ದಿಲ್ಲಿ: ಜಗಿಯುವ ತಂಬಾಕು ಉತ್ಪನ್ನಗಳ ಮೇಲಿನ ನಿಷೇಧ ರದ್ದುಗೊಳಿಸಿದ ಹೈಕೋರ್ಟ್

Update: 2022-09-30 18:40 GMT

ಹೊಸದಿಲ್ಲಿ: ಹೊಸದಿಲ್ಲಿಯಲ್ಲಿ ಗುಟ್ಕಾ, ಪಾನ್ ಮಾಸಾಲಾ, ಸ್ವಾದಯುಕ್ತ ತಂಬಾಕು ಹಾಗೂ ಇದೇ ರೀತಿಯ ಉತ್ಪನ್ನಗಳ ಉತ್ಪಾದನೆ, ದಾಸ್ತಾನು ಹಾಗೂ ಮಾರಾಟ ನಿಷೇಧಿಸುವ ಹಲವು ಅಧಿಸೂಚನೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ.

ಆಹಾರ ಸುರಕ್ಷೆ ಆಯುಕ್ತರು 2015ರಿಂದ 7 ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಈ ಅಧಿಸೂಚನೆಗಳನ್ನು ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಕಾಯ್ದೆ-2006ರ ನಿಯಮದ ಅಡಿಯಲ್ಲಿ ವಿಧಿಸಲಾದ ಸಾಮಾನ್ಯ ತತ್ವವನ್ನು ಅನುಸರಿಸದೆ ಯಾಂತ್ರಿಕ ರೀತಿಯಲ್ಲಿ ಪ್ರತಿವರ್ಷ ಜಾರಿಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಗೌರಂಗ್ ಕಾಂತ್ ಅಭಿಪ್ರಾಯಿಸಿದ್ದಾರೆ.

ಹೊಗೆಯುಕ್ತ ಹಾಗೂ ಹೊಗೆ ರಹಿತ ತಂಬಾಕು ಎಂದು ವರ್ಗೀಕರಿಸುವಂತೆ ಸರಕಾರ ಅಧಿಸೂಚನೆ ಹೊರಡಿಸಿರುವುದು ಸಂವಿಧಾನದ ವಿಧಿ 14ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.

ಸ್ವಾದಯುಕ್ತ ಹಾಗೂ ಸುವಾಸನೆಯುಕ್ತ ಜಗಿಯುವ ತಂಬಾಕು ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟ ವ್ಯವಹಾರದಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳು ಸಲ್ಲಿಸಿದ ಅರ್ಜಿಗಳ ಗುಚ್ಛದ ವಿಚಾರಣೆಗೆ ನ್ಯಾಯಾಲಯ ಅವಕಾಶ ನೀಡಿತು.

ನಾವು ಅಗತ್ಯ ಇರುವ ಎಲ್ಲ ಪರವಾನಿಗೆ ಹಾಗೂ ಕಾನೂನಿನ ಅಡಿಯಲ್ಲಿ ಅನುಮತಿ ಪಡೆದುಕೊಂಡಿದ್ದೇವೆ ಎಂದು ಸಂಸ್ಥೆಗಳು ಪ್ರತಿಪಾದಿಸಿದವು.

ಜಗಿಯುವ ತಂಬಾಕಿನ ಉತ್ಪಾದನೆ ಅಥವಾ ಮಾರಾಟದ ಮೇಲೆ ನಿಷೇಧ ಹೇರಲು ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಕಾಯ್ದೆ ಅಡಿಯಲ್ಲಿ ದಿಲ್ಲಿ ಸರಕಾರದ ಆಹಾರ ಸುರಕ್ಷೆ ಆಯುಕ್ತರಿಗೆ ಅಧಿಕಾರ ಇಲ್ಲ ಎಂಬ ನೆಲೆಯಲ್ಲಿ ಕೂಡ ಅಧಿಸೂಚನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News