ಖುತುಮತಿಯಾಗುವವರೆಗೆ ಮುರುಘಾಶ್ರೀಯಿಂದ ಲೈಂಗಿಕ ದೌರ್ಜನ್ಯ: ಸಂತ್ರಸ್ತ ಇಬ್ಬರು ಹೆಣ್ಣುಮಕ್ಕಳ ತಾಯಿ ದೂರು
ಮುರುಘಾಶ್ರೀ ಸಹಿತ 7 ಮಂದಿ ವಿರುದ್ಧ ಎಫ್.ಐ.ಆರ್. ದಾಖಲು

ಮೈಸೂರು, ಅ.14: ಚಿತ್ರದುರ್ಗದ ಮುರುಘಾ ಮಠದಲ್ಲಿ ಓದುತ್ತಿದ್ದ ನನ್ನ ಇಬ್ಬರು ಹೆಣ್ಣುಮಕ್ಕಳು ಋತುಮತಿಯಾಗುವವರೆಗೂ ಮುರುಘಾ ಮಠದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಂತ್ರಸ್ತ ಬಾಲಕಿಯರ ತಾಯಿ ಮೈಸೂರಿನ ನಝರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಈವರೆಗೆ ಒಟ್ಟು ಏಳು ಮಂದಿಯ ವಿರುದ್ಧ ಎಫ್.ಐ.ಆರ್. ದಾಖಲಾದಂತಾಗಿದೆ.
ಆರು ವರ್ಷಗಳ ಹಿಂದೆ ಬಡತನದ ಕಾರಣ ನಾನು ಮಠಕ್ಕೆ ಬಂದು ಕೆಲಸಕ್ಕೆ ಸೇರಿಕೊಂಡೆ. ಈ ವೇಳೆ ನನ್ನ 3 ತರಗತಿ ಮತ್ತು 1 ತರಗತಿಯ ಇಬ್ಬರು ಹೆಣ್ಣುಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮುರುಘಾ ಮಠದಲ್ಲೇ ಸೇರಿಸಿ ಅವರನ್ನು ಹಾಸ್ಟೆಲ್ ನಲ್ಲೇ ಇರಿಸಲಾಗಿತ್ತು. ಸ್ವಾಮೀಜಿ 2019ರ ಕೋವಿಡ್ ಸಂದರ್ಭ ಮತ್ತು 2020ರಲ್ಲಿ ನನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದೇರೀತಿ ಮಠದ ಇನ್ನಿಬ್ಬರು ಹೆಣ್ಣು ಮಕ್ಕಳನ್ನು ಸಹ ದೌರ್ಜನ್ಯಕ್ಕೆ ಬಳಸಿಕೊಳ್ಳಲಾಗಿದೆ. ಒಟ್ಟು 15 ವರ್ಷದ ಇಬ್ಬರು, 14 ವರ್ಷದ ಒಬ್ಬರು, 12 ವರ್ಷದ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಮಹಿಳೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಮಧ್ಯಾಹ್ನದ ಸಮಯ ಸ್ವಾಮೀಜಿ ಬಳಿಗೆ ಮಕ್ಕಳನ್ನು ವಾರ್ಡನ್ ರಶ್ಮಿ, ಅಡುಗೆ ಸಹಾಯಕ ಕರಿಬಸವ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸ್ವಾಮೀಜಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ಮಕ್ಕಳು ತಿಳಿಸಿರುವುದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮುರುಘಾ ಶ್ರೀ ಸಹಿತ ವಾರ್ಡನ್ ರಶ್ಮಿ, ಬಸವಾದಿತ್ಯ, ಮೈಸೂರಿನ ಭಕ್ತರಾದ ಗಂಗಾಧರಯ್ಯ, ಪರಮಶಿವಯ್ಯ, ಅಡುಗೆ ಸಹಾಯಕ, ಬಸವಲಿಂಗಪ್ಪ, ಕರಿಬಸವ, ಸೇರಿದಂತರ ಏಳು ಮಂದಿ ವಿರುದ್ಧ ನಝರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ವಾಮೀಜಿ ರಾಜ್ಯದಲ್ಲೇ ಪ್ರಭಾವಿಯಾಗಿದ್ದರಿಂದ, ನನ್ನ ಇಬ್ಬರು ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿನವರು, ಅವರಿಗೆ ತೊಂದರೆ ಯಾದರೆ ಎಂಬ ಭಯದಿಂದ ನಾನು ಇದುವರೆಗೆ ಸುಮ್ಮನಿದ್ದೆ. ಇದೀಗ ನೊಂದ ಇಬ್ಬರು ಹೆಣ್ಣುಮಕ್ಕಳು ಒಡನಾಡಿ ಸಂಸ್ಥೆ ಮೂಲಕ ಮೈಸೂರಿನ ನಝರ್ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ನಾನು ಸಹ ಇದೀಗ ದೂರು ದಾಖಲಿಸಿದ್ದೇನೆ ಎಂದು ಆಕೆ ಹೇಳಿದ್ದಾರೆ.
ಇದನ್ನೂ ಓದಿ: ಮಂಡ್ಯ | 'ಐದು ರೂ. ವೈದ್ಯ' ಖ್ಯಾತಿಯ ಡಾ.ಶಂಕರೇಗೌಡರಿಗೆ 'ಇಂಡಿಯನ್ ಆಫ್ ದಿ ಇಯರ್' ಪ್ರಶಸ್ತಿ







