ಕ್ಲೇವ್ನ ಗೋಡೆ ಕುಸಿದು ಬಿದ್ದಿದೆ" ಎಂದು ಜಂಟಿ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಪಿಯೂಷ್ ಮೊರ್ಡಿಯಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
"ನಾವು ರಾತ್ರಿ 3 ಗಂಟೆ ಸುಮಾರಿಗೆ ಸ್ಥಳಕ್ಕೆ ತಲುಪಿದ್ದೇವೆ. ಒಂಬತ್ತು ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಯಿತು ಮತ್ತು ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ" ಎಂದು ಅವರು ಹೇಳಿದರು.