ಆರ್ಥಿಕ ಮುಗ್ಗಟ್ಟಿನಲ್ಲಿ ಬೆಂಗಳೂರು ವಿವಿ: ನಿವೃತ್ತಿ ಪಿಂಚಣಿ ಪಾವತಿಸಲು ಅನುದಾನ ಕೊರತೆ

Update: 2022-09-24 18:04 GMT

ಬೆಂಗಳೂರು, ಸೆ.24:ಪ್ರತಿಷ್ಟಿತ ಬೆಂಗಳೂರು ವಿಶ್ವವಿದ್ಯಾಲಯವು ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿರುವುದು ಇತ್ತೀಚಿಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಬಹಿರಂಗವಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೇವಲ ನಿವೃತ್ತಿ ಪಿಂಚಣಿದಾರರಿಗೆ ವಾರ್ಷಿಕವಾಗಿ 76 ಕೋಟಿ ರೂ.ಗಳಿಂದ 85 ಕೋಟಿ ರೂ. ಅನುದಾನ ಅವಶ್ಯಕತೆ ಇದ್ದರೂ, ಪ್ರಸಕ್ತ ವರ್ಷದಲ್ಲಿ ರಾಜ್ಯ ಸರಕಾರ ಕೇವಲ 15 ಕೋಟಿ ರೂ. ಅನುದಾನವನ್ನು ಮಾತ್ರ ಬಿಡುಗಡೆಯಾಗಿದೆ ಎಂದು ವಿವಿಯ ವಿತ್ತಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. 

ವಿವಿಯಲ್ಲಿ ನಿವೃತ್ತಿ ಹೊಂದುತ್ತಿರುವ ನೌಕರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಪಿಂಚಣಿ ವಂತಿಕೆ ನೀಡಲು ವಾರ್ಷಿಕವಾಗಿ ಸುಮಾರು 100ಕೋಟಿ ರೂ.ಬೇಕಾಗಿರುತ್ತದೆ. ಇಷ್ಟು ವೆಚ್ಚವನ್ನು ಭರಿಸಲು ವಿಶ್ವವಿದ್ಯಾಲಯವು ಕನಿಷ್ಠ 2,500ಕೋಟಿ ರೂ. ಅಗತ್ಯವಿದೆ. ಪ್ರಸ್ತುತ ವಿಶ್ವವಿದ್ಯಾಲಯವು ಸ್ಥಾಪಿಸಿರುವ ಪಿಂಚಣಿ ನಿಧಿಯಲ್ಲಿ 348 ಕೋಟಿ ರೂ. ಮೊತ್ತವಿದ್ದು, ಇದರಿಂದ ವಾರ್ಷಿಕವಾಗಿ 20ಕೋಟಿ ರೂ.ವಾರ್ಷಿಕ ಬಡ್ಡಿ ಮಾತ್ರ ಬರುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

ಹಾಗೆಯೇ ವಿಶ್ವವಿದ್ಯಾಲಯವು ತ್ರಿವಿಭನೆಯಾದ ಕಾರಣ ಪ್ರೊ.ಕೋರಿ ಸಮಿತಿಯ ವರದಿಯಂತೆ ಬೆಂಗಳೂರು ನಗರ ವಿವಿ ಹಾಗೂ ಉತ್ತರ ವಿವಿಗಳಲ್ಲಿ ಕೆಲಸ ನಿರ್ವಹಿಸಲು ಇಚ್ಚಿಸಿದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಪಿಂಚಣಿ ಉಪಲಬ್ಧಿಯಾಗಿ ಸುಮಾರು 80 ಕೋಟಿ ರೂ.ಗಳನ್ನು ನೀಡಬೇಕಾಗಿದೆ. ಇದೇ ಮಾನದಂದ ಆಧಾರದ ಮೇಲೆ ವಿವಿಯಿಂದ ಬೇರ್ಪಟ್ಟ ಯುವಿಸಿಇ ನೌಕರರಿಗೂ ಪಿಂಚಣಿ ಉಪಲಬ್ಧಿ ನೀಡಲು ಸುಮಾರು 85ಕೋಟಿ ರೂ. ನೀಡಬೇಕಾಗಿರುತ್ತದೆ ಎಂದು ಸಿಂಡಿಕೇಟ್‍ನಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News