ಬೆಂಗಳೂರು | ಮಾದಕ ವಸ್ತು ಕಳ್ಳ ಸಾಗಣೆ: 13 ಕೋಟಿ ರೂ.ಮೌಲ್ಯದ ಕೊಕೇನ್ ಕ್ಯಾಪ್ಸುಲ್ ವಶ

Update: 2022-09-24 17:14 GMT

ಬೆಂಗಳೂರು, ಸೆ.24: ಕೊಕೇನ್ ಕ್ಯಾಪ್ಸುಲ್‍ಗಳನ್ನು ನುಂಗಿ ಮಾದಕವಸ್ತು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್)ದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ, 13.6 ಕೋಟಿ ರೂ.ಮೌಲ್ಯದ ಕೊಕೇನ್ ಕ್ಯಾಪ್ಸುಲ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಘಾನದಬಾಹ್ ಅಂಪಾಡು ಕ್ವಾಡ್ವೋ(53) ಎಂದು ಗುರುತಿಸಲಾಗಿದೆ. ಬಂಧಿತನ ಹೊಟ್ಟೆಯಲ್ಲಿದ್ದ ಬರೋಬ್ಬರಿ 13.6 ಕೋಟಿ ಮೌಲ್ಯದ 104 ಕೊಕೇನ್ ಕ್ಯಾಪ್ಸುಲ್‍ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಳೆದ ಸೆ.20ರಂದು ಇಥಿಯೋಪಿಯದಿಂದ ಬಿಐಎಎಲ್ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ಕಸ್ಟಮ್ಸ್ ಇಂಟಲಿಜೆನ್ಸ್ ಯುನಿಟ್(ಸಿಐಯು)ಅಧಿಕಾರಿಗಳು ಸಂಶಯಗೊಂಡು ವಿಚಾರಣೆ ನಡೆಸಿದ್ದಾಗ ಮಾದಕದ್ರವ್ಯ ಕಳ್ಳಸಾಗಾಣಿಕೆ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಅಂಪಾಡು ಕ್ವಾಡ್ವೋನನ್ನು  ಸಂಶಯದ ಮೇರೆಗೆ ಕಸ್ಟಮ್ಸ್‍ನ ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದು ವೈದಕೀಯ ತಪಾಸಣೆ ನಡೆಸಿದಾಗ ಆತನ ಕಿಬ್ಬೊಟ್ಟೆಯಲ್ಲಿ ಕ್ಯಾಪ್ಸುಲ್‍ಗಳನ್ನು ತೋರಿಸಿದೆ. ಬಹಳ ಎಚ್ಚರಿಕೆಯಿಂದ 104 ಕ್ಯಾಪ್ಸುಲ್‍ಗಳನ್ನು ಹೊರಗೆ ತೆಗೆಯಲಾಗಿದೆ. ಮೂರು ದಿನದೊಳಗೆ ಕ್ಯಾಪ್ಸುಲ್‍ಗಳನ್ನು ಹೊರಗೆ ತೆಗೆಯದಿದ್ದಲ್ಲಿ ಆತನಜೀವಕ್ಕೆ ಅಪಾಯ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ. ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News