ಎನ್‍ಇಪಿಯನ್ನು ವಿರೋಧಿಸಿದ ಮೊದಲ ರಾಜ್ಯವೂ ಕರ್ನಾಟಕವೇ ಆಗಿದೆ: ಸರಕಾರಕ್ಕೆ ಎಐಡಿಎಸ್‍ಓ ತಿರುಗೇಟು

Update: 2022-09-28 17:06 GMT

ಬೆಂಗಳೂರು, ಸೆ.28: ‘ರಾಜ್ಯ ಸರಕಾರವು ನೂತನ ಶಿಕ್ಷಣ ನೀತಿ(ಎನ್‍ಇಪಿ)ಯನ್ನು ಜಾರಿ ಮಾಡಿದ ಮೊಟ್ಟಮೊದಲ ರಾಜ್ಯವೆಂದು ಬಹಳ ಹೆಗ್ಗಳಿಕೆಯಿಂದ ಹೇಳಿಕೊಂಡಿದೆ. ಆದರೆ ಎನ್‍ಇಪಿ-2020ಯನ್ನು ವಿರೋಧಿಸಿದ ಮೊದಲ ರಾಜ್ಯವೂ ಕರ್ನಾಟಕವೇ ಆಗಿದೆ ಎಂದು ರಾಜ್ಯ ಬಿಜೆಪಿ ಸರಕಾರಕ್ಕೆ ಮನವರಿಕೆ ಆಗಬೇಕು’ ಎಂದು ಎಐಡಿಎಸ್‍ಓನ ಅಖಿಲ ಭಾರತ ಸಮಿತಿಯ ಅಧ್ಯಕ್ಷ ವಿ.ಎನ್.ರಾಜಶೇಖರ್ ಅಭಿಪ್ರಾಯಪಟ್ಟರು. 

ಬುಧವಾರ ನಗರದ ಫ್ರೀಡಂ ಪಾರ್ಕಿನಲ್ಲಿ ‘ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆಗಾನೈಜೇಷನ್(ಎಐಡಿಎಸ್‍ಓ) ವತಿಯಿಂದ ಆಯೋಜಿಸಿದ್ದ ‘ರಾಜ್ಯಮಟ್ಟದ ವಿದ್ಯಾರ್ಥಿಗಳ ಬೃಹತ್ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ನೂತನ ಶಿಕ್ಷಣ ನೀತಿಯು ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ನಾಶವಾಗುವಂತಹ ಶಿಫಾರಸ್ಸಗಳನ್ನು ನೀಡಿದೆ. ಈ ಮೊದಲು ಕಾಂಗ್ರೆಸ್ ಸರಕಾರವು 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಶಿಕ್ಷಣದ ಖಾಸಗಿಕರಣಕ್ಕೆ ರತ್ನಗಂಬಳಿ ಹಾಸಿತ್ತು. ಈಗಿನ ಕೇಂದ್ರ ಬಿಜೆಪಿ ಸರಕಾರವು ಎನ್‍ಇಪಿ-2020 ಅನ್ನು ಜಾರಿ ಮಾಡುವ ಮೂಲಕ ಶಿಕ್ಷಣವನ್ನು ಮತ್ತಷ್ಟು ರಭಸವಾಗಿ ಕಾರ್ಪೋರೇಟಿಕರಣಗೊಳಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. 

‘ಉನ್ನತ ಶಿಕ್ಷಣ ಸಚಿವರು ನೂತನ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕೇವಲ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ನಾವು ರಾಜ್ಯ ಬಜೆಟ್‍ನಲ್ಲಿ ಶೇ.30ರಷ್ಟು ಶಿಕ್ಷಣಕ್ಕೆ ಮೀಸಲಿಡಿ ಎಂದು ಆಗ್ರಹಿಸುತ್ತಿದ್ದಾಗ, ಸರಕಾರದ ಹೇಳಿಕೆಯು ಅವರ ಕಡು ಶಿಕ್ಷಣ ವಿರೋಧಿ, ಬಡ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಇಂತಹ ಹತ್ತು ಹಲವು ಶಿಕ್ಷಣ ವಿರೋಧಿ ಶಿಫಾರಸ್ಸುಗಳನ್ನು ಈ ನೀತಿ ಹೊಂದಿದೆ’ ಎಂದು ಅವರು ಹೇಳಿದರು. 

ಎಐಡಿಎಸ್‍ಓನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ‘ಸರಕಾರಿ ಕಾಲೇಜುಗಳು ಹಣಕ್ಕಾಗಿ ಸರಕಾರದ ಮೇಲೆ ಅವಲಂಬಿತವಾಗುವುದು ಅತ್ಯಂತ ನಾಚಿಕೆಗೇಡಿನ ವಿಷಯ ಎಂದು ಮಂತ್ರಿಯೊಬ್ಬರು ಹೇಳುತ್ತಾರೆ. ಕಾಲೇಜುಗಳು ಸ್ವ-ಹಣಕಾಸು ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಅವರ ವಾದವಾಗಿದೆ. ಅಂದರೆ, ಕಾಲೇಜು ನಿರ್ವಹಣೆಗೆ ವಿದ್ಯಾರ್ಥಿಗಳನ್ನು ಆದಾಯ ಮಾಡಿಕೊಳ್ಳಿ ಎಂಬುದು ಅವರ ಮಾತಿನ ಅರ್ಥ ಇರಬಹುದು’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

‘ದೇಶದ ಮಹಾನ್ ನವೋದಯ ಚಿಂತಕರು ಈಶ್ವರಚಂದ್ರ ವಿದ್ಯಾಸಾಗರ್, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಶಿಕ್ಷಣದ ಹಣಕಾಸು ಜವಾಬ್ದಾರಿ ಸರಕಾರದ ಸಂಪೂರ್ಣ ಹೊಣೆ ಆಗಿರಬೇಕು ಎಂದು ಪ್ರತಿಪಾದಿಸಿದ್ದರು. ಈಗಿನ ಸರಕಾರ ಆ ಉದಾತ್ತ ಆಶಯಗಳನ್ನು ಬದಿಗಿರಿಸಿದೆ. ಇದರ ವಿರುದ್ಧ ಈಗಾಗಲೇ ಪ್ರಬಲ ಹೋರಾಟಗಳು ನಡೆಯುತ್ತಿದ್ದು, ಭಗತ್ ಸಿಂಗ್‍ರ ನಿಜವಾದ ಅನುಯಾಯಿಗಳಾದ ನಾವು ಶಿಕ್ಷಣವನ್ನು ಉಳಿಸುವ ಸಂಕಲ್ಪ ತೊಡಬೇಕು’ ಎಂದು ಅವರು ಕರೆ ನೀಡಿದರು. 

ಎಐಡಿಎಸ್‍ಓನ ರಾಜ್ಯ ಅಧ್ಯಕ್ಷ ಅಶ್ವಿನಿ ಕೆ.ಎಸ್.ಮಾತನಾಡಿ, ‘ಎನ್‍ಇಪಿ-2020 ನೀತಿಯು ಕೇವಲ ಸರಕಾರಿ ಶಾಲೆಗಳನ್ನು ಮುಚ್ಚುವುದಷ್ಟೇ ಅಲ್ಲದೇ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೆ ನಾಶಪಡಿಸುತ್ತದೆ. ಈ ಹೊಸ ಶಿಕ್ಷಣ ನೀತಿಯಲ್ಲಿ ದೇಶದ ಮಹಾನ್ ವ್ಯಕ್ತಿಗಳ ಪಾಠವನ್ನು ತೆಗೆದು ಹಾಕಿ ವಿದ್ಯಾರ್ಥಿಗಳನ್ನು ಉನ್ನತ ಆದರ್ಶ ಮೌಲ್ಯ ಸಂಸ್ಕೃತಿಯಿಂದ ದೂರವಿರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಅನ್ಯಾಯವನ್ನು ಪ್ರಶ್ನೆಮಾಡುವ ಮನಸ್ಥಿತಿಯನ್ನು ಹಿಸುಕಿಹಾಕಲು ಸರಕಾರವು ಎಲ್ಲ ರೀತಿಯಲ್ಲೂ ಹುನ್ನಾರ ನಡೆಸುತ್ತಿದೆ. ಇದರ ವಿರುದ್ಧ ವಿದ್ಯಾರ್ಥಿಗಳು ಹಳ್ಳಿ ಹಳ್ಳಿಗಳಲ್ಲೂ ಒಂದಾಗಿ ಹೋರಾಟವನ್ನು ಮುಂದುವರೆಸಬೇಕು ಎಂದು ಅವರು ಕರೆ ನೀಡಿದರು.

ಸರಕಾರವು ಜನವಿರೋಧಿಯಾದಾಗ ಹೋರಾಟ ನಡೆಸುವುದು ವಿದ್ಯಾರ್ಥಿಗಳ ಹಕ್ಕು ಮತ್ತು ಜವಾಬ್ದಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಭಗತ್ ಸಿಂಗ್ ಅವರ ಬದುಕನ್ನು ಮಾದರಿಯಾಗಿ ತೆಗೆದುಕೊಂಡು, ಸವಾಲುಗಳನ್ನು ಎದುರಿಸಬೇಕು. ಶಿಕ್ಷಣವನ್ನು ಇನಷ್ಟು ದುಬಾರಿಗೊಳಿಸಿದ ಸರಕಾರದ ನೀತಿಯನ್ನು ಖಂಡಿಸಬೇಕು. ಶಿಕ್ಷಣದ ಉಳಿವಿಗಾಗಿ ನಡೆಯುತ್ತಿರುವ ಈ ಚಳವಳಿಯು ಮಹಾಶಕ್ತಿಯಾಗಿ ಬೆಳೆಯಬೇಕು.

ಪ್ರೊ.ಎ.ಮುರಿಗೆಪ್ಪ, ವಿಶ್ರಾಂತ ಕುಲಪತಿ, ಹಂಪಿ ಕನ್ನಡ ವಿವಿ

----------------------------------------------

ಸಾರ್ವಜನಿಕ ಶಿಕ್ಷಣವನ್ನು ಉಳಿಸಲು 150 ದಿನಗಳ ಸತತ ಸಹಿ ಸಂಗ್ರಹ ಅಭಿಯಾನದ ಚಳವಳಿಯಲ್ಲಿ, 40 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡು, ರಾಜ್ಯದ 120ಕ್ಕೂ ಹೆಚ್ಚು ತಾಲೂಕುಗಳಿಂದ 35ಲಕ್ಷಕ್ಕೂ ಅಧಿಕ ಸಹಿಗಳು ಸಂಗ್ರಹವಾಗಿವೆ. ಇದನ್ನು ಮುಖ್ಯಮಂತ್ರಿ ಮೂಲಕ ರಾಷ್ಟ್ರಪತಿಗೆ ತಲುಪಿಸುತ್ತೇವೆ. ಇದು ಸಹಿ ಸಂಗ್ರಹ ಅಭಿಯಾನದ ಅಂತ್ಯವಲ್ಲ. ಇದರ ಮುಂದಿನ ಭಾಗವಾಗಿ, ದೇಶದಾದ್ಯಂತ 1 ಲಕ್ಷ ಎನ್.ಇ.ಪಿ ವಿರೋಧಿ ಸಮಿತಿಗಳ ರಚನೆ ಹಾಗೂ 25 ಲಕ್ಷ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರರಾಗಿ ನಮೂದಿಸಿ, ವಿದ್ಯಾರ್ಥಿ ವಿರೋಧಿ ಹೊಸ ಶಿಕ್ಷಣ ನೀತಿಯನ್ನು ಹಿಮ್ಮೆಟಿಸಲು ಪ್ರಯತ್ನಿಸುತ್ತೇವೆ.

ಅಜಯ್ ಕಾಮತ್, ಎಐಡಿಎಸ್‍ಓನ ರಾಜ್ಯ ಕಾರ್ಯದರ್ಶಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News