ಸದಾಶಯಗಳು ಮತ್ತು ಸಾರವಿಲ್ಲದ ಸಂಕೇತಗಳ ಸಮಸ್ಯೆಗಳು

Update: 2022-10-12 02:14 GMT

ಭಾಗ - 1

ಮೋದಿ ಸರಕಾರದ ಅವಧಿಯಲ್ಲಿ ಖಾದಿಯ ಬವಣೆ ಹೆಚ್ಚಿದ್ದರೂ ಖಾದಿ ಆರ್ಥಿಕತೆ ಹಳ್ಳ ಹಿಡಿಯಲು ಪ್ರಾರಂಭಿಸಿದ್ದು ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಾರಂಭಿಸಿದ ನವ ಆರ್ಥಿಕ ನೀತಿಗಳಿಂದಾಗಿಯೇ.

ಹೀಗಿರುವಾಗ ಖಾದಿಯ ರೀತಿ ಇಡೀ ಗ್ರಾಮೀಣ ಭಾರತದ ಆರ್ಥಿಕತೆಯ ಬಿಕ್ಕಟ್ಟಿಗೆ ಕಾರಣವಾಗಿರುವ ತನ್ನ ಕಾರ್ಪೊರೇಟ್ ಬಂಡವಾಳಶಾಹಿಪರ ನೀತಿಗಳ ಬಗ್ಗೆ ತಪ್ಪೊಪ್ಪಿಗೆ ಮಾಡಿಕೊಳ್ಳದೆ, ಅದನ್ನು ಬದಲಿಸಿಕೊಳ್ಳದೆ ಕಾಂಗ್ರೆಸ್ ಪಕ್ಷ ಖಾದಿ ಮತ್ತಿತರ ಉದ್ಯಮಗಳಿಗೆ ಪುನಶ್ಚೇತನ ಮಾಡುವುದಿರಲಿ, ಕಾರ್ಮಿಕರ ವೇತನವನ್ನಾದರೂ ಹೆಚ್ಚಿಸಲು ಸಾಧ್ಯವೇ?

ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆಯ ಮೂಲಕ ಸಂಘಪರಿವಾರದ ದ್ವೇಷ ರಾಜಕಾರಣದ ವಿರುದ್ಧ ಕಾಂಗ್ರೆಸ್ ಚೌಕಟ್ಟಿನೊಳಗೆ ಏನು ಮಾಡಲು ಸಾಧ್ಯವೋ ಅದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಭಾರತದ ಸಾಮಾಜಿಕ ಸಂವೇದನೆಯಲ್ಲಿ ಗುಡಿಸಲಿನಿಂದ ಅರಮನೆ ಸೇರಿದವರು ವ್ಯಕ್ತಿಗತ ಸಾಧನೆಗಳಿಗೆ ಆದರ್ಶಗಳಾಗಿ ಉಳಿದುಕೊಂಡರೂ, ಅರಮನೆ ತೊರೆದು ಗುಡಿಸಲುಗಳ ಕಡೆ ನಡೆದವರಿಗೆ ಸಮುದಾಯ ಅಪಾರ ಪ್ರೀತಿ ಮತ್ತು ವಿಶ್ವಾಸಗಳನ್ನು ತೋರಿದೆ. ಆ ಅರ್ಥದಲ್ಲಿ ಮೋದಿಯ ಇಮೇಜಿಗೆ ಪರ್ಯಾಯವಾದ ಮತ್ತೊಂದು ನಾಯಕನ ಇಮೇಜನ್ನು ಪ್ರತಿದಿನವೂ ಕಾಂಗ್ರೆಸ್‌ನ ಭಾರತ್ ಜೋಡೊ ಪ್ರಜ್ಞಾಪೂರ್ವಕವಾಗಿ ಉತ್ಪಾದಿಸುತ್ತಿದೆ ಮತ್ತು ಒಂದಷ್ಟು ಮಟ್ಟಿಗೆ ತಮ್ಮ ಬಗ್ಗೆ ಸಂಘಪರಿವಾರ ದುರುದ್ದೇಶಪೂರ್ವಕವಾಗಿ ಬಿತ್ತುತ್ತಿದ್ದ ‘ಪಪ್ಪು’ಇಮೇಜನ್ನು ಮುರಿಯುವಲ್ಲಿ ಕೂಡ ರಾಹುಲ್ ಗಾಂಧಿ ಮತ್ತು ಈ ಭಾರತ್ ಜೋಡೊ ಸಫಲವಾಗಿದೆ.

ಐತಿಹಾಸಿಕ ಪಾದಯಾತ್ರೆ

ನೂರ ಐವತ್ತು ದಿನಗಳ ಕಾಲ ಒಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಜನರ ನೋವುಗಳಿಗೆ ಕಿವಿಯಾಗುತ್ತಾ ಜೊತೆಜೊತೆಗೆ ಬೀದಿಯಲ್ಲಿ ಹೆಜ್ಜೆ ಹಾಕುತ್ತಾ ಸಾಗುವುದು ಒಂದು ಆರೋಗ್ಯಕರ ಪ್ರಜಾತಾಂತ್ರಿಕ ಪ್ರಕ್ರಿಯೆ. ಹೀಗಾಗಿ ಇದು ಬೀದಿಗಳಲ್ಲಿ ಒಂದು ಹಬ್ಬದ ವಾತಾವರಣವನ್ನೇ ಸೃಷ್ಟಿಸುತ್ತಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಲಾಭವಾದರೂ, ಆಗದಿದ್ದರೂ ಪಕ್ಷವು ಜನರಿಗೆ ಹತ್ತಿರವಾಗುವ, ನಾಯಕರು ಕಾರ್ಯಕರ್ತರಿಗೆ ಹತ್ತಿರವಾಗುವ ಆರೋಗ್ಯಕರ ಬೆಳವಣಿಗೆಯ ಲಾಭವಂತೂ ಆಗಲಿದೆ.

ಈ ಪ್ರಮಾಣದ ಬೃಹತ್ ಪಾದಯಾತ್ರೆಯೊಂದು ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಜನಚಳವಳಿಗಳು ಮಾಡಿರಲಿಲ್ಲ. ಕಂಡಿರಲಿಲ್ಲ. ಸದ್ಯಕ್ಕೆ ಅಂಥವನ್ನು ಮಾಡುವ ತ್ರಾಣವು ಬಹುಪಾಲು ಚಳವಳಿಗಳಿಗಿಲ್ಲ. ಹೀಗಾಗಿ ಸಮಾನ ಶತ್ರುವಾದ ಹಿಂದುತ್ವ ಫ್ಯಾಶಿಸಂ ವಿರುದ್ಧ ಜೊತೆಗೂಡಿ ನಡೆಯುವುದೇ ಇಂದಿನ ಮಟ್ಟಿಗೆ ಸಾಧ್ಯವಿರುವ ವಿರೋಧವೆಂದೂ ಸಾವಿರಾರು ಪ್ರಗತಿಪರರು ಜೋಡೋದುದ್ದಕ್ಕೂ ‘ಕೈ’ಜೋಡಿಸುತ್ತಿದ್ದಾರೆ. ಭಾರತ್ ಜೋಡೊ ಯಶಸ್ಸಿಗೆ ಹಲವಾರು ಕಾಂಗ್ರೆಸ್ ನಾಯಕರಿಗಿಂತ ಹೆಚ್ಚಿನ ಬದ್ಧತೆಯಿಂದ ಹಗಲಿರುಳು ದುಡಿಯುತ್ತಿದ್ದಾರೆ.

ಕಾಂಗ್ರೆಸ್ ಚೌಕಟ್ಟು V/S ಭಾರತ್ ಜೋಡೊ ಆಶಯಗಳು

ಆದರೆ ಒಟ್ಟಾರೆ ಜೋಡೊಗೆ ಕಾಂಗ್ರೆಸ್ ರಾಜಕೀಯ ಮತ್ತು ಸಿದ್ಧಾಂತದ ಚೌಕಟ್ಟಿದೆ. ಹೀಗಾಗಿ ಕಾಂಗ್ರೆಸ್‌ನ ಚೌಕಟ್ಟಿನೊಳಗಿಂದ ಹಿಂದುತ್ವ ಫ್ಯಾಶಿಸಂ ಅನ್ನು ಸೋಲಿಸುವುದಿರಲಿ ಎದುರಿಸಬಹುದೇ ಎಂಬುದು ತಳ್ಳಿಹಾಕಲಾಗದ ಪ್ರಶ್ನೆಯಾಗಿದೆ.

ಜೋಡೊದ ಘೋಷಿತ ಉದ್ದೇಶಗಳ ಬಗ್ಗೆ ರಾಹುಲ್ ಗಾಂಧಿಯವರ ವೈಯಕ್ತಿಕ ಪ್ರಾಮಾಣಿಕತೆಗಳೇನೇ ಇದ್ದರೂ ಕಾಂಗ್ರೆಸ್ ಪಕ್ಷದ ನವ ಉದಾರವಾದಿ ಆರ್ಥಿಕ ಸಿದ್ಧಾಂತ (ಕ್ರೋನಿ ಕ್ಯಾಪಿಟಲಿಸಂ ಅದರ ತಾರ್ಕಿಕ ಪರಿಣಾಮ), ಸವರ್ಣೀಯ ದೃಷ್ಟಿಕೋನ ಮತ್ತು ಸಾಮಾಜಿಕ ನೆಲೆ (ಅದರ ಪರಿಣಾಮವೇ ಮೃದು ಹಿಂದುತ್ವವಾದಿ ರಾಜಕೀಯ), ಮೂಲಭೂತ ಬದಲಾವಣೆಯನ್ನು ವಿರೋಧಿಸುವ ಯಥಾಸ್ಥಿತಿವಾದಿ ರಾಜಕೀಯ ಚೌಕಟ್ಟುಗಳೇ ಭಾರತ್ ಜೋಡೊದ ಇಮೇಜುಗಳಲ್ಲಿರುವ ಧ್ವನ್ಯಾರ್ಥಗಳಿಗೆ ಢಿಕ್ಕಿ ಹೊಡೆದು ವಿರೋಧಾಭಾಸ ಹುಟ್ಟುಹಾಕುತ್ತಿದೆ ಹಾಗೂ ಹಿಂದುತ್ವ ಫ್ಯಾಶಿಸಂನ ಹಲವಾರು ಬ್ರಾಹ್ಮಣೀಯ ಹಿಂದುತ್ವ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿ ಕ್ರಮಗಳಿಗೆ ಮೌನ ಬೆಂಬಲ ಕೊಡುವಂತೆ ಮಾಡುತ್ತದೆ.

ಟಿಪ್ಪುವನ್ನು ಭೇಟಿಯಾಗಲಿಲ್ಲ- ಅದಾನಿಯನ್ನು ವಿರೋಧಿಸಲಿಲ್ಲ?

ಶ್ರೀರಂಗಪಟ್ಟಣದಲ್ಲೇ ಬಿಡಾರ ಹೂಡಿದ್ದರೂ, ಭಾರತ್ ಜೋಡೊ ಟಿಪ್ಪು ಸಮಾಧಿಗೆ ಭೇಟಿ ಕೊಡದಿರುವುದು, ಟಿಪ್ಪುಎಕ್ಸ್‌ಪ್ರೆಸ್ ಹೆಸರಿನ ಬದಲಾವಣೆಯ ಬಗ್ಗೆ ಚಕಾರ ಎತ್ತದಿರುವುದು, ಗುಜರಾತಿನಲ್ಲಿ ಪೊಲೀಸರು ಮುಸ್ಲಿಮ್ ಯುವಕರನ್ನು ಸಾರ್ವಜನಿಕವಾಗಿ ಕಟ್ಟಿಹಾಕಿ ಥಳಿಸಿರುವ ಬರ್ಬರತೆಯ ಬಗ್ಗೆ ಮೌನವಾಗಿರುವುದು, ದೇಶಾದ್ಯಂತ ಬಾಂಬ್ ಭಯೋತ್ಪಾದನೆ ಮಾಡುತ್ತಿರುವ ಆರೆಸ್ಸೆಸಿಗರನ್ನು ಬಂಧಿಸದೆ ಪಿಎಫ್‌ಐ ಅನ್ನು ಮಾತ್ರ ಭಯೋತ್ಪಾದಕ ಎಂದು ಬ್ಯಾನ್ ಮಾಡುವುದರ ಹಿಂದಿರುವ ಹಿಂದುತ್ವ ಭಯೋತ್ಪಾದನೆಯ ಬಗ್ಗೆ ಮೌನ,  ರಾಜಸ್ಥಾನದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯೇ ಕ್ರೋನಿ ಅದಾನಿಯನ್ನು ಬರಮಾಡಿಕೊಂಡಿರುವುದನ್ನು ರಾಹುಲ್ ಗಾಂದಿಯೇ ಉದ್ಯೋಗ ಸೃಷ್ಟಿಯ ಹೆಸರಲ್ಲಿ ಸಮರ್ಥಿಸಿಕೊಳ್ಳುವ ಅನಿವಾರ್ಯತೆಗಳು- ಇವೆಲ್ಲಾ ಹಿಂದುತ್ವ ಫ್ಯಾಶಿಸ್ಟ್ ಆಕ್ರಮಣವನ್ನು ಕಾಂಗ್ರೆಸ್‌ನ ರಾಜಕೀಯ-ಸಾಮಾಜಿಕ ಚೌಕಟ್ಟಿನಡಿ ಹೇಗೆ ಪ್ರತಿರೋಧಿಸಲಾಗುವುದಿಲ್ಲ ಮತ್ತು ಅದರಿಂದಾಗಿ ಹೇಗೆ ಹಿಂದುತ್ವ ಸಮಾಜದಲ್ಲಿ ಇನ್ನಷ್ಟು ಮನ್ನಣೆ ಪಡೆದುಕೊಳ್ಳಲು ಕಾಂಗ್ರೆಸ್‌ನ ನಡೆಗಳೂ ಪೂರಕವಾಗುತ್ತವೆ ಎಂಬುದಕ್ಕೆ ಇತ್ತೀಚಿನ ಉದಾಹರಣೆಗಳು.

ಟಿಪ್ಪುಸಮಾಧಿಗೆ ಭೇಟಿ ನೀಡಿದರೆ ಸಂಘಪರಿವಾರದ ಮುಸ್ಲಿಮ್ ತುಷ್ಟೀಕರಣದ ಅಪಪ್ರಚಾರಕ್ಕೆ ತುತ್ತಾಗಿಬಿಡುತ್ತೇವೆಂಬ ಆತಂಕ, ಅದಾನಿಯನ್ನು ವಿರೋಧಿಸಿದರೆ ಭಾರತದ ಕಾರ್ಪೊರೇಟ್ ಕುಳಗಳ ಬೆಂಬಲವನ್ನು ಕಳೆದುಕೊಳ್ಳುತ್ತೇವೆಂಬ ಆತಂಕಗಳು ಕಾಂಗ್ರೆಸ್‌ನ ಚುನಾವಣಾ ಅನಿವಾರ್ಯತೆ ಮಾತ್ರವಲ್ಲ. ಕೆಲವು ವ್ಯಕ್ತಿಗಳನ್ನು ಹೊರತುಪಡಿಸಿದರೆ ಇದೇ ಕಾಂಗ್ರೆಸ್‌ನ ಮೂಲ ಚಹರೆಯೂ ಆಗಿದೆ. ಸಂಸ್ಥೆಯ ಒಳಗಿರುವ ತನಕ ವ್ಯಕ್ತಿಗಳ ವೈಯಕ್ತಿಕ ಒಲವುಗಳಿಗೆ ಯಾವುದೇ ಮಹತ್ವವಿರುವುದಿಲ್ಲ ಎನ್ನುವುದೇ ಈ ಮೌನಗಳು ಸಾಬೀತುಪಡಿಸುತ್ತದೆ.

ಆದರೆ ಕಾಂಗ್ರೆಸ್‌ನ ಈ ರಾಜಕೀಯ ಆರ್ಥಿಕ ನೀತಿಗಳು ಬದಲಾಗದೆ ಫ್ಯಾಶಿಸ್ಟರನ್ನು ಸೋಲಿಸಲಾಗಲೀ, ಭಾರತವನ್ನು ಜೋಡಿಸಲಾಗಲೀ ಸಾಧ್ಯವೇ?

ಕಾಂಗ್ರೆಸ್‌ನ ಭಾರತ್ ಜೋಡೊದ ಘೋಷಿತ ಆಶಯಗಳಿಗೂ ಹಾಗೂ ಕಾಂಗ್ರೆಸ್ ಪಕ್ಷದ ರಾಜಕೀಯ-ಆರ್ಥಿಕ ನೀತಿಗಳಿಗೂ ಇರುವ ವೈರುಧ್ಯಗಳೇ ರಾಹುಲ್ ಅವರ ಈ ಐತಿಹಾಸಿಕ ನಡಿಗೆ ದಿನನಿತ್ಯ ಸೃಷ್ಟಿಸುತ್ತಿರುವ ಅಪ್ಯಾಯಮಾನ ಇಮೇಜುಗಳ ಧ್ವನ್ಯಾರ್ಥಗಳನ್ನು ಪ್ರಶ್ನಾರ್ಹಗೊಳಿಸುತ್ತಿದೆ.

ಬದನವಾಳು- ಶಿಥಿಲಗೊಂಡ ಗ್ರಾಮಭಾರತದ ಸಂಕೇತ

ಎಲ್ಲಕ್ಕಿಂತ ಹೆಚ್ಚಾಗಿ ಇದು ಕಳೆದ ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು ರಾಹುಲ್ ಮತ್ತವರ ಬೆಂಬಲಿಗರ ಭಾರತ್ ಜೋಡೊ ಯಾತ್ರೆಯು ಐತಿಹಾಸಿಕ ಬದನವಾಳು ಗ್ರಾಮದಲ್ಲಿ ಕೈಗೊಂಡ ಹಲವಾರು ಕಾರ್ಯಕ್ರಮಗಳಲ್ಲೂ, ಅದು ಹುಟ್ಟುಹಾಕಿದ ಸಂಕೇತಗಳಲ್ಲೂ ಎದ್ದುಕಾಣುವಂತಿತ್ತು.

ಏಕೆಂದರೆ ಬದನವಾಳು ಈ ಭಾರತದ ಲಕ್ಷಾಂತರ ಹಳ್ಳಿಗಳ ಪ್ರಾತಿನಿಧಿಕ ಗ್ರಾಮವಾಗಿರುವುದು ಮಾತ್ರವಲ್ಲ, ಅದು ಕಾಂಗ್ರೆಸ್‌ನ ಮೃದು ಹಿಂದುತ್ವ ಹಾಗೂ ಕಾರ್ಪೊರೇಟ್ ಪರ ರಾಜಕೀಯದಿಂದ ಬೇಸತ್ತಿರುವ ಗ್ರಾಮೀಣ ಭಾರತವನ್ನು ಉಗ್ರ ಹಿಂದುತ್ವ ಹಾಗೂ ಆಕ್ರಮಣಕಾರಿ ಬಂಡವಾಳಶಾಹಿಯಾಗಿರುವ ಸಂಘಪರಿವಾರ-ಬಿಜೆಪಿ ತನ್ನ ‘ತಳಮಟ್ಟದ ಹಿಂದುತ್ವವಾದಿ’ ರಾಜಕಾರಣದ ಮೂಲಕ ಗೆದ್ದುಕೊಳ್ಳುತ್ತಿರುವ ವಿದ್ಯಮಾನಕ್ಕೆ ಪ್ರಾತಿನಿಧಿಕವಾಗಿದೆ.

ಹೀಗಾಗಿ ಬದನವಾಳು ಗ್ರಾಮದ ಹಾಗೂ ಅದರ ಇಂದಿನ ರಾಜಕೀಯ ಆರ್ಥಿಕ ಬಿಕ್ಕಟ್ಟಿನ ಇತಿಹಾಸವನ್ನು ಹಾಗೂ ಅಲ್ಲಿ ಹಿಂದುತ್ವ ರಾಜಕಾರಣದ ಬೆಳವಣಿಗೆಯ ಪರಿಯನ್ನು ಅರ್ಥಮಾಡಿಕೊಳ್ಳುವುದು ಕಾಂಗ್ರೆಸ್‌ಗೂ ಅದರ ಬೆಂಬಲಿಗರಿಗೂ ಹೆಚ್ಚಿನ ಸಹಾಯ ಮಾಡಬಹುದು.

ಬದನವಾಳು ಗ್ರಾಮಕ್ಕೆ ಇತರ ಹಳ್ಳಿಗಳಿಗೆ ಇಲ್ಲದ ಒಂದು ಇತಿಹಾಸವಿದೆ. ಇಲ್ಲಿ ೧೯೨೭ರಲ್ಲೇ ಗಾಂಧಿಯಿಂದ ಪ್ರೇರೇಪಣೆಗೊಂಡು ಹಾಗೂ ಮೈಸೂರಿನ ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸಂಪೂರ್ಣ ಬೆಂಬಲದೊಂದಿಗೆ ನಾಲ್ವರು ದಲಿತ ಮಹಿಳೆಯರು ಖಾದಿ ಬಟ್ಟೆ ತಯಾರಿಸುವ ಕೈಮಗ್ಗ ಕೇಂದ್ರವನ್ನು ಪ್ರಾರಂಭಿಸಿದ್ದರು. ಅದು ಸ್ವಲ್ಪ ಕಾಲದಲ್ಲೇ ಯಶಸ್ವಿಯಾಗಿ ಆ ಕಾಲದಲ್ಲೇ  ಸಾಕಷ್ಟು ಲಾಭವನ್ನು ಮತ್ತು ನೂರಾರು ಜನರಿಗೆ ಕೆಲಸವನ್ನು ಕೊಡುತ್ತಿತ್ತು. ೧೯೩೬ರಲ್ಲಿ ಗಾಂಧಿಯವರು ಮತ್ತೊಮ್ಮೆ ಆ ಗ್ರಾಮಕ್ಕೆ ಭೇಟಿಕೊಟ್ಟು ಬದನವಾಳುವನ್ನು ಮಾದರಿ ಗ್ರಾಮವೆಂದು ಹೊಗಳಿದ್ದರು. ಈಗ ಅಲ್ಲಿ ಖಾದಿ ಗ್ರಾಮೋದ್ಯೋಗ ನಿರ್ನಾಮವಾಗುವ ಹಂತದಲ್ಲಿದೆ. ಅದೇ ರೀತಿ ಈ ಹಳ್ಳಿಯು ೧೯೯೩ರಲ್ಲಿ ಜಾತಿ ಅಸಹನೆಯಿಂದ ಮೂವರು ದಲಿತರನ್ನು ಕೊಂದು ಹಾಕಿದ ಮೇಲ್ಜಾತಿ ಲಿಂಗಾಯತ ದೌರ್ಜನ್ಯಕ್ಕೂ ಹೆಸರು ಮಾಡಿತ್ತು. ಹೀಗೆ ಬದನವಾಳು ಗ್ರಾಮವು ಮುರಿದುಹೋಗಿರುವ ಆರ್ಥಿಕತೆ ಮತ್ತು ಕದಡಿಹೋಗಿರುವ ಸಾಮಾಜಿಕ ಸಂಬಂಧಗಳ ಗ್ರಾಮ ಭಾರತದ ಪ್ರಾತಿನಿಧಿಕ ಸಂಕೇತವಾಗಿದೆ.

ಹೀಗೆ ಕಾರ್ಪೊರೇಟ್ ಬಂಡವಾಳಶಾಹಿ ಪರ ಆರ್ಥಿಕ ನೀತಿಗಳು ಹಾಗೂ ಬ್ರಾಹ್ಮಣೀಯ ಜಾತಿವಾದಿ ಹಿಂದುತ್ವದಿಂದ ಮುರಿದುಹೋಗಿರುವ ಬದನವಾಳನ್ನು ಸಂವಿಧಾನದ ಆಶಯಗಳಾದ ಸೆಕ್ಯುಲರ್, ಸಮಾಜವಾದಿ, ಪ್ರಜಾತಾಂತ್ರಿಕ ಗಣರಾಜ್ಯದೊಡನೆ ಜೋಡಿಸಲು ಕಾಂಗ್ರೆಸ್ ಚೌಕಟ್ಟಿನಲ್ಲಿ ಸಾಧ್ಯವೇ?

ಇದಕ್ಕೆ ಉತ್ತರವನ್ನು ಹುಡುಕಲು ಬದನವಾಳುವಿನ ಇತಿಹಾಸವನ್ನು ಇನ್ನೊಂದಷ್ಟು ಆಳವಾಗಿ ಅರ್ಥಮಾಡಿಕೊಳ್ಳಬೇಕು.

ಖಾದಿಯ ಕೈಮುರಿದ ಕಾಂಗ್ರೆಸ್‌ನ ಬಂಡವಾಳಶಾಹಿ ಪರ ನೀತಿ

ದೇಶವು ಪ್ರಧಾನವಾಗಿ ಬಂಡವಾಳಶಾಹಿ ಆರ್ಥಿಕ ನೀತಿಗಳನ್ನು ಅನುಸರಿಸತೊಡಗುತ್ತಿದ್ದಂತೆ ಬದನವಾಳುವಿನ ಖಾದಿ ಉದ್ಯಮವು ನಿಧಾನವಾಗಿ ಕುಸಿಯತೊಡಗಿತು. ಅದರ ಕಚ್ಚಾ ವಸ್ತು ಸರಬರಾಜು, ಉತ್ಪಾದನೆ ಮತ್ತು ಮಾರುಕಟ್ಟೆ ಎಲ್ಲವೂ ಸರಕಾರದ ನೀತಿ ನಿಯಂತ್ರಣ ಹಾಗೂ ಮಧ್ಯವರ್ತಿ ದಲ್ಲಾಳಿಗಳ ಕಾರಣದಿಂದಾಗಿ ಇನ್ನಷ್ಟು ಸ್ಥಗಿತತೆಯನ್ನು ಎದುರಿಸತೊಡಗಿತು. 1991ರಿಂದ ಕಾಂಗ್ರೆಸ್ ಸರಕಾರವೇ ಪ್ರಾರಂಭಿಸಿದ ಕಾರ್ಪೊರೇಟ್ ಬಂಡವಾಳಿಗರ ಪರವಾದ ಆರ್ಥಿಕ ನೀತಿಗಳು ಸಣ್ಣ ಹಾಗೂ ಗೃಹ ಕೈಗಾರಿಕೆಗೆ ಸೀಮಿತವಾಗಿದ್ದ ಹಲವಾರು ಕ್ಷೇತ್ರಗಳನ್ನು ಕಾರ್ಪೊರೇಟ್ ದಾಳಿಗೆ ಮುಕ್ತವಾಗಿಸಿತು. ಮತ್ತೊಂದು ಕಡೆ ೨೦೦೦ದ ನಂತರ ಅನುಸರಿಸುತ್ತಾ ಬಂದ ವಿತ್ತೀಯ ಶಿಸ್ತು ನೀತಿಗಳಿಂದಾಗಿ ಖಾದಿ ಹಾಗೂ ಗೃಹ ಕೈಗಾರಿಕೆಗಳಲ್ಲಿ ಹೂಡಿಕೆ ಮಾಡುವುದೇ ‘ಅನುಪಯುಕ್ತ ವೆಚ್ಚ’ ಎಂದು ಪರಿಗಣಿಸಲ್ಪಟ್ಟಿದ್ದರಿಂದ ಸರಕಾರದ ಬೆಂಬಲವು ಯೋಜಿತವಾಗಿ ಇಲ್ಲವಾಗುತ್ತಾ ಹೋಯಿತು. ಒಂದು ಕಡೆ ಕಚ್ಚಾವಸ್ತುಗಳ ವೆಚ್ಚವೂ ಹೆಚ್ಚುತ್ತಾ ಹೋಗಿ, ಮಾರುಕಟ್ಟೆಯೂ ಕುಸಿಯುತ್ತಿತ್ತು. ಇದೆಲ್ಲದರಿಂದ ಖಾದಿ ಕಾರ್ಮಿಕರ ಸಂಬಳ, ಆದಾಯ ಎಲ್ಲವೂ ಕನಿಷ್ಠ ಮಟ್ಟಕ್ಕಿಂತ ಕೆಳಗಿಳಿಯುತ್ತಾ ಹೋಯಿತು. ಉತ್ಪನ್ನಗಳ ಮಾರುಕಟ್ಟೆಯೂ ಪ್ರಧಾನವಾಗಿ ನಗರದ ಮೇಲ್ ಮಧ್ಯಮವರ್ಗದ ಖುಷಿಗಳನ್ನು ಮತ್ತು ‘ದೇಸಿ’ ಆಸಕ್ತಿಗಳನ್ನೇ ಅವಲಂಬಿಸುವಂತಾಯಿತು. ಈ ಕ್ಷೇತ್ರ ಸುಧಾರಣೆಯಾಗಬೇಕೆಂದರೆ ಇಡೀ ಖಾದಿ ಉದ್ಯಮವನ್ನೇ ಖಾಸಗೀಕರಿಸುವ ಪ್ರಸ್ತಾಪವನ್ನು ಸರಕಾರ ಮುಂದಿಟ್ಟಿದೆ. ಇದು ಖಾದಿ ಉದ್ಯಮದ ಪರಿಕಲ್ಪನೆಗೇ ವಿರುದ್ಧವಾಗಿದೆ. ಇದರ ಜೊತೆಗೆ ಕಳೆದ ೬-೮ ತಿಂಗಳಿಂದ ಹತ್ತಿ ಸರಬರಾಜು ಕೂಡ ಆಗದೆ ಬದನವಾಳುವಿನ ಖಾದಿ ಕೇಂದ್ರ ಹೆಚ್ಚೂ ಕಡಿಮೆ ಸ್ಥಬ್ಧವಾಗಿದೆ.

ಖಾದಿ ಉದ್ಯಮದಂತೆ ಬದನವಾಳುವಿನ ಕೃಷಿ ಹಾಗೂ ಅದರ ಅವಲಂಬಿತ ಆರ್ಥಿಕತೆಯೇ ಗ್ರಾಮೀಣ ಭಾರತದ ಇತರ ಭಾಗಗಳಂತೆ ಬಿಕ್ಕಟಿನಲ್ಲಿದೆ. ಹೀಗಾಗಿ ಈ ಬಿಕ್ಕಟ್ಟು ಹಲವಾರು ಸಾಮಾಜಿಕ ಬಿಕ್ಕಟ್ಟುಗಳಿಗೆ ಮತ್ತು ಇತರ ವೈಷ್ಯಮ್ಯಗಳಿಗೂ ದಾರಿ ಮಾಡಿಕೊಡುತ್ತಿದೆ.

ರಾಹುಲ್ ಗಾಂಧಿ ಬರುತ್ತಾರೆಂದು ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿನ ಶಿಥಿಲ ಕಟ್ಟಡಗಳಿಗೆ ಹೊಸದಾಗಿ ಸುಣ್ಣಬಣ್ಣ ಬಳಿದಿದ್ದರು. ಮೊನ್ನೆ ಅಕ್ಟೋಬರ್ ೨ರಂದು ಬದನವಾಳುವಿನ ಖಾದಿ ಕೇಂದ್ರಗಳಿಗೆ ಭೇಟಿ ನೀಡಿದ ರಾಹುಲ್ ಗಾಂಧಿಯವರು ಅಲ್ಲಿನ ಕಾರ್ಮಿಕರ ಕಣ್ಣೀರಕಥೆಗಳಿಗೆ ಪ್ರಾಮಾಣಿಕವಾಗಿಯೇ ಕಿವಿಯಾದರು ಹಾಗೂ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಖಾದಿ ಕಾರ್ಮಿಕರ ವೇತನವನ್ನು ಹೆಚ್ಚಿಸುವ ಭರವಸೆಯನ್ನು ನೀಡಿದರು.

ಈವರೆಗೆ ತಾವೇ ಹುಡುಕಿಕೊಂಡು ಹೋದರೂ ಯಾವ ನಾಯಕರೂ ತಮ್ಮ ಬವಣೆಯನ್ನು ಆಲಿಸಲು ಸಿದ್ಧರಿಲ್ಲದೆ ಹತಾಶರಾಗಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿಯಂಥ ರಾಜಕಾರಣಿ ತಮ್ಮ ಮನೆ ಬಾಗಿಲಿಗೆ ಬಂದು ತಮ್ಮ ಕಷ್ಟ ಸುಖಗಳನ್ನು ವಿಚಾರಿಸಿದ್ದು, ಖಾದಿ ಕಾರ್ಮಿಕರಲ್ಲಿ ಒಂದು ಅಭಿಮಾನವನ್ನು ಹುಟ್ಟಿಸಿದ್ದರೂ ಸಮಾಧಾನವನ್ನೇನು ತರಲಿಲ್ಲ.

ಏಕೆಂದರೆ ಮೋದಿ ಸರಕಾರದ ಅವಧಿಯಲ್ಲಿ ಖಾದಿಯ ಬವಣೆ ಹೆಚ್ಚಿದ್ದರೂ ಖಾದಿ ಆರ್ಥಿಕತೆ ಹಳ್ಳ ಹಿಡಿಯಲು ಪ್ರಾರಂಭಿಸಿದ್ದು ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಾರಂಭಿಸಿದ ನವ ಆರ್ಥಿಕ ನೀತಿಗಳಿಂದಾಗಿಯೇ.

ಹೀಗಿರುವಾಗ ಖಾದಿಯ ರೀತಿ ಇಡೀ ಗ್ರಾಮೀಣ ಭಾರತದ ಆರ್ಥಿಕತೆಯ ಬಿಕ್ಕಟ್ಟಿಗೆ ಕಾರಣವಾಗಿರುವ ತನ್ನ ಕಾರ್ಪೊರೇಟ್ ಬಂಡವಾಳಶಾಹಿಪರ ನೀತಿಗಳ ಬಗ್ಗೆ ತಪ್ಪೊಪ್ಪಿಗೆ ಮಾಡಿಕೊಳ್ಳದೆ, ಅದನ್ನು ಬದಲಿಸಿಕೊಳ್ಳದೆ ಕಾಂಗ್ರೆಸ್ ಪಕ್ಷ ಖಾದಿ ಮತ್ತಿತರ ಉದ್ಯಮಗಳಿಗೆ ಪುನಶ್ಚೇತನ ಮಾಡುವುದಿರಲಿ, ಕಾರ್ಮಿಕರ ವೇತನವನ್ನಾದರೂ ಹೆಚ್ಚಿಸಲು ಸಾಧ್ಯವೇ?

ವಿಪರ್ಯಾಸವೆಂದರೆ, ಸ್ಥಳೀಯ ಬಿಜೆಪಿ ಶಾಸಕರಾದ ಹರ್ಷವರ್ಧನ ಅವರು ಬದನವಾಳುವಿನ ಖಾದಿ ಇಮೇಜನ್ನು ಬಿಜೆಪಿ ಪರವಾಗಿ ದುಡಿಸಿಕೊಳ್ಳುವ ಉದ್ದೇಶದಿಂದ ಬದನವಾಳು ಖಾದಿ ಕೇಂದ್ರವನ್ನು ಸಬರಮತಿಯ ಗಾಂಧಿ ಆಶ್ರಮದ ರೀತಿ ಅಭಿವೃದ್ಧಿ ಪಡಿಸಿ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ೧೦ ಕೋಟಿ ರೂ.ಯ ಯೋಜನೆಯೊಂದನ್ನು ತನ್ನ ಸರಕಾರದ ಮುಂದಿಟ್ಟಿದ್ದಾರೆ. ರಾಹುಲ್ ಗಾಂಧಿಯವರ ಭಾರತ್ ಜೋಡೊ ಖಾದಿಯ ಪುನಶ್ಚೇತನಕ್ಕೆ ಯಾವುದೇ ಹೊಸ ಪರ್ಯಾಯ ಮುಂದಿಡದ ಸಂದರ್ಭದಲ್ಲಿ ಗಾಂಧಿಯನ್ನು ಕೊಂದವನನ್ನು ಆರಾಧಿಸುವ ಬಿಜೆಪಿ, ರಾಜಕೀಯ ದುರುದ್ದೇಶದಿಂದಲೇ ಆಗಲಿ, ಬದನವಾಳುವಿನ ಖಾದಿ ಕೇಂದ್ರವನ್ನು ಗಾಂಧಿ ಆಶ್ರಮವನ್ನಾಗಿ ಬೆಳೆಸಿ ಉದ್ಯಮವಾಗಿಸುವುದು ಬದನವಾಳುವಿನ ಹತಾಶ ಜನರಿಗೆ ಉತ್ತಮವೆನಿಸಿದರೆ ಯಾರ ತಪ್ಪು?

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News