×
Ad

ಲೈಂಗಿಕ ಕಿರುಕುಳ ಪ್ರಕರಣ | ಜಾಮೀನು ಕೋರಿ ಮುರುಘಾ ಶ್ರೀ ಅರ್ಜಿ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2022-10-14 17:48 IST

ಬೆಂಗಳೂರು, ಅ.14: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಮುರುಘಾ ಶ್ರೀ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

ಜಾಮೀನು ಕೋರಿ ಮುರುಘಾ ಶ್ರೀಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ರಾಜ್ಯ ಸರಕಾರ, ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಅಧಿಕಾರಿ ಮತ್ತು ಅಪ್ರಾಪ್ತ ಮಕ್ಕಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಅ.28ಕ್ಕೆ ಮುಂದೂಡಿದೆ. 

ಮುರುಘಾ ಮಠದ ಹಾಸ್ಟೆಲ್‍ನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಶಿವಮೂರ್ತಿ ಶ್ರೀಯನ್ನು ಕಳೆದ ಸೆಪ್ಟಂಬರ್ 2ರಂದು ಚಿತ್ರದುರ್ಗದ ಪೊಲೀಸರು ಬಂಧಿಸಿದ್ದರು.

ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿಯೇ ಇದ್ದಾಗ ರಾತ್ರಿ ವೇಳೆ ಮಠಕ್ಕೆ ದಾಳಿ ನಡೆಸಿದ್ದ ಪೊಲೀಸರು ಪೊಕ್ಸೋ ಕಾಯ್ದೆಯಡಿ ಮುರುಘಾ ಶ್ರೀಯನ್ನು ಅರೆಸ್ಟ್ ಮಾಡಿದ್ದರು. ಮುರುಘಾ ಶ್ರೀ ವಿರುದ್ಧ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ದೂರು ದಾಖಲಾದ ಏಳು ದಿನದ ಬಳಿಕ ಮುರುಘಾ ಶ್ರೀಯನ್ನು ಪೊಲೀಸರು ಬಂಧಿಸಿದ್ದರು.

ಮೈಸೂರಿನ ಒಡನಾಡಿ ಸಂಸ್ಥೆಯ ಸಹಾಯ ಪಡೆದು ಮೈಸೂರಿನ ನಝರಾಬಾದ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯರು ದೂರು ದಾಖಲಿಸಿದ್ದರು. ಮುರುಘಾ ಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗುತ್ತಿದ್ದಂತೆ ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು.

ಇದನ್ನೂ ಓದಿ: ಖುತುಮತಿಯಾಗುವವರೆಗೆ ಮುರುಘಾಶ್ರೀಯಿಂದ ಲೈಂಗಿಕ ದೌರ್ಜನ್ಯ: ಸಂತ್ರಸ್ತ ಇಬ್ಬರು ಹೆಣ್ಣುಮಕ್ಕಳ ತಾಯಿ ದೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News