ಬಡತನ, ನಿರುದ್ಯೋಗ, ಅಸಮಾನತೆ ಕುರಿತು ಆರೆಸ್ಸೆಸ್ ಪ್ರ.ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಎಚ್ಚರಿಕೆ

Update: 2022-10-02 18:24 GMT
PHOTO: PTI

ಹೊಸದಿಲ್ಲಿ,ಅ.2: ದೇಶದಲ್ಲಿಯ ಬಡತನ,ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಅಸಮಾನತೆ ಸಮಸ್ಯೆಗಳ ಕುರಿತು ರವಿವಾರ ಎಚ್ಚರಿಕೆ ನೀಡಿದ ಆರೆಸ್ಸೆಸ್,ಉದ್ಯೋಗಾಕಾಂಕ್ಷಿಗಳು ಉದ್ಯೋಗದಾತರಾಗಲು ಉದ್ಯಮಶೀಲತೆಗೆ ಸದೃಢವಾದ ವಾತಾವರಣ ಸೃಷ್ಟಿಗಾಗಿ ಪ್ರತಿಪಾದಿಸಿದೆ.

ಸಂಘ ಪರಿವಾರದ ಸ್ವದೇಶಿ ಜಾಗರಣ ಮಂಚ್ ತನ್ನ ಸ್ವಾವಲಂಬಿ ಭಾರತ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ವೆಬಿನಾರ್ನಲ್ಲಿ ಮಾತನಾಡಿದ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, ‘ದೇಶದಲ್ಲಿಯ ಬಡತನ ನಮ್ಮೆದುರು ರಾಕ್ಷಸನಂತೆ ನಿಂತಿದೆ. ನಾವು ಈ ರಾಕ್ಷಸನನ್ನು ಸಂಹರಿಸುವುದು ಮುಖ್ಯವಾಗಿದೆ. 20 ಕೋ.ಜನರು ಈಗಲೂ ಬಡತನ ರೇಖೆಗಿಂತ ಕೆಳಗಿದ್ದಾರೆ ಎನ್ನುವುದು ನಮಗೆ ಅತ್ಯಂತ ದುಃಖವನ್ನುಂಟು ಮಾಡಬೇಕು. 23 ಕೋ.ಜನರು ದಿನಕ್ಕೆ 375 ರೂ.ಗೂ.ಕಡಿಮೆ ಆದಾಯವನ್ನು ಹೊಂದಿದ್ದಾರೆ. ದೇಶದಲ್ಲಿ ನಾಲ್ಕು ಕೋ.ನಿರುದ್ಯೋಗಿಗಳಿದ್ದಾರೆ. ನಮ್ಮಲ್ಲಿ ಶೇ.7.6ರ ನಿರುದ್ಯೋಗ ದರವಿದೆ ಎಂದು ಕಾರ್ಮಿಕ ಬಲ ಸಮೀಕ್ಷೆಯು ಹೇಳಿದೆ ’ಎಂದರು.

ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯು ಇನ್ನೊಂದು ಪ್ರಮುಖ ವಿಷಯವಾಗಿದೆ ಎಂದ ಅವರು ,ಭಾರತವು ವಿಶ್ವದ ಆರು ಅಗ್ರ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಒಂದು ಅಂಕಿಅಂಶ ಹೇಳುತ್ತದೆ. ಆದರೆ ಇದು ಒಳ್ಳೆಯ ಸ್ಥಿತಿಯೇ? ಭಾರತದ ಜನಸಂಖ್ಯೆಯ ಅಗ್ರ ಶೇ.1ರಷ್ಟು ಜನರು ದೇಶದ ಆದಾಯದಲ್ಲಿ ಐದನೇ ಒಂದು ಭಾಗ(ಶೇ.20)ದಷ್ಟು ಪಾಲನ್ನು ಹೊಂದಿದ್ದಾರೆ. ಇದೇ ವೇಳೆ,ದೇಶದ ಶೇ.50ರಷ್ಟು ಜನತೆ ದೇಶದ ಆದಾಯದಲ್ಲಿ ಕೇವಲ ಶೇ.13ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಹೇಳಿದರು.

ಭಾರತ ಜೋಡೋ ಯಾತ್ರೆಯನ್ನು ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಜನತೆಯೊಂದಿಗಿನ ತನ್ನ ಸಂವಾದಗಳಲ್ಲಿ ನಿರುದ್ಯೋಗ,ಹಣದುಬ್ಬರ ಮತ್ತು ಆರ್ಥಿಕ ಅಸಮಾನತೆ ಸಮಸ್ಯೆಗಳನ್ನು ಎತ್ತುತ್ತಿರುವ ಸಂದರ್ಭದಲ್ಲೇ ಹೊಸಬಾಳೆಯವರ ಈ ಹೇಳಿಕೆ ಹೊರಬಿದ್ದಿದೆ.

ಬಡತನ ಮತ್ತು ಅಭಿವೃದ್ಧಿ ಕುರಿತು ವಿಶ್ವಸಂಸ್ಥೆಯ ಅವಲೋಕನಗಳನ್ನು ಉಲ್ಲೇಖಿಸಿದ ಹೊಸಬಾಳೆ,ದೇಶದ ಬಹು ದೊಡ್ಡ ಭಾಗ ಈಗಲೂ ಶುದ್ಧ ನೀರು ಮತ್ತು ಪೌಷ್ಟಿಕ ಆಹಾರದಿಂದ ವಂಚಿತವಾಗಿದೆ. ಅಂತರ್ಕಲಹ ಮತ್ತು ಶಿಕ್ಷಣದ ಕಳಪೆ ಗುಣಮಟ್ಟ ಇವೂ ಬಡತನಕ್ಕೆ ಕಾರಣವಾಗಿವೆ. ಇದಕ್ಕಾಗಿಯೇ ನೂತನ ಶಿಕ್ಷಣ ನೀತಿಯನ್ನು ತರಲಾಗಿದೆ. ಹವಾಮಾನ ಬದಲಾವಣೆಯೂ ಬಡತನಕ್ಕೆ ಕಾರಣವಾಗಿದೆ. ಕೆಲವಡೆಗಳಲ್ಲಿ ಸರಕಾರದ ಅಸಮರ್ಥತೆಯೂ ಬಡತನಕ್ಕೆ ಕಾರಣವಾಗಿದೆ ಎಂದರು.

ನಗರ ಪ್ರದೇಶಗಳಲ್ಲಿ ಮಾತ್ರ ಉದ್ಯೋಗಾವಕಾಶಗಳಿವೆ ಎಂಬ ಕಲ್ಪನೆಯು ಗ್ರಾಮಗಳನ್ನು ಖಾಲಿಯಾಗಿಸಿದೆ ಮತ್ತು ನಗರ ಜೀವನವನ್ನು ನರಕವಾಗಿಸಿದೆ ಎಂದ ಅವರು,‘ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಮತ್ತು ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಂಡು ಉದ್ಯೋಗಗಳನ್ನು ಸೃಷ್ಟಿಸುವುದು ಸಾಧ್ಯವಿದೆ ಎನ್ನುವುದನ್ನು ನಾವು ಕೋವಿಡ್ ಕಾಲದಲ್ಲಿ ಕಲಿತುಕೊಂಡಿದ್ದೇವೆ. ಇದಕ್ಕಾಗಿಯೇ ಸ್ವಾವಲಂಬಿ ಭಾರತ ಅಭಿಯಾನವನ್ನು ಆರಂಭಿಸಲಾಗಿದೆ. ನಮಗೆ ಅಖಿಲ ಭಾರತ ಮಟ್ಟದ ಯೋಜನೆಗಳು ಮಾತ್ರವಲ್ಲ,ಸ್ಥಳೀಯ ಯೋಜನೆಗಳೂ ಅಗತ್ಯವಾಗಿವೆ. ಅದನ್ನು ಕೃಷಿ,ಕೌಶಲ್ಯಾಭಿವೃದ್ಧಿ, ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳಲ್ಲಿ ಮಾಡಬಹುದು. ನಾವು ಗುಡಿ ಕೈಗಾರಿಕೆಯನ್ನು ಪುನರುಜ್ಜೀವನಗೊಳಿಸಬಹುದು. ಇದೇ ರೀತಿ ಆಯುರ್ವೇದ ಕ್ಷೇತ್ರದಲ್ಲಿ ಹಲವಾರು ಆಯುರ್ವೇದ ಔಷಧಿಗಳನ್ನು ಸ್ಥಳೀಯ ಮಟ್ಟದಲ್ಲಿ ತಯಾರಿಸಬಹುದು. ಸ್ವ ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲಿ ಆಸಕ್ತ ಜನರನ್ನು ನಾವು ಅನ್ವೇಷಿಸುವ ಅಗತ್ಯವಿದೆ ’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News