ನಿರಪರಾಧಿಗಳೆಂದು ಘೋಷಿಸುವಷ್ಟರಲ್ಲಿ ವರ್ಷಗಟ್ಟಲೆ ಸೆರೆವಾಸ ಅನುಭವಿಸಿದ್ದ ಹಲವು ಯುಎಪಿಎ ಪ್ರಕರಣದ ಆರೋಪಿಗಳು

Update: 2022-10-03 13:33 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದಲ್ಲಿ 2015 ಹಾಗೂ 2020 ರ ನಡುವೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ(UAPA) 5,924 ಪ್ರಕರಣಗಳಲ್ಲಿ ಒಟ್ಟು 8,371 ಮಂದಿಯನ್ನು ಬಂಧಿಸಲಾಗಿತ್ತಾದರೂ ಈ ಅವಧಿಯಲ್ಲಿ ದೋಷಿಗಳೆಂದು ಘೋಷಿತರಾದವರ ಸಂಖ್ಯೆ ಕೇವಲ 235 ಆಗಿದೆ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ವರದಿಯೊಂದು ಹೇಳಿದೆ. ಈ ವರದಿ ಸಿದ್ಧಪಡಿಸಲು ಎನ್‍ಸಿಆರ್‍ಬಿ(NCRB) ಮತ್ತು ಎನ್‍ಐಎ(NIA) ವೆಬ್‍ತಾಣಗಳಲ್ಲಿರುವ ಮಾಹಿತಿಯನ್ನು ಬಳಸಲಾಗಿದೆ. ಯುಎಪಿಎ ಅಡಿ ಬಂಧಿತರಾಗಿ ನಂತರ ದೋಷಮುಕ್ತಗೊಂಡ ಹಲವರು ಅದಾಗಲೇ ವರ್ಷಗಳ ಕಾಲ ಸೆರೆವಾಸ ಅನುಭವಿಸುವಂತಾಗಿತ್ತು ಎಂಬುದನ್ನೂ ವರದಿ ಉಲ್ಲೇಖಿಸಿದೆ ಎಂದು thenewsminute.com ವರದಿ ಮಾಡಿದೆ.

ಲಭ್ಯ ಅಂಕಿಅಂಶಗಳನ್ನು ಆಧರಿಸಿ ವರದಿಯಲ್ಲಿ ತಿಳಿಸಿದಂತೆ 2018 ರಲ್ಲಿ ಶೇ16.32 ಮಂದಿ ಆರೋಪಿಗಳಿಗೆ ಜಾಮೀನು ದೊರಕಿದ್ದರೆ 2019 ರಲ್ಲಿ ಶೇ 32.08 ಮಂದಿಗೆ  ಹಾಗೂ 2020 ರಲ್ಲಿ ಶೇ 16.88 ಮಂದಿಗೆ ಜಾಮೀನು ದೊರಕಿದೆ.

ಎನ್‍ಐಎ ಅನ್ನು ರದ್ದುಗೊಳಿಸಬೇಕು ಹಾಗೂ ಎಲ್ಲಾ ರಾಜಕೀಯ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕೆಂದೂ 'ಯುಎಪಿಎ: ಕ್ರಿಮಿನಲೈಸಿಂಗ್ ಡಿಸ್ಸೆಂಟ್ ಎಂಡ್ ಸ್ಟೇಟ್ ಟೆರರ್: ಸ್ಟಡಿ ಆಪ್ ಯುಎಪಿಎ ಅಬ್ಯೂಸ್ ಇನ್ ಇಂಡಿಯಾ, 2009-2022,' ಎಂಬ ಹೆಸರಿನ ಈ  ವರದಿಯಲ್ಲಿ ಆಗ್ರಹಿಸಲಾಗಿದೆ.

ದೇಶಾದ್ಯಂತ ಗರಿಷ್ಠ ಯುಎಪಿಎ ಪ್ರಕರಣಗಳನ್ನು ಎನ್‍ಐಎ ಕೇರಳದಲ್ಲಿ (27), ಕರ್ನಾಟಕದಲ್ಲಿ (13), ತಮಿಳುನಾಡು (13), ಆಂಧ್ರ ಪ್ರದೇಶ (12) ದಾಖಲಿಸಿತ್ತು. ಎನ್‍ಐಎ ಬಳಿ ಇರುವ ಒಟ್ಟು 359 ಯುಎಪಿಎ ಪ್ರಕರಣಗಳಲ್ಲಿ 69 ಪ್ರಕರಣಗಳನ್ನು ಯುಪಿಎ ಆಡಳಿತಾವಧಿಯಲ್ಲಿ (2009 ರಿಂದ ಮೇ 2014) ಹಾಗೂ 288 ಪ್ರಕರಣಗಳನ್ನು (ಸುಮಾರು ಶೇ. 80) ಪ್ರಸ್ತುತ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ದಾಖಲಿಸಲಾಗಿದೆ.

ಈ 357 ಪ್ರಕರಣಗಳಲ್ಲಿ ಶೇ. 12 ರಷ್ಟು ಅಥವಾ 41 ಪ್ರಕರಣಗಳನ್ನು ಎನ್‍ಐಎ ಸ್ವಯಪ್ರೇರಣೆಯಿಂದ ದಾಖಲಿಸಲಾಗಿದ್ದರೆ ಶೇ. 88 ಪ್ರಕರಣಗಳನ್ನು ಇತರ ತನಿಖಾ ಏಜನ್ಸಿಗಳು ಎನ್‍ಐಎಗೆ ಹಸ್ತಾಂತರಿಸಿದ್ದವು. ಇವುಗಳಲ್ಲಿ ಭೀಮಾ ಕೋರೆಗಾಂವ್ ಪ್ರಕರಣ ಕೂಡ ಸೇರಿವೆ.

ಅಷ್ಟೇ ಅಲ್ಲದೆ ಎನ್‍ಐಎ ತನಿಖೆ ನಡೆಸುತ್ತಿರುವ 357 ಪ್ರಕರಣಗಳಲ್ಲಿ 238 ಪ್ರಕರಣಗಳಿಗೆ ಸಂಬಂಧಿಸಿದಂತೆ ಯುಎಪಿಎ  ಇದರ ಸೆಕ್ಷನ್ 18 (ಷಡ್ಯಂತ್ರ) ಅನ್ವಯ ಪ್ರಕರಣ ದಾಖಲಿಸಲಾಗಿದೆ, ಉಳಿದಂತೆ ಸೆಕ್ಷನ್ 20 (ಉಗ್ರ ನಂಟು), ಸೆಕ್ಷನ್ 16 (ಉಗ್ರ ಕೃತ್ಯ) ಅಡಿಯಲ್ಲಿ ಹೆಚ್ಚಿನ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News