ಸರಕಾರವನ್ನೇ ಬ್ಲಾಕ್‌ಮೇಲ್ ಮಾಡುತ್ತಿರುವ ಗೋಶಾಲೆಗಳು

Update: 2022-09-28 06:22 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ರವಿವಾರ ಗುಜರಾತ್‌ನ ಪಾಲನ್‌ಪುರದಲ್ಲಿ ಗುಜರಾತ್ ಸರಕಾರದ ವಿರುದ್ಧ ಒಂದು ಐತಿಹಾಸಿಕ ಪ್ರತಿಭಟನೆ ನಡೆಯಿತು. ಗುಜರಾತ್‌ನ ಹೆದ್ದಾರಿಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಗೋವುಗಳು ಧರಣಿ ನಡೆಸಿದವು. ಗೋಶಾಲೆಗಳನ್ನು ನಿರ್ವಹಿಸಲು ಗುಜರಾತ್ ಸರಕಾರವು ಆರ್ಥಿಕ ನೆರವನ್ನು ನೀಡಲು ವಿಫಲವಾಗಿರುವುದನ್ನು ವಿರೋಧಿಸಿ ರವಿವಾರ 200ಕ್ಕೂ ಅಧಿಕ ಗೋಶಾಲೆಗಳ ಟ್ರಸ್ಟಿಗಳು ಸಾವಿರಾರು ದನಗಳನ್ನು ರಸ್ತೆಗೆ ಬಿಟ್ಟರು. ಪರಿಣಾಮವಾಗಿ ಗುಜರಾತ್‌ನ ಹೆದ್ದಾರಿಗಳಲ್ಲಿ ಸಂಚಾರ ಸ್ತಬ್ಧಗೊಂಡಿತು. ಗುಜರಾತ್ ರಾಜ್ಯವೊಂದರಲ್ಲೇ 150 ಗೋಶಾಲೆಗಳಿದ್ದು, ಅವುಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಅನುಪಯುಕ್ತ ಗೋವುಗಳನ್ನು ಸಾಕಲಾಗುತ್ತದೆ. ಇದು ಒಂದು ರಾಜ್ಯದ ಅಂಕಿಸಂಕಿಯಾದರೆ, ಇಡೀ ದೇಶದಲ್ಲಿ ಅನುಪಯುಕ್ತ ಗೋಶಾಲೆಗಳನ್ನು ನಡೆಸುವುದಕ್ಕಾಗಿ ಆಗುತ್ತಿರುವ ವೆಚ್ಚವನ್ನು ನಾವು ಕಲ್ಪಿಸಿಕೊಳ್ಳೋಣ. ಈ ಗೋಶಾಲೆಗಳನ್ನು ನಡೆಸುತ್ತಿರುವವರು ಹೈನೋದ್ಯಮದೊಂದಿಗೆ, ಕೃಷಿಯೊಂದಿಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳು ಅಥವಾ ಸಂಘಟನೆಗಳು. ಕೋಟ್ಯಂತರ ರೂಪಾಯಿಯನ್ನು ಪ್ರತೀ ವರ್ಷ ಸರಕಾರ ಈ ಗೋಶಾಲೆಗಳಿಗೆ ಚೆಲ್ಲುತ್ತಿದೆಯಾದರೂ, ಈ ಗೋಶಾಲೆಗಳು ಪ್ರತಿಯಾಗಿ ದೇಶಕ್ಕೆ ಏನನ್ನೂ ಉತ್ಪಾದಿಸಿ ನೀಡುವುದಿಲ್ಲ. ಬದಲಿಗೆ, ಈ ಗೋಶಾಲೆಗಳು ಬೃಹತ್ ಅವ್ಯವಹಾರಗಳ ತಾಣವಾಗಿ ಬೆಳೆಯುತ್ತಿವೆ. ಒಂದೆಡೆ ಸರಕಾರದಿಂದ ಅನುದಾನಗಳನ್ನು ಪಡೆಯುತ್ತಲೇ, ಗೋವುಗಳಿಗೆ ಸೂಕ್ತ ಆಹಾರ ಔಷಧಿಗಳನ್ನು ನೀಡದೇ ಅವುಗಳ ಮಾರಣಹೋಮಕ್ಕೆ ಕಾರಣವಾಗುತ್ತಿವೆ. ಮಗದೊಂದೆಡೆ ಗುಟ್ಟಾಗಿ ಈ ಗೋಶಾಲೆಗಳಿಂದಲೇ ಬೃಹತ್ ಮಾಂಸ ಸಂಸ್ಕರಣಾ ಘಟಕಗಳಿಗೆ ಗೋವುಗಳ ಪೂರೈಕೆಯಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಇವೆಲ್ಲದರ ನಡುವೆ, ಇದೀಗ ಗೋಶಾಲೆಗಳು ಅನುದಾನ ಬಿಡುಗಡೆಯಾಗಿಲ್ಲ ಎನ್ನುವ ಕಾರಣ ಮುಂದೊಡ್ಡಿ ಗೋವುಗಳನ್ನು ರಸ್ತೆಗೆ ಬಿಟ್ಟು ಸರಕಾರವನ್ನೇ ‘ಬ್ಲಾಕ್ ಮೇಲ್’ ಮಾಡಲು ಮುಂದಾಗಿವೆ. ಎಲ್ಲ ರಾಜ್ಯ ಸರಕಾರಗಳೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ದೇಶಾದ್ಯಂತ ಗೋಶಾಲೆಗಳೆಲ್ಲ ಬೀದಿಗೆ ಬಿದ್ದರೆ ಅಚ್ಚರಿಯೇನೂ ಇಲ್ಲ. ಒಂದು ರೀತಿಯಲ್ಲಿ, ಸರಕಾರದ ಕಾನೂನು ಸರಕಾರಕ್ಕೇ ತಿರುಗುಬಾಣವಾಗಿ ಪರಿಣಮಿಸಿದೆ.

ಶತಶತಮಾನಗಳಿಂದ ಈ ದೇಶ ಗೋವುಗಳನ್ನು ಪಾಲಿಸುತ್ತಾ ಅದರ ಉತ್ಪನ್ನಗಳ ಮೂಲಕ ಜೀವಿಸುತ್ತಾ ಬಂದಿದೆ. ಗೋವು ಆರ್ಥಿಕತೆಯ ಸಂಕೇತವಾಗಿತ್ತು. ಎಂದೂ ಸರಕಾರಕ್ಕೆ ಅನುಪಯುಕ್ತ ಗೋವುಗಳನ್ನು ಸಾಕುವ ಹೊಣೆಗಾರಿಕೆಯಿದ್ದಿರಲಿಲ್ಲ. ಯಾಕೆಂದರೆ ಗೋಸಾಕಣೆಯಲ್ಲಿ ಅನುಪಯುಕ್ತ ಗೋವು ಎನ್ನುವ ಪರಿಕಲ್ಪನೆಯೇ ಇರಲಿಲ್ಲ. ಹಾಲು ಕೊಡುವ ಗೋವುಗಳು ರೈತರ ಬದುಕಿನ ಆಧಾರವಾಗಿದ್ದರೆ, ಹಾಲುಕೊಡದ ಗೋವುಗಳೂ ರೈತರಿಗೆ ಉಪಯೋಗಕ್ಕೆ ಬೀಳುತ್ತಿದ್ದವು. ಅಂತಹ ಗೋವುಗಳನ್ನು ರೈತರು ಮಾರಿ, ಮನೆಯ ಅಥವಾ ಹಟ್ಟಿಯ ಇತರ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುತ್ತಿದ್ದರು. ಒಂದು ಗೋವು ಕಡಿಮೆ ಎಂದರೂ 10,000 ರೂಪಾಯಿ ಬೆಲೆ ಬಾಳುತ್ತದೆ. ಚರ್ಮೋದ್ಯಮ, ಮಾಂಸೋದ್ಯಮಗಳಿಗೆ ಸಂಬಂಧಪಟ್ಟ ವ್ಯಕ್ತಿಗಳು ಈ ಹಸುಗಳನ್ನು ಖರೀದಿಸುತ್ತಿದ್ದರು. ಗೋವುಗಳನ್ನು ಸಾಕದ ಸಮುದಾಯವೊಂದು ಯಾವಾಗ ಹೈನೋದ್ಯಮದೊಳಗೆ ಮೂಗು ತೂರಿಸಿತೋ, ಅಲ್ಲಿಂದ ರೈತರ ಗ್ರಹಚಾರ ಕೆಟ್ಟಿತು. ಈ ಸಣ್ಣ ಗುಂಪನ್ನು ತೃಪ್ತಿ ಪಡಿಸುವುದಕ್ಕಾಗಿ ಸರಕಾರ ‘ಜಾನುವಾರು ಮಾರಾಟ ನಿಷೇಧ’ ಕಾಯ್ದೆಯೊಂದನ್ನು ‘ಗೋ ಹತ್ಯೆ ನಿಷೇಧ’ದ ಹೆಸರಲ್ಲಿ ಜಾರಿಗೆ ತಂದಿತು. ತಮ್ಮ ಹಟ್ಟಿಯಲ್ಲಿರುವ ಗೋವುಗಳನ್ನು ಯಾರಿಗೆ ಮಾರಬೇಕು, ಮಾರಬಾರದು ಎನ್ನುವ ಹಕ್ಕನ್ನು ರೈತರು ಕಳೆದುಕೊಂಡರು.

ಬೀದಿಯಲ್ಲಿರುವ ರೌಡಿಗಳು, ಪುಂಡರು ರೈತರಿಗೆ ಸಮಸ್ಯೆಯಾಗಿ ಕಾಡತೊಡಗಿದರು. ಅನುಪಯುಕ್ತ ಹಸುಗಳನ್ನು ಮಾರಲಾಗದೆ ರೈತರು ನಷ್ಟಕ್ಕೀಡಾದರು. ಈ ಗೋವುಗಳನ್ನು ಏನು ಮಾಡಬೇಕು? ಮೂರ್ಖ ಸರಕಾರ, ಈ ಗೋವುಗಳನ್ನು ಸಾಕುವ ಹೊಣೆಯನ್ನು ವಹಿಸಿಕೊಂಡಿತು. ಗೋಶಾಲೆಗಳು ರಚನೆಯಾದವು. ಜನರ ಅಭಿವೃದ್ಧಿಗಾಗಿ ವ್ಯಯಮಾಡಬೇಕಾದ ಹಣವನ್ನು ಸರಕಾರ ಗೋಶಾಲೆಗಳಿಗೆ ಸುರಿಯಿತು. ರೈತರೇ ಸಾಕಿ, ಬೇಕೆಂದರೆ ಇಟ್ಟುಕೊಂಡು, ಬೇಡವಾದರೆ ಮಾರುತ್ತಾ ತಮಗೆ ತಾವೇ ಉದ್ಯಮವನ್ನು ನಿಭಾಯಿಸುತ್ತಿದ್ದ ಹೊತ್ತಿನಲ್ಲಿ, ಅನಗತ್ಯವಾಗಿ ಈ ಅನುಪಯುಕ್ತ ಗೋವುಗಳನ್ನು ಸಾಕುವ ಹೊರೆಯನ್ನು ಸರಕಾರ ಮೈಮೇಲೆ ಎಳೆದುಕೊಂಡಿದ್ದು ಎಷ್ಟು ಸರಿ? ಇಂದು ಇದರಿಂದಾಗಿ ಒಂದೆಡೆ ಗೋಸಾಕಣೆಗಾರರು ತಮ್ಮ ಆದಾಯದ ಮೂಲವೊಂದನ್ನು ಕಳೆದುಕೊಂಡರೆ, ಇತ್ತ ಸರಕಾರ ಅನಗತ್ಯವಾಗಿ ಈ ಗೋಶಾಲೆಗಳಿಗಾಗಿ ಖಜಾನೆಯಿಂದ ಹಣವನ್ನು ವ್ಯಯ ಮಾಡಬೇಕಾಗಿದೆ. ಒಂದೆಡೆ ಕೃಷಿಕರಿಗೂ ಇನ್ನೊಂದೆಡೆ ಸರಕಾರಕ್ಕೂ ನಷ್ಟ. ಈ ನಡುವೆ ಹೈನೋದ್ಯಮದ ಜೊತೆಗೆ ಸಂಬಂಧವೇ ಇಲ್ಲದ ದಲ್ಲಾಳಿಗಳು ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇದೀಗ ಅವರು ಗೋವುಗಳನ್ನೇ ಛೂ ಬಿಟ್ಟು ಸರಕಾರವನ್ನು ಮಣಿಸಲು ಮುಂದಾಗಿದ್ದಾರೆ.

ಗೋಶಾಲೆಯೆಂಬ ಗುಂಡುಕಲ್ಲನ್ನು ಸರಕಾರ ತನ್ನ ಕುತ್ತಿಗೆಗೆ ಕಟ್ಟಿಕೊಂಡ ಪರಿಣಾಮ ಈಗಾಗಲೇ ಗ್ರಾಮೀಣ ಹೈನೋದ್ಯಮ ಏದುಸಿರು ಬಿಡತೊಡಗಿದೆ. ರೈತರು ನಿಧಾನಕ್ಕೆ ಗೋಸಾಕಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಬೀದಿಗಳಲ್ಲಿ , ರಸ್ತೆಗಳಲ್ಲಿ ಬಿಡಾಡಿ ಗೋವುಗಳು ಬಹುದೊಡ್ಡ ಸಮಸ್ಯೆಯಾಗಿದೆ. ಅಷ್ಟೇ ಅಲ್ಲ, ಹೀಗೆ ಬೀದಿಗೆ ಬಿದ್ದು ರೋಗಗ್ರಸ್ಥವಾದ ಗೋವುಗಳು ಇಡೀ ಕೃಷಿ ಕ್ಷೇತ್ರವನ್ನೇ ಆಹುತಿ ತೆಗೆದುಕೊಳ್ಳುತ್ತಿದೆ. ಒಂದೆಡೆ ಗೋಶಾಲೆಗಳಲ್ಲಿ ಅವ್ಯವಸ್ಥೆಯಿಂದ ಪ್ರತಿದಿನ ನೂರಾರು ಗೋವುಗಳು ಸಾಯುತ್ತಿದ್ದರೆ, ಮಗದೊಂದೆಡೆ ಸಾಂಕ್ರಾಮಿಕ ರೋಗಗಳಿಂದ ಲಕ್ಷಕ್ಕೂ ಅಧಿಕ ಗೋವುಗಳು ಸತ್ತಿರುವ ಅಂಕಿಅಂಶಗಳು ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶದಿಂದ ಹೊರ ಬೀಳುತ್ತಿವೆ. ಈ ಸಾಂಕ್ರಾಮಿಕ ರೋಗಗಳನ್ನು ತಡೆಯುವಲ್ಲೂ ಸರಕಾರ ಸಂಪೂರ್ಣ ವಿಫಲವಾಗಿದೆ. ಒಂದೆಡೆ ರೈತರ ಉಪಯುಕ್ತ ಗೋವುಗಳಿಗೇ ಚಿಕಿತ್ಸೆ ನೀಡಿ ಅವುಗಳನ್ನು ಉಳಿಸಲು ವಿಫಲವಾಗುತ್ತಿರುವ ಸರಕಾರ, ಇತ್ತ ಅನುಪಯುಕ್ತ ಗೋವುಗಳನ್ನು ಕೋಟ್ಯಂತರ ರೂ. ವೆಚ್ಚ ಮಾಡಿ ಉಳಿಸುತ್ತದೆಯೆ? ಗೋವುಗಳ ಹೆಸರಿನಲ್ಲಿ ರಾಜಕೀಯ ನಡೆಸುವುದಕ್ಕಾಗಿ, ಒಂದು ಸಮುದಾಯವನ್ನು ದ್ವೇಷಿಸುವುದಕ್ಕಾಗಿ, ಅವರ ಮೇಲೆ ಹಿಂಸೆಯೆಸಗುವುದಕ್ಕಾಗಿ ತಂದಿರುವ ಗೋ ಹತ್ಯೆ ನಿಷೇಧ ಕಾನೂನು ಇದೀಗ ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಇಂದು ತಾನೇ ಸ್ಥಾಪಿಸಿದ ಗೋಶಾಲೆಗಳನ್ನು ನಿರ್ವಹಿಸಲಾಗದೆ ಅದು ಕೈ ಕೈ ಹಿಚುಕಿಕೊಳ್ಳುತ್ತಿದೆ.

‘ಸಾವರ್ಕರ್’ರನ್ನು ಆದರ್ಶವಾಗಿಟ್ಟುಕೊಂಡ ಕೇಂದ್ರ ಸರಕಾರ ಗೋವಿನ ವಿಷಯದಲ್ಲಾದರೂ ಸಾವರ್ಕರ್ ಅವರ ಚಿಂತನೆಯನ್ನು ಗೌರವಿಸಿ ಅದನ್ನು ಅನುಷ್ಠಾನಗೊಳಿಸಲು ಮುಂದಾಗಬೇಕಾಗಿದೆ. ಗೋವನ್ನು ದೇವರು, ಮಾತೆ ಎಂದು ಕರೆಯುವುದನ್ನು ಸಾವರ್ಕರ್ ಕಟುವಾಗಿ ಟೀಕಿಸಿದ್ದರು. ಗೋವನ್ನು ಎಲ್ಲ ಜಾನುವಾರುಗಳಂತೆಯೇ ಕಾಣುವುದರಿಂದ, ದೇಶಕ್ಕೆ ಒಳಿತಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಗೋವನ್ನು ಮಾತೆ ಎಂದು ಕರೆದವರನ್ನು ಕಟು ಭಾಷೆಯಲ್ಲಿ ನಿಂದಿಸಿದ್ದರು. ಇಂದು ಗೋಶಾಲೆಗಳಿಂದ ಎದುರಾಗಿರುವ ಇಕ್ಕಟ್ಟಿನಿಂದ ಪಾರಾಗಲು ಸರಕಾರದ ಮುಂದಿರುವುದು ಒಂದೇ ದಾರಿ. ದೇಶದೊಳಗಿರುವ ಎಲ್ಲ ಗೋಶಾಲೆಗಳನ್ನು ಮುಚ್ಚಿಸಬೇಕು. ಗೋಶಾಲೆಗಳಿಗೆ ವ್ಯಯಿಸುವ ಹಣವನ್ನು ಸರಕಾರಿ ಶಾಲೆಗಳಿಗೆ, ಅಪೌಷ್ಟಿಕತೆ ನಿವಾರಣೆಗಾಗಿ ಬಳಸಬೇಕು. ಗೋವುಗಳನ್ನು ಮಾರುವ ಹಕ್ಕನ್ನು ರೈತರಿಗೇ ಬಿಟ್ಟುಕೊಡಬೇಕು. ಗೋಮಾಂಸಾಹಾರಿಗಳನ್ನು ಪ್ರೋತ್ಸಾಹಿಸಬೇಕು. ಈ ಮೂಲಕ ಹೈನೋದ್ಯಮ ಚಿಗುರುತ್ತವೆ. ಇತ್ತ ದೇಶದ ಅಪೌಷ್ಟಿಕತೆ, ಆಹಾರದ ಅಭಾವಗಳು ನಿವಾರಣೆಯಾಗುತ್ತವೆ. ನಿಜವಾದ ಗೋಸಾಕಣೆಗಾರರು ಬದುಕಿಕೊಳ್ಳುತ್ತಾರೆ. ಹಾಗೆಯೇ ನಕಲಿ ಗೋರಕ್ಷಕರ ಅಕ್ರಮಗಳಿಗೂ ತಡೆ ಬೀಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News