ರಾಜಸ್ಥಾನ ಸಿಎಂ ಗೆಹ್ಲೋಟ್ ಗೆ ಕ್ಲೀನ್ ಚಿಟ್: ನಿಷ್ಠರ ವಿರುದ್ಧ ಶಿಸ್ತುಕ್ರಮಕ್ಕೆ ಕೈ ವೀಕ್ಷಕರ ಶಿಫಾರಸು

Update: 2022-09-27 18:09 GMT

ಹೊಸದಿಲ್ಲಿ, ಸೆ.27: ರಾಜಸ್ಥಾನದಲ್ಲಿ ತಾರಕಕ್ಕೇರಿರುವ ರಾಜಕೀಯ ಬಿಕ್ಕಟ್ಟಿಗೆ ಕಾರಣರಾದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿಷ್ಠಾವಂತರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಜಯ್ ಮಾಕನ್ ಅವರು ಪಕ್ಷಾಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ಪರ್ಯಾಯ ಸಭೆಗಳನ್ನು ನಡೆಸುವ ಮೂಲಕ ತೀವ್ರ ಅಶಿಸ್ತನ್ನು ಪ್ರದರ್ಶಿಸಿದ ಹಲವಾರು ಭಿನ್ನಮತೀಯ ಕಾಂಗ್ರೆಸ್ ಶಾಸಕರು ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆಂದು ವರದಿ ಅಸಮಾಧಾನ ವ್ಯಕ್ತಪಡಿಸಿದೆ.

ಆದರೆ ಹಾಲಿ ಮುಖ್ಯಮಂತ್ರಿ ಗೆಹ್ಲೋಟ್ ಅವರಿಗೆ ವರದಿಯಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ. ರಾಜಸ್ಥಾನದಲ್ಲಿನ ನೂತನ ರಾಜಕೀಯ ಬೆಳವಣಿಗೆಗಳಿಗೆ ಗೆಹ್ಲೋಟ್ ಹೊಣೆಯಲ್ಲವೆಂದು ವೀಕ್ಷಕರು ಅಭಿಪ್ರಾಯಿಸಿದ್ದಾರೆ. ಆದಾಗ್ಯೂ ಗೆಹ್ಲೋಟ್ ಅವರನ್ನು ಬೆಂಬಲಿಸಿ ಪರ್ಯಾಯ ಸಭೆಯನ್ನು ಕರೆದಿದ್ದ ಪಕ್ಷದ ಕೆಲವು ಪ್ರಮುಖ ನಾಯಕರ ವಿರುದ್ಧ ಶಿಸ್ತುಕ್ರಮಕ್ಕೆ ವರದಿ ಶಿಪಾರಸು ಮಾಡಿದೆ.

ಆದರೆ ಗೆಹ್ಲೋಟ್‌ರಿಗೆ ನಿಷ್ಠರಾಗಿರುವ ಸಚಿವರಾದ ಧರಿವಾಲ್, ಪ್ರತಾಪ್‌ಸಿಂಗ್ ಖಚಾರಿವಾಹ ಹಾಗೂ ಕಾಂಗ್ರೆಸ್ ನಾಯಕ ಧರ್ಮೇಂದ್ರ ರಾಥೋಡ್ ವಿರುದ್ಧ ಶಿಸ್ತುಕ್ರಮಕ್ಕೆ ಈ ಒಂಭತ್ತು ಪುಟಗಳ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿನ್ ಪೈಲಟ್ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ನಿಯೋಜಿಸುವ ಕಾಂಗ್ರೆಸ್ ಹೈಕಮಾಂಡ್‌ನ ಸಂಭಾವ್ಯ ನಡೆಯನ್ನು ವಿರೋಧಿಸಿ ಹಲವಾರು ಗೆಹ್ಲೋಟ್ ಬೆಂಬಲಿಗ ಶಾಸಕರು ರವಿವಾರ ರಾಜೀನಾಮೆ ನೀಡಿದ್ದರು.  ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವುದಕ್ಕೆ ಮುಂಚಿತವಾಗಿ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಂಡಾಯ ಭುಗಿಲೆದ್ದಿತ್ತು.

ಗೆಹ್ಲೋಟ್ ಅವರನ್ನು ಪದಚ್ಯುತಗೊಳಿಸಿ, ಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡಲು, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಸಂಚು ಹೂಡಿದ್ದಾರೆಂದು, ಗೆಹ್ಲೋಟ್ ನಿಷ್ಠರು ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದರು.ಆದಾಗ್ಯೂ ಪೈಲಟ್ ಬಣವು ಸದ್ಯದ ಬೆಳವಣಿಗೆಗಳ ಬಗ್ಗೆ ಮೌನ ವಹಿಸಿದ್ದು, ಕಾಂಗ್ರೆಸ್ ಹೈಕಮಾಂಡ್‌ನ ನಿರ್ಧಾರಕ್ಕಾಗಿ ಕಾಯುತ್ತಿದೆ ಎನ್ನಲಾಗಿದೆ.

ಗೆಹ್ಲೋಟ್‌ಗೆ 90 ಶಾಸಕರ ಬೆಂಬಲವಿರುವುದಾಗಿ ಅವರ ನಿಷ್ಠರು ಹೇಳಿಕೊಂಡಿದ್ದಾರೆ. ಆದರೆ ಪೈಲಟ್ ಬೆಂಬಲಿಗರು ಅದನ್ನು ತಳ್ಳಿಹಾಕಿದ್ದಾರೆ.  ಅಲ್ಲದೆ ಗೆಹ್ಲೋಟ್ ಬಣದೊಂದಿಗೆ ಗುರುತಿಸಿಕೊಂಡಿದ್ದ ಹಲವು ಶಾಸಕರಿಗೆ ಪಕ್ಷದ ಶಾಸಕರ ಸಭೆ ನಡೆಯುವ ಸ್ಥಳ ಮತ್ತು ಸಮಯದ ಬಗ್ಗೆ ತಪ್ಪು ಮಾಹಿತಿ ನೀಡಲಾಗಿತ್ತು ಮತ್ತು ಶಾಸಕರ ಸಂಖ್ಯಾಬಲವನ್ನು ತೋರಿಸುವ ಉದ್ದೇಶದಿಂದ ಗೆಹ್ಲೋಟ್ ಬೆಂಬಲಿಗ ಧರಿವಾಲ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News