ಮಕ್ಕಳ ಅಶ್ಲೀಲ ವೀಡಿಯೊಗಳ ವಿತರಣೆ: 19 ರಾಜ್ಯಗಳ 56 ಕಡೆ ಸಿಬಿಐ ದಾಳಿ

Update: 2022-09-24 16:20 GMT

 ಹೊಸದಿಲ್ಲಿ,ಸೆ.24: ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ವೀಡಿಯೊಗಳ ವಿತರಣೆಯ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಶನಿವಾರ ‘ಆಪರೇಷನ್ ಮೇಘಚಕ್ರ’ಕ್ಕೆ ಚಾಲನೆ ನೀಡಿರುವ ಸಿಬಿಐ ದೇಶಾದ್ಯಂತ 19 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ 56 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿಗಳನ್ನು ನಡೆಸಿದೆ.

ಪಂಜಾಬ,ಹರ್ಯಾಣ,ಉತ್ತರ ಪ್ರದೇಶ,ಬಿಹಾರ,ಜಾರ್ಖಂಡ್,ದಿಲ್ಲಿ, ಛತ್ತೀಸ್‌ಗಡ,ಹಿಮಾಚಲ ಪ್ರದೇಶ,ತಮಿಳುನಾಡು,ಮಹಾರಾಷ್ಟ್ರ, ಗುಜರಾತ,ಗೋವಾ,ಕರ್ನಾಟಕ ಮತ್ತು ತೆಲಂಗಾಣ ಮತ್ತಿತರ ಕಡೆಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ವರದಿಗಳು ತಿಳಿಸಿವೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಮಕ್ಕಳ ಅಶ್ಲೀಲ ವೀಡಿಯೊಗಳನ್ನು ವಿತರಿಸುತ್ತಿರುವ ಗ್ಯಾಂಗ್‌ಗಳು ಮತ್ತು ಅಪ್ರಾಪ್ತ ವಯಸ್ಕ ಮಕ್ಕಳನ್ನು ಬ್ಲಾಕ್‌ಮೇಲ್ ಮಾಡುವುದರಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಬಂಧಿಸುವುದು ಆಪರೇಷನ್ ಮೇಘಚಕ್ರದ ಉದ್ದೇಶವಾಗಿದೆ.

ನ್ಯೂಝಿಲ್ಯಾಂಡ್‌ನ ಅಧಿಕಾರಿಗಳು ಹಂಚಿಕೊಂಡಿದ್ದ ಮಾಹಿತಿಯ ಆಧಾರದಲ್ಲಿ ಇಂಟರ್‌ಪೋಲ್‌ನ ಸಿಂಗಾಪುರ ಘಟಕದಿಂದ ಮಾಹಿತಿಗಳನ್ನು ಸಿಬಿಐ ಸ್ವೀಕರಿಸಿದ ಬಳಿಕ ಈ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.

ಶನಿವಾರದ ಕಾರ್ಯಾಚರಣೆಯು ನವಂಬರ್ 2021ರಲ್ಲಿ 13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಬಿಐ ನಡೆಸಿದ್ದ ಇಂತಹುದೇ ದಾಳಿಗಳ ಮುಂದುವರಿದ ಭಾಗವಾಗಿದೆ. ಅಂದಿನ ‘ಆಪರೇಷನ್ ಕಾರ್ಬನ್ ’ನಲ್ಲಿ ಸಿಬಿಐ ಅಧಿಕಾರಿಗಳು 80 ಕ್ಕೂ ಅಧಿಕ ಜನರನ್ನು ಒಳಗೊಂಡಿದ್ದ ಸುಮಾರು 24 ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ಪೊರ್ನೊಗ್ರಫಿ ಮತ್ತು ಲೈಂಗಿಕ ಶೋಷಣೆಯ ವೀಡಿಯೊಗಳ ವಿತರಣೆಯ ಕುರಿತು ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೆ.19ರಂದು ಕೇಂದ್ರಕ್ಕೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಆಪರೇಷನ್ ಮೇಘಚಕ್ರ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News