ಮಾದಕ ವಸ್ತುಗಳ ವಿರುದ್ಧ ಸಿಸಿಬಿ ಕಾರ್ಯಾಚರಣೆ: ವಿದೇಶಿ ಪ್ರಜೆ ಸೇರಿ ಹಲವರ ಸೆರೆ

Update: 2022-09-27 13:47 GMT

ಬೆಂಗಳೂರು, ಸೆ.27: ಮಾದಕ ವಸ್ತುಗಳ ಸಾಗಾಟ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಸಿಸಿಬಿ ಪೊಲೀಸರು ಓರ್ವ ವಿದೇಶಿ ಪ್ರಜೆ ಸೆರೆ ಹಲವರನ್ನು ಬಂಧಿಸಿ 7 ಕೋಟಿ 80 ಲಕ್ಷರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಸಿಬಿಯ ಡಿಸಿಪಿ ಡಾ.ಎಸ್.ಡಿ.ಶರಣಪ್ಪ, ಆಂಧ್ರಪ್ರದೇಶದ ಸಿಂತಪಲ್ಲಿಯ ಬುದ್ದಿವಿಜಯ, ದೇವಿ, ಪಂಗಿ ಪನೋರಮಾ ಹಾಗೂ ಗುಂಡೇರಿ ಪುಷ್ಪಾ ಸೇರಿದಂತೆ ಈ ದಂಧೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಡಿಜೆ ಯೊಬ್ಬನನ್ನು ಬಂಧಿಸಲಾಗಿತ್ತು. ಆತ ವಿಚಾರಣೆಯಲ್ಲಿ ಆಂಧ್ರದ ಸಿಂತಪಲ್ಲಿ ಅರಣ್ಯದಿಂದ ನಗರಕ್ಕೆ ರೈಲಿನಲ್ಲಿ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಮಾಹಿತಿಯನ್ನು ಬಾಯ್ಬಿಟ್ಟಿದ್ದ ಎಂದು ಅವರು ತಿಳಿಸಿದರು.

ಯಾವುದೇ ಅನುಮಾನ ಬಾರದಂತೆ ನಗರದ ಪೆಡ್ಲರ್‍ಗಳಿಗೆ ಮಾದಕ ವಸ್ತುಗಳನ್ನು ಮಹಿಳೆಯರು ಸರಬರಾಜು ಮಾಡುವುದನ್ನು ಆತ ತಿಳಿಸಿದ್ದು ವಿಸ್ತೃತ ತನಿಖೆಯಲ್ಲಿ ಬಂಧಿತ ಮಹಿಳೆಯರು ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿನ್‍ಗೂ ಮಾದಕ ವಸ್ತು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು ಎಂದು ಶರಣಪ್ಪ ಹೇಳಿದರು.

ಆನಂತರ, ಸೆ.24ರಂದು ಪ್ರಶಾಂತಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಬಂದು ಪುಟ್ಟಪರ್ತಿಯ ರೈಲ್ವೆ ನಿಲ್ದಾಣದ ಹೊರಗಡೆ ಆಟೊ ನಿಲ್ಲಿಸಿಕೊಂಡು ಮಾದಕ ವಸ್ತು ಸರಬರಾಜು ಮಾಡಲು ನಿಂತಿದ್ದ ಮಹಿಳೆಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ವಿವರಿಸಿದರು.

ಬಂಧಿತರಿಂದ 7 ಕೋಟಿ 80 ಲಕ್ಷ ಮೌಲ್ಯದ 8 ಕೆಜಿ ಆಶಿಷ್ ಆಯಿಲ್, 10ಕೆಜಿ ಗಾಂಜಾ, 1 ಕೆಜಿಎಂಡಿಎಂಎಕ್ರಿಸ್ಟಲ್ ಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಶರಣಪ್ಪ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News