ಜಮ್ಮುಕಾಶ್ಮೀರ: 2 ಪ್ರತ್ಯೇಕ ಗುಂಡಿನ ಕಾಳಗ; ನಾಲ್ವರು ಶಂಕಿತ ಉಗ್ರರು ಸಾವು

Update: 2022-10-05 17:56 GMT

ಹೊಸದಿಲ್ಲಿ, ಅ. 5: ಜಮ್ಮು ಹಾಗೂ ಕಾಶ್ಮೀರದಲ್ಲಿ ಮಂಗಳವಾರ ನಡೆದ ಎರಡು ಪ್ರತ್ಯೇಕ ಗುಂಡಿನ ಕಾಳಗದಲ್ಲಿ ನಾಲ್ವರು ಶಂಕಿತ ಉಗ್ರರು ಮೃತಪಟ್ಟಿದ್ದಾರೆ. 

ಶೋಪಿಯಾನದ ದ್ರಾಚ್ ಪ್ರದೇಶದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮೂವರು ಶಂಕಿತ ಉಗ್ರರು ಮೃತಪಟ್ಟಿದ್ದಾರೆ. ಮೂಲು ಪ್ರದೇಶದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಶಂಕಿತ ಉಗ್ರ ಮೃತಪಟ್ಟಿದ್ದಾನೆ ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. 

ದ್ರಾಚ್ ಪ್ರದೇಶದಲ್ಲಿ ಮತಪಟ್ಟ ಉಗ್ರರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಸೆ ಮುಹಮ್ಮದ್‌ಗೆ ಸೇರಿದವರು. ಅವರಲ್ಲಿ ಇಬ್ಬರನ್ನು ಹನಾನ್ ಬಿನ್ ಯಾಕೂಬ್ ಹಾಗೂ ಜೆಮ್ಶದ್ ಎಂದು ಗುರುತಿಸಲಾಗಿದೆ ಎಂದು ಎಡಿಜಿಪಿ ವಿಜಯ ಕುಮಾರ್ ಅವರು ಪ್ರತಿಪಾದಿಸಿದ್ದಾರೆ. 
ಪೊಲೀಸ್ ಅಧಿಕಾರಿ ಜಾವಿದ್ ಅಹ್ಮದ್ ದಾರ್ ಅವರನ್ನು ರವಿವಾರ ಹಾಗೂ ಕಳೆದ ಡಿಸೆಂಬರ್‌ನಲ್ಲಿ ಪಶ್ಚಿಮಬಂಗಾಳದ ವಲಸೆ ಕಾರ್ಮಿಕನನ್ನು   ಹತ್ಯೆಗೈದ ಘಟನೆಯಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ವಿಜಯ ಕುಮಾರ್ ತಿಳಿಸಿದ್ದಾರೆ. 

ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಪಿಂಗ್ಲಾನಾ ಗ್ರಾಮದಲ್ಲಿರುವ ತಪಾಸಣಾ ಠಾಣೆಯ ಮೇಲೆ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ದಾರ್ ಅವರು ಮೃತಪಟ್ಟಿದ್ದರು. ಸಿಆರ್‌ಪಿಎಫ್‌ನ ಓರ್ವ ಅಧಿಕಾರಿ ಗಾಯಗೊಂಡಿದ್ದರು. 

ಈ ನಡುವೆ ಮೂಲು ಪ್ರದೇಶದಲ್ಲಿ ಗುಂಡಿನ ಕಾಳಗದಲ್ಲಿ ಮೃತಪಟ್ಟ ಶಂಕಿತ ಉಗ್ರನನ್ನು ಲಷ್ಕರೆ ತಯ್ಯಿಬಕ್ಕೆ ಸೇರಿದ ಸ್ಥಳೀಯ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News