ಕಾಂಗ್ರೆಸ್‌ ಶಾಸಕರ ಸಾಮೂಹಿಕ ರಾಜಿನಾಮೆ ಬೆದರಿಕೆ ಕುರಿತು ಸಿಎಂ ಅಶೋಕ್‌ ಗೆಹ್ಲೋಟ್‌ ಹೇಳಿದ್ದೇನು?

Update: 2022-09-25 18:40 GMT
ಅಶೋಕ್‌ ಗೆಹ್ಲೋಟ್‌ (File Photo: PTI)

ಹೊಸದಿಲ್ಲಿ: ರಾಜಸ್ಥಾನದ(Rajasthan) ಕಾಂಗ್ರೆಸ್‌ನ(Congress) 90ಕ್ಕೂ ಹೆಚ್ಚು ಶಾಸಕರು ಇಂದು ರಾತ್ರಿ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದು, ಪರಿಸ್ಥಿತಿ ತನ್ನ ಕೈ ಮೀರಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪಕ್ಷದ ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಕೇಂದ್ರ ನಾಯಕರ ಆಯ್ಕೆ ಎಂದು ನಂಬಲಾಗಿರುವ ಸಚಿನ್ ಪೈಲಟ್ ಬದಲಿಗೆ ಅಶೋಕ್ ಗೆಹ್ಲೋಟ್ ಅವರೇ ಮುಖ್ಯಮಂತ್ರಿಯಾಗಬೇಕೆಂದು ಶಾಸಕರು ಬಯಸಿದ್ದಾರೆ. ಅಶೋಕ್‌ ಗೆಹ್ಲೋಟ್‌ ಅಲ್ಲದಿದ್ದರೆ ಅವರ ಆಯ್ಕೆಯ ಯಾರಾದರೂ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲಿ ಎಂದು ಗೆಹ್ಲೋಟ್‌ ಪರ ಶಾಸಕರು ಹೇಳಿರುವುದಾಗಿ ವರದಿಯಾಗಿದೆ. ಅಲ್ಲದೆ, ಸರ್ಕಾರ ಬಿದ್ದರೂ ಬೀಳಲಿ, ನಾವು ರಾಜೀನಾಮೆ ನೀಡಲು ಸಿದ್ಧ ಎಂದು ಸ್ಪೀಕರ್‌ಗೆ ಶಾಸಕರು ತಿಳಿಸಿದರು.

ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಅಶೋಕ್ ಗೆಹ್ಲೋಟ್ ದೂರವಾಣಿಯಲ್ಲಿ ಮಾತನಾಡಿದ್ದು, ‘ನನ್ನ ಕೈಯಲ್ಲಿ ಏನೂ ಇಲ್ಲ, ಶಾಸಕರು ಸಿಟ್ಟಾಗಿದ್ದಾರೆ’ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ  ಮುಂಚೂಣಿಯಲ್ಲಿದ್ದಾರೆ, ಪಕ್ಷವು ಎರಡು ದಶಕಗಳ ನಂತರ ತನ್ನ ಮೊದಲ ಗಾಂಧಿಯೇತರ ಮುಖ್ಯಸ್ಥರನ್ನು ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ಈ ಸ್ಥಾನದ ಮೇಲೆ ಗೆಹ್ಲೋಟ್ ಕಣ್ಣು ನೆಟ್ಟಿದ್ದಾರೆ. ಅದಾಗ್ಯೂ, ಅಕ್ಟೋಬರ್ 17 ರಂದು ನಡೆಯಲಿರುವ ಚುನಾವಣೆಗೆ ಅವರು ಇನ್ನೂ ನಾಮಪತ್ರ ಸಲ್ಲಿಸಿಲ್ಲ. ಮತ್ತೊಬ್ಬ ಅಭ್ಯರ್ಥಿ ಶಶಿ ತರೂರ್ ಈಗಾಗಲೇ ನಾಮಪತ್ರ ಕೇಳುವ ಮೂಲಕ ಪ್ರಕ್ರಿಯೆ ಆರಂಭಿಸಿದ್ದಾರೆ.

ಗೆಹ್ಲೋಟ್ ಅವರು ತಮ್ಮ ರಾಜಸ್ಥಾನದ ಸಿಎಂ ಹುದ್ದೆಯನ್ನು ಬಿಟ್ಟುಕೊಡಲು ಇಷ್ಟವಿಲ್ಲ, ವಿಶೇಷವಾಗಿ ಸಚಿನ್ ಪೈಲಟ್‌ಗೆ ಆ ಸ್ಥಾನವನ್ನು ನೀಡಲು ಮನಸ್ಸಿಲ್ಲದ್ದರಿಂದಲೇ ಕಾಂಗ್ರೆಸ್‌ ಭಿನ್ನಮತ ಸ್ಪೋಟಿಸಿದೆ ಎನ್ನಲಾಗಿದೆ. ಸಚಿನ್‌ ಪೈಲಟ್‌ ಅವರ ಎರಡು ವರ್ಷಗಳ ಹಿಂದಿನ ಬಂಡಾಯವು ಗೆಹ್ಲೋಟ್ ಸರ್ಕಾರವನ್ನು ಅಭದ್ರತೆಯಲ್ಲಿ ಸಿಲುಕಿಸಿತ್ತು. ಗೆಹ್ಲೋಟ್ ಅವರ ಬೆಂಬಲಿಗ ಶಾಸಕರು ಸಚಿನ್ ಪೈಲಟ್ ಅವರ 2020 ರ ಬಂಡಾಯವನ್ನು ಎತ್ತಿ ಹಿಡಿದಿದ್ದು, ಬಂಡಾಯ ಎದ್ದಿದ್ದ ಪೈಲಟ್‌ ಗೆ ಸಿಎಂ ಸ್ಥಾನ ನೀಡಲು ಒಪ್ಪುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News