ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ರೋಡ್ ಮ್ಯಾಪ್ ಕುರಿತ ಚರ್ಚೆ: ಅರುಣ್ ಸಿಂಗ್

Update: 2022-10-06 15:25 GMT

ಬೆಂಗಳೂರು, ಅ. 6: ‘ಮುಂಬರಲಿರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವ ಬಗ್ಗೆ ನಾಳೆ(ಅ.7) ನಡೆಯುವ ರಾಜ್ಯ ಕಾರ್ಯಕಾರಣಿಯಲ್ಲಿ ಚರ್ಚೆ ಮಾಡಲಿದ್ದೇವೆ. ಗೆಲುವಿಗೆ ನೀಲನಕ್ಷೆ (ರೋಡ್ ಮ್ಯಾಪ್) ತಯಾರಿಸಲಿದ್ದೇವೆ' ಎಂದು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಭ್ರಷ್ಟರ ಪಕ್ಷ, ಷಡ್ಯಂತ್ರಗಳ ಪಕ್ಷ. ಶಾಸಕ ಯತ್ನಾಳ್ ಇದೇ ಮೊದಲಬಾರಿ ಹೇಳಿಕೆ ನೀಡಿಲ್ಲ. ಯತ್ನಾಳ್ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವರ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

‘ರಾಹುಲ್ ಗಾಂಧಿ ಯಾತ್ರೆ ನಡೆಯುತ್ತಿದೆ. ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಆರೋಪ ಮಾಡೋದು ಅವರ ಕೆಲಸ. ಕೇವಲ ಆರೋಪ ಮಾಡಲು ಇಡೀ ಯಾತ್ರೆ ಮಾಡುತ್ತಿದ್ದಾರೆ. ಆದರೂ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ.ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಧನಸಹಾಯ ಮಾಡಿದ್ದಾರೆ. ಬಡವರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿ ಬಡವರ, ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸಮಗ್ರ ಅಭಿವೃದ್ಧಿಯ ಚಿಂತನೆಯೊಂದಿಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಸಿಎಂ ಅವರು ರಾಜಕೀಯ ಇತಿಹಾಸದಲ್ಲಿ ಅನೇಕ ಸಚಿವ ಸ್ಥಾನ ನಿಭಾಯಿಸಿದ್ದಾರೆ. ಆದರೆ, ಎಂದೂ ಅವರ ಮೇಲೆ ಆರೋಪ ಬಂದಿಲ್ಲ. ಅವರ ಮೇಲೆ ಆರೋಪ ಮಾಡೋದು ಸರಿಯಲ್ಲ. ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ನಿರಂತರವಾಗಿ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ. ಸ್ಟಾರ್ಟಪ್‍ಗಳಿಗೆ ಉತ್ತೇಜನ ಕೊಡಲಾಗುತ್ತಿದೆ. ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಅವರು ತಿಳಿಸಿದರು.

‘ರಾಜ್ಯ ಸರಕಾರದ ವಿರುದ್ಧದ ಶೇ.40ರಷ್ಟು ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು ಆ ಕುರಿತು ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದಾಖಲೆ ನೀಡಲಿ. ಲೋಕಾಯುಕ್ತ ಇರುವಾಗ ನ್ಯಾಯಾಂಗ ತನಿಖೆ ಯಾಕೆ? ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ವಿಚಾರವು ಆ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ಯಾವುದೇ ಚರ್ಚೆ ಮಾಡಲು ಬಯಸುವುದಿಲ್ಲ'

-ಅರುಣ್ ಸಿಂಗ್ ಬಿಜೆಪಿ ಕರ್ನಾಟಕ ಉಸ್ತುವಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News