ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿನ ನಂತರ 4 ಕೆಮ್ಮಿನ ಸಿರಪ್ ಕುರಿತು ತನಿಖೆ ಆರಂಭಿಸಿದ ಭಾರತ ಸರಕಾರ

Update: 2022-10-06 15:33 GMT
ಸಾಂದರ್ಭಿಕ ಚಿತ್ರ (Photo: theweek.in)

  ಹೊಸದಿಲ್ಲಿ,ಅ.6: ಹರ್ಯಾಣದ ಔಷಧಿ ಕಂಪನಿಯೊಂದು ತಯಾರಿಸಿರುವ ನಾಲ್ಕು ಕೆಮ್ಮಿನ ಸಿರಪ್ಗಳಿಗೂ ಗ್ಯಾಂಬಿಯಾದಲ್ಲಿ ಸಂಭವಿಸಿರುವ 66 ಮಕ್ಕಳ ಸಾವಿಗೂ ಸಂಬಂಧವಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಈ ಔಷಧಿಗಳ ಕುರಿತು ತನಿಖೆಯನ್ನು ಆರಂಭಿಸಿದೆ. ಡಬ್ಲುಎಚ್ಒ ಸೆ.29ರಂದು ಈ ಕೆಮ್ಮಿನ ಸಿರಪ್ಗಳ ಕುರಿತು ಭಾರತೀಯ ಔಷಧಿಗಳ ಮಹಾನಿಯಂತ್ರಕ (ಡಿಸಿಜಿಐ)ರಿಗೆ ಎಚ್ಚರಿಕೆಯನ್ನು ನೀಡಿದ್ದು,ತಕ್ಷಣ ಹರ್ಯಾಣ ನಿಯಂತ್ರಕ ಪ್ರಾಧಿಕಾರದ ಜೊತೆ ಚರ್ಚಿಸಿ ವಿಸ್ತ್ರತ ತನಿಖೆಯನ್ನು ಆರಂಭಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿನ ಉನ್ನತ ಮೂಲಗಳು ತಿಳಿಸಿವೆ.

ಹರ್ಯಾಣದ ಸೋನೆಪತ್ನಲ್ಲಿರುವ ಮೇಡನ್ ಫಾರ್ಮಾಸ್ಯೂಟಿಕಲ್ ಲಿ.ಈ ಕೆಮ್ಮಿನ ಸಿರಪ್ಗಳನ್ನು ತಯಾರಿಸಿದ್ದು,ಸದ್ಯಕ್ಕೆ ಲಭ್ಯ ಮಾಹಿತಿಗಳಂತೆ ಕಂಪನಿಯು ಗ್ಯಾಂಬಿಯಾಕ್ಕೆ ಮಾತ್ರ ಅವುಗಳನ್ನು ರಫ್ತು ಮಾಡಿರುವಂತೆ ಕಂಡುಬಂದಿದೆ ಎಂದು ಈ ಮೂಲಗಳು ತಿಳಿಸಿದವು. ಆರೋಪಗಳಿಗೆ ಕಂಪನಿಯು ಇನ್ನೂ ಪ್ರತಿಕ್ರಿಯಿಸಿಲ್ಲ. ದಿಲ್ಲಿಯ ಪೀತಮ್ಪುರದಲ್ಲಿರುವ ಕಂಪನಿಯ ಆಡಳಿತ ಕಚೇರಿಯು ಗುರುವಾರ ಬಾಗಿಲು ಮುಚ್ಚಿಕೊಂಡಿತ್ತು.

ಈ ಸಿರಪ್ಗಳು ಗ್ಯಾಂಬಿಯಾದ ಹೊರಗೂ ವಿತರಣೆಯಾಗಿರಬಹುದು ಮತ್ತು ಜಾಗತಿಕ ಮಾರುಕಟ್ಟೆಯನ್ನು ತಲುಪಿರುವ ಸಾಧ್ಯತೆಯಿದೆ ಎಂದು ಡಬ್ಲುಎಚ್ಒ ಎಚ್ಚರಿಕೆ ನೀಡಿದೆ.

ಮಕ್ಕಳಲ್ಲಿ ಮೂತ್ರಪಿಂಡಗಳಿಗೆ ತೀವ್ರ ಹಾನಿ ಹಾಗೂ 66 ಸಾವುಗಳಿಗೂ ಈ ನಾಲ್ಕು ಶೀತ ಮತ್ತು ಕೆಮ್ಮಿನ ಸಿರಪ್ಗಳಿಗೂ ಸಂಬಂಧವಿರುವ ಹೆಚ್ಚಿನ ಸಾಧ್ಯತೆಯಿದೆ ಎಂದು ಡಬ್ಲುಎಚ್ಒ ಮುಖ್ಯಸ್ಥ ಟೆಡ್ರೋಸ್ ಅಧಾನಮ್ ೆಬ್ರೆಯೆಸಸ್ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದರು.

ಮಕ್ಕಳ ಸಾವುಗಳು ಯಾವಾಗ ಸಂಭವಿಸಿದ್ದವು ಎನ್ನುವ ಬಗ್ಗೆ ವಿವರಗಳನ್ನು ಡಬ್ಲುಎಚ್ಒ ಒದಗಿಸಿಲ್ಲ. ಉತ್ಪನ್ನಗಳ ತಯಾರಕರನ್ನು ದೃಢೀಕರಿಸಿ ಲೇಬಲ್ಗಳ ಚಿತ್ರಗಳನ್ನು ಅದು ಇನ್ನೂ ಹಂಚಿಕೊಂಡಿಲ್ಲ ಎಂದು ಮೂಲಗಳು ತಿಳಿಸಿದವು.

ನಾಲ್ಕು ಕೆಮ್ಮಿನ ಸಿರಪ್ಗಳ ಸ್ಯಾಂಪಲ್ಗಳನ್ನು ಕೇಂದ್ರ ಮತ್ತು ಪ್ರಾದೇಶಿಕ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು,ಎರಡು ದಿನಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಶಿಷ್ಟಾಚಾರದಂತೆ ಭಾರತದಿಂದ ರಫ್ತಾಗುವ ಯಾವುದೇ ಔಷಧಿಯನ್ನು ಅದನ್ನು ಸ್ವೀಕರಿಸುವ ದೇಶವು ಪರೀಕ್ಷೆಗೊಳಪಡಿಸುತ್ತದೆ. ಗ್ಯಾಂಬಿಯಾದಲ್ಲಿ ಪರೀಕ್ಷೆಯ ಸಂದರ್ಭದಲ್ಲಿ ಔಷಧಿಯು ದೋಷಯುಕ್ತವಾಗಿದೆ ಎನ್ನುವದು ಹೇಗೆ ಪತ್ತೆಯಾಗಿರಲಿಲ್ಲ ಎನ್ನುವುದು ಪ್ರಶ್ನೆಯಾಗಿದೆ. ಅವುಗಳನ್ನು ಪರೀಕ್ಷೆಗೊಳಪಡಿಸದೆ ಗ್ಯಾಂಬಿಯಾದಲ್ಲಿ ಬಳಸಲಾಗಿತ್ತೇ ಎನ್ನುವ ಬಗ್ಗೆ ಡಬ್ಲುಎಚ್ಒ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿದವು.

ಡಬ್ಲುಎಚ್ಒ ಎಚ್ಚರಿಕೆಯಂತೆ ಪ್ರೊಮೆಥಾಝೈನ್ ಓರಲ್ ಸೊಲ್ಯೂಷನ್,ಕೊಫೆಕ್ಸ್ಮಾಲಿನ್ ಬೇಬಿ ಕಾಫ್ ಸಿರಪ್,ಮೆಕಾಫ್ ಬೇಬಿ ಕಾಫ್ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಇವು ಅಪಾಯಕಾರಿಯಾಗಿರಬಹುದಾದ ನಾಲ್ಕು ಉತ್ಪನ್ನಗಳಾಗಿವೆ.

  ಈ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ತಯಾರಕರು ಈವರೆಗೆ ಯಾವುದೇ ಗ್ಯಾರಂಟಿಯನ್ನು ನೀಡಿಲ್ಲ ಎಂದು ಎಚ್ಚರಿಕೆಯಲ್ಲಿ ಹೇಳಿರುವ ಡಬ್ಲುಎಚ್ಒ,ನಾಲ್ಕೂ ಉತ್ಪನ್ನಗಳ ಸ್ಯಾಂಪಲ್ಗಳ ಪ್ರಯೋಗಾಲಯ ವಿಶ್ಲೇಷಣೆಯು ಅವುಗಳು ಅಧಿಕ ಪ್ರಮಾಣದಲ್ಲಿ ಡೈಎಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ನ್ನು ಒಳಗೊಂಡಿರುವುದನ್ನು ದೃಢಪಡಿಸಿದೆ ಎಂದು ತಿಳಿಸಿದೆ.

ಈ ರಾಸಾಯನಿಕಗಳು ಮನುಷ್ಯರಿಗೆ ಮಾರಕವಾಗಿದ್ದು,ಸಾವಿಗೂ ಕಾರಣವಾಗಬಲ್ಲವು. ಹೊಟ್ಟೆನೋವು,ವಾಂತಿ,ಬೇಧಿ,ಮೂತ್ರ ವಿಸರ್ಜನೆ ಸಮಸ್ಯೆ,ತಲೆನೋವು,ಮಾನಸಿಕ ತುಮುಲ ಮತ್ತು ಸಾವಿಗೆ ಕಾರಣವಾಗಬಹುದಾದ ತೀವ್ರ ಮೂತ್ರಪಿಂಡ ಹಾನಿ ಇವು ಈ ರಾಸಾಯನಿಕಗಳ ವಿಷಕಾರಿ ಪರಿಣಾಮಗಳಲ್ಲಿ ಸೇರಿವೆ ಎಂದು ಡಬ್ಲುಎಚ್ಒ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News