ರಾಜಸ್ಥಾನ ಸಿಎಂ ಹುದ್ದೆಗೆ ಸಚಿನ್ ಪೈಲಟ್ ಲಾಬಿ; ಸ್ಪೀಕರ್, ಶಾಸಕರ ಭೇಟಿ

Update: 2022-09-24 01:48 GMT
ಅಶೋಕ್ ಗೆಹ್ಲೋಟ್ - ಸಚಿನ್ ಪೈಲಟ್

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೇ, ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಯುವ ಮುಖಂಡ ಸಚಿನ್ ಪೈಲಟ್ ತೀವ್ರ ಲಾಬಿ ಆರಂಭಿಸಿದ್ದಾರೆ.

ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡು ಕೊಚ್ಚಿನ್‍ನಿಂದ ಜೈಪುರಕ್ಕೆ ಆಗಮಿಸಿದ ತಕ್ಷಣ ಪಕ್ಷದ ಶಾಸಕರು ಹಾಗೂ ಸ್ಪೀಕರ್ ಅವರನ್ನು ಸಚಿನ್ ಪೈಲಟ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮಧ್ಯಾಹ್ನ ಜೈಪುರಕ್ಕೆ ಆಗಮಿಸಿದ ತಕ್ಷಣ ನೇರವಾಗಿ ಅಧಿವೇಶನ ನಡೆಯುತ್ತಿರುವ ವಿಧಾನಸಭೆಗೆ ತೆರಳಿ ಸ್ಪೀಕರ್ ಸಿ.ಪಿ.ಜೋಶಿಯವರನ್ನು ಮತ್ತು ಪಕ್ಷದ ಮುಖ್ಯ ಸಚೇತಕ ಮಹೇಶ್ ಜೋಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಬಳಿಕ ಹಾಜರಿದ್ದ ಎಲ್ಲ ಶಾಸಕರ ಜತೆ ಸಂವಾದ ನಡೆಸಿದರು.

ಈ ದಿಢೀರ್ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಗೆಹ್ಲೋಟ್, ಪಕ್ಷದ ಹೈಕಮಾಂಡ್ ಪಕ್ಷದ ಶಾಸಕರ ಜತೆ ಚರ್ಚೆ ನಡೆಸಿ ಮುಂದಿನ ಸಿಎಂ ಯಾರು ಎಂದು ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗೆಹ್ಲೋಟ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕವೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಜೈಪುರದಲ್ಲಿ ಇದ್ದು ಎಲ್ಲ ಶಾಸಕರನ್ನು ಭೇಟಿ ಮಾಡುವಂತೆ ಸಚಿನ್ ಪೈಲಟ್ ಅವರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News