ಜನವರಿಯಿಂದ ಜಮ್ಮು-ಕಾಶ್ಮೀರಕ್ಕೆ 1.62 ಕೋ.ಪ್ರವಾಸಿಗಳ ಭೇಟಿ

Update: 2022-10-06 15:55 GMT

 ಹೊಸದಿಲ್ಲಿ,ಅ.6: ಜನವರಿ 2022ರಿಂದ ಸುಮಾರು 1.62 ಕೋ.ಪ್ರವಾಸಿಗಳು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಭಾರತಕ್ಕೆ ಸ್ವಾತಂತ್ರ ಲಭಿಸಿದ ಬಳಿಕ ವರ್ಷವೊಂದರಲ್ಲಿ ಇಷ್ಟೊಂದು ಪ್ರವಾಸಿಗಳು ಭೇಟಿ ನೀಡಿರುವುದು ಇದೇ ಮೊದಲು ಎಂದು ಜಮ್ಮು-ಕಾಶ್ಮೀರ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಗಳ ನಿರ್ದೇಶನಾಲಯವು ಗುರುವಾರ ತಿಳಿಸಿದೆ.

ಜಮ್ಮು-ಕಾಶ್ಮೀರಕ್ಕೆ ತನ್ನ ಮೂರು ದಿನಗಳ ಭೇಟಿಯನ್ನು ಬುಧವಾರ ಮುಕ್ತಾಯಗೊಳಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,ಈ ಪ್ರದೇಶವು ಮೊದಲು ಭಯೋತ್ಪಾದಕರ ತಾಣವಾಗಿತ್ತು,ಆದರೆ ಈಗ ಮೋದಿ ಸರಕಾರದ ನೀತಿಗಳಿಂದಾಗಿ ಪ್ರವಾಸಿ ತಾಣವಾಗಿದೆ ಎಂದು ಹೇಳಿದ್ದರು.

ಮೂರು ಕುಟುಂಬಗಳ ಆಡಳಿತದಡಿ 70 ವರ್ಷಗಳಲ್ಲಿ ಕೇವಲ 15,000 ಕೋ.ರೂ.ಗಳು ಜಮ್ಮು-ಕಾಶ್ಮೀರದಲ್ಲಿ ಹೂಡಿಕೆಯಾಗಿದ್ದವು,ಆದರೆ ಮೋದಿಯವರ ನಾಯಕತ್ವದಡಿ ಕೇವಲ ಮೂರು ವರ್ಷಗಳಲ್ಲಿ 56,000 ಕೋ.ರೂ.ಗಳ ಹೂಡಿಕೆಯಾಗಿದೆ ಎಂದು ತಿಳಿಸಿದ್ದ ಶಾ,ಈ ಮೊದಲು ಪ್ರತಿವರ್ಷ ಗರಿಷ್ಠವೆಂದರೆ ಆರು ಲಕ್ಷ ಪ್ರವಾಸಿಗಳು ಕಾಶ್ಮೀರ ಕಣಿವೆಗೆ ಭೇಟಿ ನೀಡುತ್ತಿದ್ದರು. ಈ ವರ್ಷವೊಂದರಲ್ಲೇ ಈವರೆಗೆ 22 ಲ. ಪ್ರವಾಸಿಗಳು ಕಣಿವೆಗೆ ಭೇಟಿ ನೀಡಿದ್ದಾರೆ. ಇದು ಸಾವಿರಾರು ಯುವಜನರಿಗೆ ಉದ್ಯೋಗಗಳನ್ನು ಒದಗಿಸಿದೆ ಮತ್ತು ಈ ಪ್ರಕ್ರಿಯೆಯನ್ನು ಇನ್ನಷ್ಟು ಬಲಗೊಳಿಸಲಾಗುವದು ಎಂದಿದ್ದರು.

ತನ್ನ ಭೇಟಿಯ ಸಂದರ್ಭದಲ್ಲಿ ಶಾ ಶ್ರೀನಗರದಲ್ಲಿ ಸುಮಾರು 2,000 ಕೋ.ರೂ.ವೆಚ್ಚದ 240 ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.

ಬಾರಾಮುಲ್ಲಾದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುವ ಮುನ್ನ ತನ್ನ ರಕ್ಷಣೆಗಾಗಿದ್ದ ಗುಂಡು ನಿರೋಧಕ ಗಾಜನ್ನು ತೆಗೆಯುವಂತೆ ಶಾ ಸೂಚಿಸಿದ್ದರು. 2021ರಲ್ಲಿ ಶ್ರೀನಗರದಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದಾಗಲೂ ಅವರು ಗುಂಡು ನಿರೋಧಕ ಗಾಜನ್ನು ತೆಗೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News