ಏರೋಸಾಲ್ ತಂತ್ರ ಹವಾಮಾನಕ್ಕೆ ಆದೀತೇ ಮಂತ್ರ?

Update: 2022-10-01 19:10 GMT

ಹವಾಮಾನ ಬದಲಾವಣೆಯು ಪ್ರಸಕ್ತ ದಿನಗಳಲ್ಲಿ ಇಡೀ ಜಗತ್ತು ಎದುರಿಸುತ್ತಿರುವ ಅತ್ಯಂತ ಭೀಕರ ಪರಿಣಾಮವಾಗಿದೆ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪ್ರತಿವರ್ಷವೂ ಭೂಮಿಯ ಉಷ್ಣಾಂಶ ಹೆಚ್ಚುತ್ತಲೇ ಇದೆ. ಇದರಿಂದ ಸಾಗರಗಳ ನೀರಿನ ಉಷ್ಣಾಂಶವೂ ಹೆಚ್ಚುತ್ತಿದೆ. ಸಾಗರಗಳಲ್ಲಿನ ಹಿಮಗಡ್ಡೆಗಳು ಕರಗಿ ನೀರಾಗುತ್ತಿವೆ. ಪರಿಣಾಮವಾಗಿ ಸಮುದ್ರದ ಮಟ್ಟ ಹೆಚ್ಚುತ್ತಿದೆ. ಸಮುದ್ರ ಮಟ್ಟದ ಹೆಚ್ಚಳದಿಂದ ಅನೇಕ ದ್ವೀಪಗಳು ಮುಳುಗುತ್ತಿವೆ. ಭೂಮಿಯ ಉಷ್ಣಾಂಶ ಏರಿದಂತೆ ನೆಲದ ತೇವಾಂಶವೂ ಕಡಿಮೆಯಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳು ಗಂಭೀರ ಸ್ವರೂಪ ತಾಳುತ್ತಿವೆ. ಜೊತೆಗೆ ವಾಯುಗುಣದಲ್ಲಿಯೂ ತೀವ್ರ ಬದಲಾವಣೆಗಳಾಗುತ್ತಿವೆ.

ಏರುತ್ತಿರುವ ಭೂಮಿಯ ಉಷ್ಣಾಂಶವನ್ನು ಹತೋಟಿಗೆ ತರಲು ಅಥವಾ ಹವಾಮಾನ ಬದಲಾವಣೆಗೆ ಮಾರಕವಾದ ಹಸಿರುಮನೆ ಅನಿಲಗಳ ಪ್ರಮಾಣವನ್ನು ತಗ್ಗಿಸಲು ಜಗತ್ತಿನ ದಿಗ್ಗಜ ರಾಷ್ಟ್ರಗಳೆಲ್ಲ ಶ್ರಮಿಸುತ್ತಲೇ ಇವೆ. ಹೊಸ ಹೊಸ ಕಾರ್ಯಯೋಜನೆಗಳನ್ನು ರೂಪಿಸುತ್ತಲೇ ಇವೆ. ಕೆಲವು ಯಶಸ್ವಿಯಾಗುತ್ತವೆ, ಇನ್ನು ಕೆಲವು ವಿಫಲವಾಗುತ್ತವೆ. ಈಗ ಅಂತಹ ವಿನೂತನ ಕಾರ್ಯಯೋಜನೆಯೊಂದು ರೂಪಿತವಾಗಿದೆ. ಯೇಲ್ ವಿಶ್ವವಿದ್ಯಾನಿಲಯದ ಸಂಶೋಧಕ ವೇಕ್ ಸ್ಮಿತ್ ನೇತೃತ್ವದ ಇತ್ತೀಚಿನ ಅಧ್ಯಯನ ತಂಡವು ಹೆಚ್ಚು ಕ್ರಿಯಾಶೀಲ ಎನಿಸಿದ ಜಿಯೋಇಂಜಿನಿಯರಿಂಗ್ ಯೋಜನೆಯನ್ನು ಪ್ರಸ್ತಾಪಿಸಿದೆ. ಈ ಯೋಜನೆ ಪ್ರಕಾರ ಭೂಗ್ರಹದ ಉತ್ತರ ಮತ್ತು ದಕ್ಷಿಣ ಎರಡೂ ಧ್ರುವಗಳಲ್ಲಿ ಏರೋಸಾಲ್‌ಗಳನ್ನು ಅಳವಡಿಸುವ ಮೂಲಕ ಅಲ್ಲಿ ಈಗ ಕರಗುತ್ತಿರುವ ಹಿಮವನ್ನು 2°Cಯಷ್ಟು ತಂಪಾಗಿಸುವುದು.

ಆ ಮೂಲಕ ಭೂಮಿಯನ್ನು ತಂಪಾಗಿರಿಸುವ ಯೋಜನೆಯಾಗಿದೆ. ಆದ್ದರಿಂದ ಮೂಲಭೂತವಾಗಿ ಜಿಯೋ ಇಂಜಿನಿಯರಿಂಗ್ ವಿಧಾನದ ಮೂಲಕ ಸೂರ್ಯನನ್ನು ಮಬ್ಬಾಗಿಸುವುದಾಗಿದೆ. 13,000 ಮೀಟರ್ (43,000 ಅಡಿ)ಗಿಂತ ಹೆಚ್ಚಿನ ಎತ್ತರದಲ್ಲಿ ಟ್ಯಾಂಕರ್ ವಿಮಾನಗಳಿಂದ ಈ ಕಾರ್ಯಾಚರಣೆಯನ್ನು ನಿರ್ವಹಿಸಲಾಗುತ್ತದೆ. ಇಲ್ಲಿ ಬಳಸುವ ಏರೋಸಾಲ್‌ಗಳು ಸಾಕಷ್ಟು ಪ್ರಮಾಣದ ಸಲ್ಫರ್ ಡೈಆಕ್ಸೈಡ್ ಅನ್ನು ಹೊರಹಾಕುತ್ತವೆ. ಯೋಜನೆಯು ಪ್ರತೀ ಧ್ರುವದಲ್ಲಿ 6.7 ಬಿಲಿಯನ್ ಕಿಲೋಗ್ರಾಂಗಳಷ್ಟು ಸಲ್ಫರ್ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತದೆ. ಸಲ್ಫರ್ ಡೈಆಕ್ಸೈಡ್ ವಾಯುಮಂಡಲಕ್ಕೆ ಬಿಡುವಾಗ, ಅದು ನೀರಿನೊಂದಿಗೆ ಸೇರಿ ಸಲ್ಫೂರಿಕ್ ಆ್ಯಸಿಡ್ ಏರೋಸಾಲ್‌ಗಳನ್ನು ರೂಪಿಸುತ್ತದೆ. ಸಲ್ಫೂರಿಕ್ ಆಮ್ಲವು ಒಳಬರುವ ಸೌರ ವಿಕಿರಣವನ್ನು ಪ್ರತಿಬಿಂಬಿಸಲು ಸಣ್ಣ ಹನಿಗಳ ಮಂಜಿನ ಗೋಡೆಯನ್ನು ನಿರ್ಮಿಸುತ್ತದೆ. ಇಂತಹ ಮಂಜಿನ ಗೋಡೆಯು ಭೂಮಿಯ ಮೇಲ್ಮೈಯನ್ನು ತಂಪಾಗಿಸುತ್ತದೆ ಎಂಬುದು ವಿಜ್ಞಾನಿಗಳ ವಾದ.

ಈ ಏರೋಸಾಲ್‌ಗಳು ಮೂರು ವರ್ಷಗಳವರೆಗೆ ವಾಯುಮಂಡಲದಲ್ಲಿ ಉಳಿಯಬಹುದು, ಗಾಳಿಯಿಂದ ಚಲಿಸಬಹುದು ಮತ್ತು ಪ್ರಪಂಚದಾದ್ಯಂತ ಗಮನಾರ್ಹ ತಂಪಾಗಿಸುವಿಕೆಗೆ ಕಾರಣವಾಗುತ್ತದೆ. ಅಂತಿಮವಾಗಿ ಹನಿಗಳು ಭೂಮಿಗೆ ಬೀಳುವಷ್ಟು ದೊಡ್ಡದಾಗಿ ಬೆಳೆಯುತ್ತವೆ. ಆದ್ದರಿಂದ ವಾಯು ಗಾಳಿಯನ್ನು ಒದಗಿಸುವ ಮಿಲಿಟರಿ ಟ್ಯಾಂಕರ್‌ಗಳ ವಿನ್ಯಾಸದಂತೆಯೇ 100ಕ್ಕೂ ಹೆಚ್ಚು ಭಾರವಾದ ವಾಯುಗಾಮಿ ಟ್ಯಾಂಕರ್‌ಗಳ ಫ್ಲೀಟ್‌ನಿಂದ ವಾರ್ಷಿಕವಾಗಿ ಹೊಸ ಏರೋಸಾಲ್‌ಗಳನ್ನು ಸಿಂಪಡಿಸಬೇಕಾಗುತ್ತದೆ. ಏರೋಸಾಲ್‌ಗಳಲ್ಲಿ ಇಂಧನ ತುಂಬುವುದಕ್ಕೆ ಪರ್ಯಾಯವಾಗಿ 20 ಕಿಲೋಮೀಟರ್ ಉದ್ದದ ಹೊಂದಿಕೊಳ್ಳುವ ಪೈಪ್ ಮೂಲಕ ಸಮುದ್ರದಿಂದ ಟ್ಯಾಂಕರ್‌ಗೆ ಜೋಡಿಸಲಾದ ದೈತ್ಯ ಬಲೂನ್‌ಗಳು ಕೆಲಸವನ್ನು ನಿರ್ವಹಿಸಬಲ್ಲವು. ಈ ಹಿಂದೆ ಸ್ಪೈಸ್ ಪ್ರಾಜೆಕ್ಟ್ ಪ್ರಸ್ತಾಪಿಸಿದಂತೆ ಇದು ಹವಾಮಾನ ಇಂಜಿನಿಯರಿಂಗ್‌ಗಾಗಿ ವಾಯುಮಂಡಲದ ಕಣಗಳ ಸಿಂಪಡಿಸುವಿಕೆಯನ್ನು ಪ್ರತಿನಿಧಿಸುತ್ತದೆ.

ಇಂತಹ ಯೋಜನೆಗಳು ಕೇವಲ ಕಾಗದಕ್ಕೆ ಮಾತ್ರ ಸೀಮಿತ ಎಂದು ಅನೇಕರು ಭಾವಿಸುವುದು ಸಹಜ. ಏಕೆಂದರೆ ಇಂತಹ ಯೋಜನೆಗಳಿಂದ ಉಪಯೋಗಕ್ಕಿಂತ ಅಪಾಯಗಳೇ ಹೆಚ್ಚು ಎಂಬುದು ಪರಿಸರ ಹಾಗೂ ಹವಾಮಾನ ತಜ್ಞರ ಅಭಿಮತ. ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಪ್ರಸಕ್ತ ಯೋಜನೆಯೂ ಕೆಲ ಅಪಾಯಗಳನ್ನು ಹೊಂದಿದೆ. ಜ್ವಾಲಾಮುಖಿ ಮೋಡಗಳನ್ನು ಅನುಕರಿಸಲು ಬಳಸುವ ಆರ್ಕ್ಟಿಕ್ ಮೇಲಿನ ವಾಯುಮಂಡಲದಲ್ಲಿ ಸಲ್ಫೇಟ್ ಏರೋಸಾಲ್‌ಗಳನ್ನು ಸಿಂಪಡಿಸುವುದರಿಂದ ಏಶ್ಯದಲ್ಲಿ ಮಾನ್ಸೂನ್‌ಗಳನ್ನು ಅಡ್ಡಿಪಡಿಸಬಹುದು ಮತ್ತು ವಿಶೇಷವಾಗಿ ಆಫ್ರಿಕಾದಲ್ಲಿ ಬರಗಾಲವನ್ನು ಹೆಚ್ಚಿಸಬಹುದು. ಸುಮಾರು ಎರಡು ಶತಕೋಟಿ ಜನರ ಆಹಾರ ಮತ್ತು ನೀರಿನ ಸುರಕ್ಷತೆಗೆ ಅಪಾಯ ತರಬಹುದು ಎಂದು ಲ್ಯಾಟಿನ್ ಅಮೆರಿಕದ ನಿರ್ದೇಶಕ ಸಿಲ್ವಿಯಾ ರಿಬೇರೊ ಹೇಳಿದ್ದಾರೆ.

ಏರೋಸಾಲ್ ಕಾರ್ಯಯೋಜನೆಯು ರೋಗದ ಒಂದು ಲಕ್ಷಣ ಇದ್ದಂತೆ. ಆದರೆ ಇದೇ ರೋಗವಲ್ಲ. ಅಲ್ಲದೆ ಈಗ ಕೈಗೆತ್ತಿಕೊಳ್ಳುತ್ತಿರುವ ಯೋಜನೆಯು ಸಂಪೂರ್ಣವಾಗಿ ಚಿಕಿತ್ಸೆಯೂ ಅಲ್ಲ. ಅಲ್ಲದೆ ಡಿಕಾರ್ಬೊನೈಸೇಶನ್‌ಗೆ ಪರ್ಯಾಯವೂ ಅಲ್ಲ ಎಂಬುದಂತೂ ಸ್ಪಷ್ಟ. ಜೊತೆಗೆ ಈ ಯೋಜನೆಯಲ್ಲಿ ಪ್ರಮುಖ ಭೌಗೋಳಿಕ ರಾಜಕೀಯ ಕಾಳಜಿಗಳೂ ಇವೆ. ಕೆಲವು ಸರಕಾರಗಳು ಜಾಗತಿಕ ಹವಾಮಾನವನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ನೋಡುತ್ತವೆ. ಅದಕ್ಕಾಗಿ ಬಿರುಗಾಳಿಗಳು, ಬರಗಳು ಮತ್ತು ತಮ್ಮ ಗಡಿಯೊಳಗೆ ಎಲ್ಲಾ ರೀತಿಯ ನೈಸರ್ಗಿಕ ವಿಪತ್ತುಗಳನ್ನು ಯುದ್ಧದ ಕ್ರಿಯೆಯಂತೆ ಪರಿಗಣಿಸಿವೆ. ಈ ಕಾರಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಜಿಯೋಇಂಜಿನಿಯರಿಂಗ್ ಅನ್ನು ಎಂದಿಗೂ ಅನುಮತಿಸಲಾಗುವುದಿಲ್ಲ. ಆದರೂ ಚೀನಾದಂತಹ ಕೆಲವು ದೇಶಗಳು ಹೆಚ್ಚು ವ್ಯಾಪಕವಾದ ಹವಾಮಾನ ಮಾರ್ಪಾಡು ಕಾರ್ಯಕ್ರಮಗಳನ್ನು ಹೊಂದಿವೆ. ಉಳಿದಂತೆ ಆಸ್ಟ್ರೇಲಿಯಾವು ಗ್ರೇಟ್ ಬ್ಯಾರಿಯರ್ ರೀಫ್‌ನಲ್ಲಿನ ನೀರನ್ನು ತಂಪಾಗಿಸಲು ಸಮುದ್ರದ ಮೋಡದ ಹೊಳಪನ್ನು ಪರೀಕ್ಷಿಸುತ್ತಿದೆ. ಅದು ಪ್ರಸಕ್ತ ಪ್ರಾಯೋಗಿಕ ಹಂತದಲ್ಲಿದೆ.

ಪ್ರಸಕ್ತ ಕಾರ್ಯಯೋಜನೆಯ ಸಂಶೋಧಕರ ಪ್ರಕಾರ, ಜಾಗತಿಕ ಮಾನವ ಜನಸಂಖ್ಯೆಯ ಶೇ. 1ಕ್ಕಿಂತ ಕಡಿಮೆ ವಾಸಿಸುವ ಧ್ರುವಗಳಿಗೆ ಹವಾಮಾನ ಬದಲಾವಣೆ ಪರಿಣಾಮಗಳನ್ನು ಸೀಮಿತಗೊಳಿಸಲು ಅವರ ಉದ್ದೇಶಿತ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆಯಂತೆ. ಅದೇನೇ ಇದ್ದರೂ, ಜಾಗತಿಕ ಥರ್ಮೋಸ್ಟಾಟ್‌ನ ಯಾವುದೇ ಉದ್ದೇಶಪೂರ್ವಕ ತಿರುವು ಮಾನವೀಯತೆಯಿರುವ ಎಲ್ಲರಿಗೂ ಸಾಮಾನ್ಯ ಆಸಕ್ತಿಯಾಗಿರುತ್ತದೆ. ಹಿಮನದಿಗಳು ಮತ್ತು ಮಂಜುಗಡ್ಡೆಗಳ ಕರಗುವಿಕೆಯನ್ನು ತಡೆಗಟ್ಟುವ ಮೂಲಕ ಭೂ ಇಂಜಿನಿಯರಿಂಗ್ ಸಮುದ್ರ ಮಟ್ಟಗಳ ಏರಿಕೆಯನ್ನು ತಡೆಯಬಹುದು. ಈಗಾಗಲೇ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ನೂರಾರು ಮಿಲಿಯನ್ ಜನರಿಗೆ ಸಮುದ್ರ ಮಟ್ಟ ಹೆಚ್ಚಳದ ಭೀತಿ ಶುರುವಾಗಿದೆ. ಯೋಜನೆಯ ಪ್ರಕಾರ, ಮೈಕ್ರೋಸ್ಕೋಪಿಕ್ ಸಲ್ಫರ್ ಡೈಆಕ್ಸೈಡ್ ಕಣಗಳು ಭೂಗ್ರಹದ ಧ್ರುವಗಳ ಮೇಲೆ 43,000 ಅಡಿ ಎತ್ತರದಲ್ಲಿ ಹಾರುವ 125 ಗಾಳಿಯಿಂದ ಗಾಳಿಗೆ ಇಂಧನ ತುಂಬುವ ಟ್ಯಾಂಕರ್‌ಗಳಿಂದ ಬಿಡುಗಡೆಯಾಗುತ್ತದೆ. ಈ ಕಣಗಳು ನಂತರ ಕೆಳಗಿನ ಮೇಲ್ಮೈಯಿಂದ ಸೂರ್ಯನ ಬೆಳಕನ್ನು ಸ್ವಲ್ಪ ಪ್ರಮಾಣದಲ್ಲಿ ನಿರ್ಬಂಧಿಸುತ್ತವೆ ಮತ್ತು ಧ್ರುವ ಪ್ರದೇಶಗಳನ್ನು ಸೂರ್ಯನ ಶಾಖದಿಂದ ರಕ್ಷಿಸುತ್ತವೆ. ಅಧ್ಯಯನದ ಜವಾಬ್ದಾರಿ ವಹಿಸಿಕೊಂಡ ಸ್ಮಿತ್ ಅವರ ಪ್ರಕಾರ, ವರ್ಷದ ಸರಿಯಾದ ಸಮಯದಲ್ಲಿ ಬಿಡುಗಡೆಯಾದ ಕೇವಲ 13 ಟನ್ ಕಣಗಳು ಧ್ರುವ ಪ್ರದೇಶಗಳನ್ನು 3.6 ಡಿಗ್ರಿ ಫ್ಯಾರನ್‌ಹೀಟ್‌ನಿಂದ ತಂಪಾಗಿಸಬಲ್ಲವು.

ಹೊಸದಾಗಿ ವಿನ್ಯಾಸಗೊಳಿಸಲಾದ ಎತ್ತರದ ಟ್ಯಾಂಕರ್‌ಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಸರಿಸುಮಾರು 125 ಟ್ಯಾಂಕರ್‌ಗಳ ಸಮೂಹವು 60 ಡಿಗ್ರಿ ಉತ್ತರ ಹಾಗೂ ದಕ್ಷಿಣ ಧ್ರುವೀಯ ಪ್ರದೇಶಗಳನ್ನು ವರ್ಷಕ್ಕೆ 2 ಡಿಗ್ರಿ ಸೆಲ್ಸಿಯಸ್‌ನಷ್ಟು ತಂಪಾಗಿರಿಸುತ್ತವೆ. ಅಲ್ಲದೆ ಇದರ ವಾರ್ಷಿಕ ವೆಚ್ಚವನ್ನು 11 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಇಡೀ ಗ್ರಹವನ್ನು ಅದೇ 2°C ಪ್ರಮಾಣದಲ್ಲಿ ತಂಪಾಗಿಸುವ ವೆಚ್ಚದ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಮತ್ತು ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ತಲುಪುವ ವೆಚ್ಚದ ಒಂದು ಸಣ್ಣ ಭಾಗವಾಗಿದೆ. ಅಂದರೆ ಚಿಕಿತ್ಸೆಗಿಂತ ಗಾಯದ ಮೇಲೆ ಹಾಕಿದ ಬ್ಯಾಂಡೇಜ್ ದೊಡ್ಡದು ಎನ್ನುವಂತಾಗುತ್ತದೆ. ವಾಯುಮಂಡಲಕ್ಕೆ ಏರೋಸಾಲ್ ಚುಚ್ಚುಮದ್ದಿನ ಸಂಶೋಧನೆಯು ಇನ್ನೂ ಶೈಶವಾವಸ್ಥೆಯಲ್ಲಿದೆ. ಕೆಲವು ವಿಜ್ಞಾನಿಗಳು ಈ ಕಲ್ಪನೆಯು ಜಗತ್ತಿನ ಮೇಲೆ ಅನಪೇಕ್ಷಿತ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ನಂಬುತ್ತಾರೆ. ಏನೇ ಆಗಲಿ ಇಂತಹ ಪ್ರಯತ್ನಗಳನ್ನು ಪ್ರಮಾಣೀಕರಿಸಿದ ನಂತರ ಜಾಗತಿಕ ಬಳಕೆಗೆ ಅವಕಾಶ ನೀಡಬೇಕು. ಇಂತಹ ಹಲವರು ಪ್ರಯೋಗಗಳಿಂದ ಪರಿಸರ ಎಂಬುದು ಕಸದ ತೊಟ್ಟಿಯಂತಾಗಿದೆ. ಅದನ್ನು ಸ್ವಚ್ಛಗೊಳಿಬೇಕೇ ವಿನಹ ಮತ್ತಷ್ಟು ಕಸ ಸೇರಿಸುವಂತಾಗಬಾರದು. ಅಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News