ಬಿಬಿಎಂಪಿ ವಾರ್ಡ್‍ಗಳಿಗೆ ಮೀಸಲಾತಿ ನಿಗದಿ: ಒಬಿಸಿ ಆಯೋಗದ ವರದಿ ಬಗ್ಗೆ ಮಾಹಿತಿ ಕೇಳಿದ ಹೈಕೋರ್ಟ್

Update: 2022-09-27 18:28 GMT

ಬೆಂಗಳೂರು, ಸೆ.27: ಬಿಬಿಎಂಪಿ ವಾರ್ಡ್‍ಗಳಿಗೆ ಮಹಿಳಾ ಮೀಸಲಾತಿ ಮರು ರೂಪಿಸುವ ಬಗ್ಗೆ ತಿಳಿಸುವಂತೆ ಹಾಗೂ ಮೀಸಲಾತಿ ಸಂಬಂಧ ಇತರೆ ಒಬಿಸಿ ಆಯೋಗದ ವರದಿಗೆ ಯಾವ ದಾಖಲೆಯನ್ನು ಆಧರಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. 

ನಗರದ ಕೆ.ಮಹದೇವ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. 

ಅರ್ಜಿದಾರರ ಪರ ವಾದಿಸಿದ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, ಬಿಬಿಎಂಪಿ ವಾರ್ಡ್‍ವಾರು ಮೀಸಲಾತಿ ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಭಕ್ತವತ್ಸಲ ಸಮಿತಿ ನೀಡಿರುವ ವರದಿ ಆಧರಿಸಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಸರಕಾರ ಹೇಳಿದೆ.

ಆದರೆ, ಸುಪ್ರೀಂಕೋರ್ಟ್ ಹೇಳಿರುವ ಮೂರು ಹಂತದ ಪರಿಶೀಲನೆಯನ್ನು ಭಕ್ತವತ್ಸಲ ಸಮಿತಿಯೇ ಅನ್ವಯಿಸಿಕೊಂಡಿಲ್ಲ. ಸರಕಾರ ಸಹ ಮೀಸಲಾತಿ ಕಲ್ಪಿಸುವಾಗ ಈ ಅಂಶವನ್ನು ಪರಿಗಣಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ರಾಜಕೀಯ ಮೀಸಲಾತಿಗೆ ಮಾನದಂಡವೇ ಬೇರೆ ಇದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ನೀಡುವಂತೆ ರಾಜಕೀಯ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಯಾವ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲವೋ ಅಂತಹ ಜಾತಿಗಳಿಗೆ ಮೀಸಲಾತಿ ಕಲ್ಪಿಸಬೇಕಾಗುತ್ತದೆ. ಆದರೆ, ಬಿಬಿಎಂಪಿ ವಾರ್ಡ್ ಮೀಸಲಾತಿ ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲ. ಹೀಗಾಗಿ, ಬಿಬಿಎಂಪಿ ವಾರ್ಡ್‍ವಾರು ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ರಾಜ್ಯ ಚುನಾವಣಾ ಆಯೋಗದ ಪರ ವಕೀಲರೂ ವಾದಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಮುಂದೂಡಿಕೆ ಮಾಡಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News