ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಹಲವು ಸಮುದಾಯಗಳ ಮನವಿ: ಸಚಿವ ಆರ್.ಅಶೋಕ್

Update: 2022-10-10 14:21 GMT

ಬೆಂಗಳೂರು, ಅ.10: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರವು ಎಸ್ಸಿ ಹಾಗೂ ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದೆ. ಅದೇ ರೀತಿ, ಲಿಂಗಾಯತರು, ಒಕ್ಕಲಿಗರು, ಈಡಿಗರೂ ಸೇರಿ ಹಲವು ಸಮುದಾಯದವರು ಮೀಸಲಾತಿ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಂದಿರುವ ಬೇಡಿಕೆಗಳು, ಮನವಿಗಳನ್ನು ಗೌರವಯುತವಾಗಿ ಸ್ವೀಕರಿಸಿ, ಪರಿಶೀಲನೆ ನಡೆಸುತ್ತೇವೆ. ಎಸ್ಸಿ ಹಾಗೂ ಎಸ್ಟಿಗಳ ಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ಹಾಗೂ ಸಮಿತಿಯನ್ನು ರಚಿಸಲಾಗಿತ್ತು. ಅವರು ನೀಡಿದ ಶಿಫಾರಸ್ಸಿನ ಪ್ರಕಾರ ಸರಕಾರ ಕ್ರಮ ಕೈಗೊಂಡಿದೆ ಎಂದರು.

ಒಕ್ಕಲಿಗ ಸಮುದಾಯದವರು ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸುವಂತೆ ಮನವಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್, ನಾನು ಈಗ ಯಾವುದೋ ಒಂದು ಜಾತಿ ಅಥವಾ ಸಮುದಾಯದ ನಾಯಕನಲ್ಲ. ಸರಕಾರದಲ್ಲಿ ಕಂದಾಯ ಸಚಿವನಾಗಿದ್ದು, ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣಬೇಕು. ಬಸವರಾಜ ಬೊಮ್ಮಾಯಿ ಅವರು ಲಿಂಗಾಯತರು. ಆದರೆ, ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸಿದ್ದಾರೆ. ನಮ್ಮ ಸರಕಾರ ಕಾನೂನು ರೀತಿ ಕ್ರಮ ಕೈಗೊಳ್ಳುತ್ತದೆ ಎಂದರು.

ಒತ್ತುವರಿ ತೆರವು: ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಯಾವುದೆ ತಾರತಮ್ಯ ಇಲ್ಲ. ಒತ್ತುವರಿ ಮಾಡಿರುವವರನ್ನು ಸಮಾನವಾಗಿ ನೋಡಬೇಕು. ಯಾರೆ ಒತ್ತುವರಿ ಮಾಡಿದ್ದರೂ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸುಮಾರು 200 ಮಂದಿ ಮಾಡಿರುವ ಮಾಡಿರುವ ಒತ್ತುವರಿಯಿಂದ ಸಾವಿರಾರು ಜನ ಸಮಸ್ಯೆ ಎದುರಿಸುವಂತಾಗಿದೆ ಎಂದು ಅಶೋಕ್ ತಿಳಿಸಿದರು.

ಸರಕಾರ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ವಾಸ್ತವ ಸಂಗತಿಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುತ್ತೇವೆ. ಒತ್ತುವರಿಗೆ ಸಂಬಂಧಿಸಿದಂತೆ ಸರ್ವೆ ಕಾರ್ಯವನ್ನು ಮಾಡಲಾಗುತ್ತಿದ್ದು, ನ್ಯಾಯಯುತವಾಗಿ ಕಾರ್ಯಾಚರಣೆ ನಡೆಸಿ, ಮುಂದಿನ ದಿನಗಳಲ್ಲಿ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಮೃತದೇಹಗಳನ್ನು ತರಲು ಕ್ರಮ: ಉತ್ತರಾಖಂಡದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟಿರುವ ಬೆಂಗಳೂರಿನ ವಿಕ್ರಮ್ ಹಾಗೂ ರಕ್ಷಿತ್ ಅವರ ಮೃತದೇಹಗಳು ಸಿಕ್ಕಿದ್ದು, ಅವುಗಳನ್ನು ಸರಕಾರದ ವೆಚ್ಚದಲ್ಲಿ ಇಂದು ರಾತ್ರಿ ರಾಜ್ಯಕ್ಕೆ ತರಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ನೆರವು ನೀಡುವಂತೆ ವಿಪತ್ತು ನಿರ್ವಹಣಾ ವಿಭಾಗದವರಿಗೆ ಸೂಚನೆ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.

ಉತ್ತರಾಖಂಡದಲ್ಲಿ ನೆಹರು ಇನ್ಸ್‍ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‍ನಲ್ಲಿ ಅಡ್ವಾನ್ಸ್ ಮೌಂಟೇನಿಯರಿಂಗ್ ಕೋರ್ಸ್ ಕಳೆದ ಸೆ.21ರಿಂದ ಪ್ರಾರಂಭವಾಗಿತ್ತು. ಅ.4ರಂದು ತರಬೇತಿ ವೇಳಾಪಟ್ಟಿಯಂತೆ, 34 ಪ್ರಶಿಕ್ಷಣಾರ್ಥಿಗಳು ಮತ್ತು ಪರ್ವತಾರೋಹಣ ಬೋಧಕರು ಪರ್ವತ ಚಾರಣಕ್ಕೆ ತೆರಳಿದಾಗ ಹಿಮಕುಸಿತ ಉಂಟಾಗಿದೆ. ಈಗಾಗಲೆ, 12 ಬೋಧಕರು ಮತ್ತು ಪ್ರಶಿಕ್ಷಣಾರ್ಥಿಗಳನ್ನು ರಕ್ಷಿಸಲಾಗಿದೆ. ಮೃತಪಟ್ಟಿರುವ ವಿಕ್ರಮ್ ಹಾಗೂ ರಕ್ಷಿತ್ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ಹೇಳಿದರು.

ರಾಜ್ಯ ಪ್ರವಾಸ: ‘ರಾಜ್ಯದಲ್ಲಿ ಬಿಜೆಪಿ ನಾಯಕರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ನಾಳೆ(ಅ.11) ರಾಯಚೂರು ಜಿಲ್ಲೆಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಸ ಆರಂಭಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತನಗೆ ಕರೆ ಮಾಡಿದ್ದು, ಎಲ್ಲೆಲ್ಲಿ ಪ್ರವಾಸಕ್ಕೆ ಹೋಗಬೇಕು ಎಂದು ತಿಳಿಸಿದ್ದಾರೆ. ಅದರಂತೆ ನಾನೂ ಪ್ರವಾಸ ಮಾಡಲಿದ್ದೇನೆ'

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News